Advertisement

ಕಾಲುದಾರಿಯಲ್ಲಿ ರಸ್ತೆ ನಿರ್ಮಾಣಕ್ಕೆ ಸ್ಥಳೀಯರ ಆಕ್ಷೇಪ

11:19 PM Mar 25, 2021 | Team Udayavani |

ಉಡುಪಿ: ನಗರದಲ್ಲಿ ಲೋಕೋಪಯೋಗಿ ಇಲಾಖೆಯು (ಪಿಡಬ್ಲ್ಯುಡಿ) ಸಗ್ರಿ ವಾರ್ಡ್‌ನ ಹಯ ಗ್ರೀವ ನಗರ- ಶೀಂಬ್ರಕ್ಕೆ ಸಂಪರ್ಕಿಸುವ ರಸ್ತೆ ವಿಸ್ತರಿಸುವ ನೆಪದಲ್ಲಿ ಪಾದಚಾರಿ ಮಾರ್ಗವನ್ನು ಬಳಸಿಕೊಂಡು ಕಾಮಗಾರಿ ನಡೆಸುತ್ತಿರುವ ಕುರಿತು ಸ್ಥಳೀಯರು ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ.

Advertisement

ಇಲಾಖೆಯು 5 ಕೋ.ರೂ. ವೆಚ್ಚದಲ್ಲಿ ಇಂದ್ರಾಳಿ-ಶೀಂಬ್ರದ ವರೆಗಿನ 2.5 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿದೆ. ಜನವಸತಿ ಇರುವ ಪ್ರದೇಶದ ಮೂಲಕ ಈ ರಸ್ತೆ ಹಾದು ಹೋಗುತ್ತಿದ್ದು, ಮೊದಲ ಹಂತವಾಗಿ ಸುಮಾರು 500 ಮೀ. ರಸ್ತೆಯನ್ನು ಅಗೆದು ಜಲ್ಲಿ ಕಲ್ಲುಗಳನ್ನು ಹಾಕಲಾಗುತ್ತಿದೆ. ಡಾಮರು ಹಾಕಲು ಅಗತ್ಯವಿರುವ ಸಿದ್ಧತೆ ನಡೆಯುತ್ತಿದೆ.

ಕಾಲುದಾರಿ ನಿರ್ಮಿಸಲು ಆಗ್ರಹ :

ಹಿಂದೆ ಈ ರಸ್ತೆಯು 3.5 ಅಡಿ ಅಗಲವಿದ್ದು, ಪಾದಚಾರಿಗಳ ಓಡಾಟಕ್ಕೆ ಎರಡು ಕಡೆಗಳಲ್ಲಿ ಮಣ್ಣಿನ ಕಾಲುದಾರಿ ಇತ್ತು. ಇದೀಗ ಹೊಸ ರಸ್ತೆ ಐದೂವರೆ ಅಡಿಗೆ ವಿಸ್ತರಣೆಯಾಗುತ್ತಿದೆ. ಸ್ಥಳದ ಕೊರತೆಯಿಂದ ಪಿಡಬ್ಲ್ಯುಡಿಯು ಕಾಲುದಾರಿಯನ್ನು ಬಳಸಿ ರಸ್ತೆಯನ್ನು ನಿರ್ಮಿಸಲು ಮುಂದಾಗಿದೆ. ಮುಂದಿನ ದಿನದಲ್ಲಿ ಈ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾದಂತೆ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ನಡೆದಾಡಲು ಅನುಕೂಲವಾಗುವಂತೆ ಕಾಲುದಾರಿ ನಿರ್ಮಿಸಲು  ಆಗ್ರಹಿಸಿದ್ದಾರೆ.

ಮುಂದೆ ಹಯಗ್ರೀವ ನಗರದ ಮೂಲಕ ಬಸ್‌, ಕಾರು, ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಾಗುವ ಸಾಧ್ಯತೆ ಇದೆ. ಜನವಸತಿ ಪ್ರದೇಶದಲ್ಲಿ ಕಾಲು ದಾರಿಯನ್ನು ನಿರ್ಮಿಸಿದಾಗ ಮಾತ್ರ ಅಪಘಾತಗಳನ್ನು ತಡೆಯಲು ಸಾಧ್ಯ. ಜತೆಗೆ ಮಳೆ ನೀರಿನ ಒಳಚರಂಡಿಯನ್ನು ವ್ಯವಸ್ಥಿತವಾಗಿ ಅಳವಡಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

Advertisement

ಸಮೀಪದ ದಾರಿ :

ಉಡುಪಿಯಿಂದ ಮಣಿಪಾಲವನ್ನು ಸಂಪರ್ಕಿಸದೆ ನೇರವಾಗಿ ಪೆರಂಪಳ್ಳಿ, ಶೀಂಬ್ರ, ಕೊಳಲಗಿರಿಯನ್ನು ತಲುಪ ಬಹುದು. ಹಯಗ್ರೀವ ನಗರದಿಂದ ಶೀಂಬ್ರ ಕೇವಲ 2 ಕಿ.ಮೀ. ದೂರದಲ್ಲಿದೆ. ಇಂದ್ರಾಳಿ- ಮಣಿಪಾಲ ಮಾರ್ಗವಾಗಿ ಶೀಂಬ್ರಕ್ಕೆ ಹೋಗಲು ಸುಮಾರು 6ರಿಂದ 7 ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಕಡಿಮೆ ಅವಧಿಯಲ್ಲಿ ಮಣಿಪಾಲಕ್ಕೆ ಹೋಗದೆ ಹಯಗ್ರೀವ ನಗರದ ಮೂಲಕ ಶೀಂಬ್ರಕ್ಕೆ ತಲುಪ ಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next