ಶಿರ್ವ: ಮೆಸ್ಕಾಂ ಇಲಾಖೆಯ ಶಿರ್ವ ವ್ಯಾಪ್ತಿಯಲ್ಲಿ ಕಳೆದ 7-8 ತಿಂಗಳಿನಿಂದ ನಿರಂತರವಾಗಿ ಅನಿಯಮಿತ ವಿದ್ಯುತ್‌ಕಡಿತ ಮತ್ತು ಶಿರ್ವ ಮೆಸ್ಕಾಂ ಕಚೇರಿಯಲ್ಲಿನ ಸಿಬಂದಿ ಕೊರತೆ ಸಮಸ್ಯೆಯನ್ನು ಪ್ರತಿಭಟಿಸಿ ಜು.16 ರಂದು ಬೆಳಿಗ್ಗೆ ಶಿರ್ವ ಮೆಸ್ಕಾಂ ಕಚೇರಿಯ ಮುಂದೆ ಬಳಕ ದಾರರ ಬೃಹತ್ ಪ್ರತಿಭಟನೆ ನಡೆಯಿತು.
ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅನಿಯಮಿತವಾಗಿ ಹಗಲು ರಾತ್ರಿ ವಿದ್ಯುತ್ ಕಡಿತವಾಗುತ್ತಿರುವುದರಿಂದ ಬಳಕೆದಾರರು ರೋಸಿ ಹೋಗಿದ್ದು ,ದಿನದ 24 ಗಂಟೆ ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡಬೇಕು. ಮೆಸ್ಕಾಂ ಕಚೇರಿಯಲ್ಲಿ 35 ಸಿಬಂದಿ ಇರುವಲ್ಲಿ ಕೇವಲ 13 ಸಿಬಂದಿ ಕಾರ್ಯನಿರ್ವಹಿಸುತ್ತಿದ್ದು ಕನಿಷ್ಠ 25 ಸಿಬಂದಿ ನೇಮಕ ಮಾಡಬೇಕು. 50 ವರ್ಷ ಹಳೆಯ ಜೋತಾಡುತ್ತಿರುವ ತಂತಿಗಳನ್ನು ಬದಲಾಯಿಸಲು ಕೃಮ ಕೈಗೊಳ್ಳಬೇಕು. ಮೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಮರಗಿಡಗಳ ನಡುವೆ ತಂತಿಗಳು ಹಾದುಹೋಗುತ್ತಿದ್ದು ಮರದ ಕೊಂಬೆಗಳನ್ನು ಕಡಿಯುವ ಬಗ್ಗೆ ಕ್ರಮ ಕೈಗೋಳ್ಳಬೇಕು, ಪದೇಪದೇ ತಲೆದೋರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು ಮೊದಲಾದ ಬೇಡಿಕೆಗಳ ಮನವಿಯನ್ನು ಉಡುಪಿ ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನ ಕುಮಾರ್ ಅವರಿಗೆ ಸಲ್ಲಿಸಿದರು.
ಬಳಕೆದಾರರ ಪರವಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಮಾತನಾಡಿ ಬಳಕೆದಾರರು ಭೀಕರ ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದನ್ನು ಪರಿಹರಿಸುವ ವ್ಯವಸ್ಥೆಯಾಗಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಮಹಿಳಾ ಬಳಕೆದಾರರ ಪರವಾಗಿ ಮಾಜಿ ತಾ.ಪಂ. ಸದಸ್ಯೆ ಗೀತಾ ವಾಗ್ಲೆ ಮಾತನಾಡಿ, ವಿದ್ಯುತ್ ಕಡಿತದ ನೇರ ಪರಿಣಾಮ ಮಹಿಳೆಯರಿಗಾಗುತ್ತಿದ್ದು,ಮಕ್ಕಳು ಮನೆಮಂದಿಯನ್ನು ಸುಧಾರಿಸಲು ಕಷ್ಟವಾಗುತ್ತಿದೆ.ಯಾರ ಮಾತಿಗೂ ಸ್ಪಂದನೆ ನೀಡದ ಅಧಿಕಾರಿಗಳು ಮುಂದೆ ಇದೇ ರೀತಿ ವಿದ್ಯುತ್ ಸಮಸ್ಯೆಯಿಂದ ಗೋಳಾಡಿಸಿದರೆ ಮನೆಮಂದಿ ಮಕ್ಕಳೊಂದಿಗೆ ಬಂದು ಮಹಿಳೆಯರು ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಮನವಿ ಸ್ವೀಕರಿಸಿದ ಉಡುಪಿ ಮೆಸ್ಕಾಂನ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಸನ್ನ ಕುಮಾರ್ ಮಾತನಾಡಿ ಶಿರ್ವ ಮೆಸ್ಕಾಂ ವ್ಯಾಪ್ತಿ ಮರಗಿಡಗಳ ಕಾಡು ಪ್ರದೇಶವಾಗಿದ್ದು,ಗಾಳಿ ಮಳೆ ಬಂದಾಗ ಮರದ ಕೊಂಬೆಗಳು ತಂತಿಯ ಮೇಲೆ ಬಿದ್ದಾಗ ಅಡಚಣೆ ಉಂಟಾಗುತ್ತದೆ.ಸಿಬಂದಿ ಕೊರತೆಯಿಂದ ಸಮಸ್ಯೆ ಉಂಟಾಗಿದ್ದು ಹೆಚ್ಚುವರಿಯಾಗಿ 2 ಸಿಬಂದಿ ನೇಮಕ ಮಾಡಿದ್ದು ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು. ಶಿರ್ವ ಗ್ರಾ.ಪಂ. ವ್ಯಾಪ್ತಿಗೆ 11 ಕೆವಿ ಶಿರ್ವ, 11 ಕೆವಿ ಮುದರಂಗಡಿ ಮತ್ತು 11 ಕೆವಿ ಬಂಟಕಲ್ಲು ಸೇರಿ 3 ಫೀಡರ್‌ಗಳು ಬರುತಿದ್ದು, ಹೆಚ್ಚುವರಿಯಾಗಿ 11 ಕೆವಿ ಮಟ್ಟಾರು ಫೀಡರ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಎರಡು ತಿಂಗಳಲ್ಲಿ ಬರಲಿದೆ. ಬೆಳಪು 110 ಕೆವಿ ಪವರ್ ಸ್ಟೇಷನ್ ಆದ ಬಳಿಕ ಶಿರ್ವಕ್ಕೆ ಮುಂದಿನ 6 ತಿಂಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಯಾಗಲಿದೆ. ತಾಂತ್ರಿಕ ತೊಂದರೆಯಿರುವ ಕಂಡಕ್ಟರ್ ಮತ್ತು ಇನ್ಸುಲೇಟರ್‌ಗಳನ್ನು ಬದಲಾಯಿಸಿ ಮುಂದಿನ 15 ದಿನಗಳಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ಕಾಪು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್ ಕುಮಾರ್,ಶಿರ್ವ ಸೆಕ್ಷನ್ ಆಫೀಸರ್ ಕೃಷ್ಣ, ಉಪಸ್ಥಿತರದ್ದರು.
ಪ್ರತಿಭಟನೆಯಲ್ಲಿ ಶಿರ್ವ ಗ್ರಾ.ಪಂ. ಸದಸ್ಯರಾದ ರತನ್ ಶೆಟ್ಟಿ,ಡೋಲ್ಪಿ ಕ್ಯಾಸ್ತಲಿನೋ, ಶ್ರೀನಿವಾಸ ಶೆಣೈ,ವಿಲ್ಸನ್ ರೊಡ್ರಿಗಸ್,ಸವಿತಾ, ಮಾಜಿ ಗ್ರಾ.ಪಂ. ಆಧ್ಯಕೆ ವಾರಿಜಾ ಪೂಜಾರ್ತಿ, ನಿವೃತ್ತ ಉಪನ್ಯಾಸಕಿ ಶಾರದಾ ಎಂ., ಉದ್ಯಮಿ ಸುಧೀರ್ ಶೆಟ್ಟಿ, ರಾಜೇಶ್ ನಾಯ್ಕ, ಗಿರಿಧರ ಪ್ರಭು, ವೀರೇಂದ್ರ ಶೆಟ್ಟಿ, ವೀರೆಂದ್ರ ಪಾಟ್ಕರ್, ಬೆಳ್ಳೆ ಗ್ರಾ.ಪಂ. ಸದಸ್ಯ ಶಶಿಧರ ವಾಗ್ಲೆ, ಸ್ಟೀಫನ್ ಲೋಬೋ, ಆಶ್ಪಾಕ್ ಅಹಮದ್,ಹಸನ್ ಇಬ್ರಾಹಿಂ,ಕೋಡು ಸದಾನಂದ ಶೆಟ್ಟಿ,ನವೀನ್ ಶೆಟ್ಟಿ ಗಂಗೆಜಾರು,ಶಿರ್ವ ಕಾರು ಮತ್ತು ಟೆಂಪೋ ಚಾಲಕರ ಮಾಲಕರ ಸಂಘದ ಸದಸ್ಯರು, ರಿಕ್ಷಾ ಚಾಲಕರ ಮಾಲಕರ ಸಂಘದ ಸದಸ್ಯರು, ಶಿರ್ವ ಟೈಲರ್ ಎಸೋಸಿಯೇಶನ್ ನ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು,ವಿದ್ಯುತ್ ಬಳಕೆದಾರರು ಭಾಗವಹಿಸಿದ್ದರು.
-ಸತೀಶ್ಚಂದ್ರ ಶೆಟ್ಟಿ ಶಿರ್ವ