ತುಮಕೂರು: ಲೋಕ ಸಮರ ಮುಗಿಯಿತು. ಫಲಿತಾಂಶವೂ ಬಂದಿದ್ದು, ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿ.ಎಸ್.ಬಸವರಾಜ್ ಗೆಲುವಿನ ನಗೆ ಬೀರಿದ್ದಾರೆ. ಈಗ ಸ್ಥಳೀಯ ಸಮರದ ಕಾವು ಜಿಲ್ಲೆಯಲ್ಲಿ ಆರಂಭಗೊಂಡಿದೆ.
ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೆ ನಡೆಯುವ ಮೇ 29ರಂದು ಚುನಾವಣೆ ನಡೆಯುವ ವೇಳೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯ 22ನೇ ವಾರ್ಡ್‌ಗೆ ಉಪಚುನಾವಣೆ ನಡೆಯಲ್ಲಿದೆ. ಈ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮೂರು ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತಲೀನರಾಗಿದ್ದಾರೆ.
ಶೈಕ್ಷಣಿಕ ನಗರದಲ್ಲಿ ಮತ್ತೂಂದು ಚುನಾವಣೆ ನಡೆಯಲಿದ್ದು, ಮಾಜಿ ಮೇಯರ್ ಎಚ್.ರವಿಕುಮಾರ್ ಹತ್ಯೆಯಾಗಿ ತೆರವಾಗಿದ್ದ 22ನೇ ವಾರ್ಡ್‌ಗೆ ಮೇ 29ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ಮುಂದಾಗಿದ್ದಾರೆ.
ಎಲ್ಲ ಬಡಾವಣೆಗಳಲ್ಲಿ ಮತಯಾಚನೆ: ಬಿಜೆಪಿಯಿಂದ ಸಂದೀಪ್ ಗೌಡ, ಕಾಂಗ್ರೆಸ್‌ನಿಂದ ರುದ್ರೇಶ್, ಜೆಡಿಎಸ್‌ನಿಂದ ಶ್ರೀನಿವಾಸ್ ಕಣಕ್ಕೆ ಇಳಿದಿದ್ದು, ಇವರ ಜೊತೆ ಬಿಎಸ್‌ಪಿಯ ರೇಣುಕಾ ಪ್ರಸಾದ್ ಸಹ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಿಂದ ಈ ಹಿಂದೆ ನಡೆದ ಪಾಲಿಕೆ ಚುನಾವಣೆಯಲ್ಲಿ ಇದೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಸಂದೀಪಗೌಡಗೆ ಬಿಜೆಪಿಯಿಂದ ಮತ್ತೆ ಟಿಕೆಟ್ ನೀಡಿದೆ. ಸಂದೀಪ್‌ಗೌಡ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲೇ ಬೇಕು ಎಂದು ವಾರ್ಡ್‌ನ ಎಲ್ಲ ಬಡಾವಣೆಗಳಲ್ಲಿ ಮತಯಾಚನೆ ಮಾಡುತ್ತಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಈ ವಾರ್ಡ್‌ನಿಂದ ಸ್ಪರ್ಧಿಸಲು ಹಲವು ಅಭ್ಯರ್ಥಿಗಳ ಪೈಪೋಟಿ ಇದ್ದರೂ ಅಭ್ಯರ್ಥಿ ಶ್ರೀನಿವಾಸ್‌ಗೆ ಪಕ್ಷ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಶ್ರೀನಿವಾಸ್ ಮನೆ ಮನೆಗೆ ತೆರೆಳಿ ಮತಯಾಚನೆಯಲ್ಲಿ ಮುಂದಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರುದ್ರೇಶ್ ಅವರು ವಾರ್ಡ್‌ನ ವಿವಿಧೆಡೆ ಪ್ರಚಾರದಲ್ಲಿ ತೊಡಗಿದ್ದಾರೆ. ಇವರಿಗೆ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣರ ನೇತೃತ್ವದಲ್ಲಿ ನೂರಾರು ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸಿ, ಮನೆ ಮನೆಗೆ ತೆರಳಿ ಮತಯಾಚಿಸಿದರು.