ಸಾಗರ: ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವರದಹಳ್ಳಿ ರಸ್ತೆಯ ಹೆಲಿಪ್ಯಾಡ್ ಪಕ್ಕದ ವಿದ್ಯಾರ್ಥಿ ನಿಲಯಗಳಲ್ಲಿ ಹೊರರಾಜ್ಯದಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮುಂದಾಗಿರುವುದನ್ನು ಖಂಡಿಸಿ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ಹಾಸ್ಟೆಲ್‌ಗಳಿಗೆ ಕಾಂಪೌಂಡ್ ವ್ಯವಸ್ಥೆ ಇಲ್ಲದಿರುವುದರಿಂದ ಕ್ವಾರಂಟೈನ್ ಆದವರ ಜೊತೆ ಹೊರಗಡೆಯವರು ಭೇಟಿಗೆ ಬರುವ ಅಪಾಯಗಳಿವೆ. ಹಾಸ್ಟೆಲ್ ಒಳಗೆ ಸಾಮೂಹಿಕ ಶೌಚಾಲಯಗಳು ಮಾತ್ರ ಇರುವುದು ಕೂಡ ಅಪಾಯಕಾರಿ. ಈಗಾಗಲೇ ಮಂಗನ ಕಾಯಿಲೆಯ ಹಿನ್ನೆಲೆಯಲ್ಲಿ ಆತಂಕಿತರಾಗಿರುವ ಈ ಭಾಗದ ಜನರಿಗೆ ಇನ್ನೊಂದು ಭಯಾನಕ ಕಾಯಿಲೆಯ ಹಿನ್ನೆಲೆಯ ಜನರನ್ನು ತರಬಾರದು ಎಂದು ಜನರು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ತಾಲೂಕು ವೈದ್ಯಾ ಧಿಕಾರಿ ಡಾ| ಮೋಹನ್ ಅವರಲ್ಲಿ ಅಹವಾಲು ಸಲ್ಲಿಸಿದರು.
ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯ್ತಿ ಅಧ್ಯಕ್ಷ ಬಿ.ಎಚ್.ಮಲ್ಲಿಕಾರ್ಜುನ ಹಕ್ರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಗ್ರಾಮೀಣ ಭಾಗವನ್ನು ಕೋವಿಡ್ ಸೋಂಕು ತಗುಲದಂತೆ ನೋಡಿಕೊಳ್ಳುವ ಮಾತನ್ನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಗಳಲ್ಲಿ ಸಂಪೂರ್ಣ ವ್ಯವಸ್ಥೆಯಿರುವ ಲಾಡ್ಜ್ಗಳನ್ನು ಕ್ವಾರಂಟೈನ್ ವ್ಯವಸ್ಥೆಗೆ ಆದ್ಯತೆಯ ಮೇಲೆ ಪರಿಗಣಿಸಬೇಕು. ಹಾಸ್ಟೆಲ್‌ನಂತಹ ಸರ್ಕಾರಿ ವ್ಯವಸ್ಥೆಗಳಲ್ಲಿ ಸಾಮೂಹಿಕ ಶೌಚಾಲಯ, ಖಾಸಗಿತನದ ಕೊರತೆಯಿಂದ ರೋಗ ಹೆಚ್ಚು ಜನರಿಗೆ ಅಂಟುವ ಸಾಧ್ಯತೆ ಇದೆ ಎಂಬುದರತ್ತ ಗಮನ ಸೆಳೆದರು.
ಜನರ ದೂರುಗಳನ್ನು ಆಲಿಸಿದ ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ಹೊರರಾಜ್ಯದಿಂದ ಬಂದಿರುವ ಸಾಗರ ತಾಲೂಕಿನ ಜನರನ್ನು ಮಾತ್ರ ಇಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಬೇಕಾದ ಅನುಕೂಲತೆಯನ್ನು ಕಲ್ಪಿಸಲಾಗುತ್ತದೆ. ಸುರಕ್ಷತೆಯ ಬಗ್ಗೆ ಸಂಪೂರ್ಣ ಎಚ್ಚರಿಕೆ ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ. ನಮ್ಮದೇ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಜವಾಬ್ದಾರಿಯುತ ಕ್ವಾರಂಟೈನ್ ಮಾಡುವುದು ನಮ್ಮ ಹಿತಕ್ಕೂ ಅನುಕೂಲ. ಕೇರಳದಲ್ಲಿ ಯಶಸ್ವಿಯಾದ ಕ್ರಮವನ್ನು ನಾವು ಅನುಸರಿಸುತ್ತಿದ್ದೇವೆ ಎಂದು ಸಮಾಧಾನ ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ಸುಭದ್ರ ಗಣಪತಿ, ಸದಸ್ಯ ಪ್ರಕಾಶ್ ಸೆಟ್ಟಿಸರ, ಗುತ್ತಿಗೆದಾರ ಕಂಟ್ರಾಕ್ಟರ್ ಚಂದ್ರಪ್ಪ, ಯುವ ಕಾಂಗ್ರೆಸ್‌ನ ಸುಧಾಕರ್ ಕುಗ್ವೆ, ಚಂದ್ರ ಕರ್ಕಿಕೊಪ್ಪ, ಪ್ರವೀಣ್, ಹಿತಕರ್ ಜೈನ್ ಇನ್ನಿತರರು ಇದ್ದರು.