Advertisement
ಲೋಕಲ್ ರೈಲಿನಲ್ಲಿ ಕಥೆಗಳು ಮಾತ್ರವಲ್ಲ , ಮಧುರ ಕಾವ್ಯಗಳೂ ಹುಟ್ಟಿಕೊಳ್ಳುತ್ತವೆ. ಸಾಮಾನ್ಯವಾಗಿ ರೈಲಿನಲ್ಲಿ ಮೂರು ಬೋಗಿಗಳು ಮಾತ್ರ ಮಹಿಳೆಯರಿಗೆ ಮೀಸಲಾಗಿರುತ್ತವೆ. ಈ ಬೋಗಿಯ ಪಕ್ಕದಲ್ಲಿರುವ ಪುರುಷರ ಬೋಗಿ ಯಾವತ್ತೂ ಖಾಲಿ ಇರುವುದಿಲ್ಲ. ಮಹಿಳೆಯರ ಮತ್ತು ಪುರುಷರ ಬೋಗಿಗಳ ನಡುವೆ ಅಡ್ಡಲಾಗಿರುವ ತಡೆಗೋಡೆ ಸಂಪೂರ್ಣವಾಗಿ ಮುಚ್ಚಿರುವುದಿಲ್ಲ. ಹಳೆಯ ರೈಲಿನಲ್ಲಿ ಸರಿಗೆ ಮುಚ್ಚಿದ ಸಣ್ಣ ಕಿಟಕಿಯಷ್ಟು ಭಾಗ ಮಾತ್ರ ತೆರೆದಿರುತ್ತಿತ್ತು. ಆದರೆ, ಈಗಿನ ಹೊಸ ರೈಲಿನಲ್ಲಿ ಈಚೆಯವರು ಆಚೆಯವರಿಗೆ ಕಾಣಿಸುವಂತೆ ಅರ್ಧಭಾಗವೇ ತೆರೆದಿರುತ್ತದೆ. ಈ ಭಾಗದಲ್ಲಿ ಅಡªಲಾಗಿ ದಪ್ಪಗಿನ ಕಂಬಿಗಳ ಜೋಡಣೆಯಿರುತ್ತದೆ. ಲೋಕಲ್ ರೈಲು ಸಿಎಸ್‌ಟಿ ಕಡೆಗೆ ಚಲಿಸುತ್ತಿದ್ದು, ಮಹಿಳಾ ಬೋಗಿ ಮುಂದಿದ್ದರೆ ಪುರುಷರೆಲ್ಲ ಆ ದಿಕ್ಕಿಗೆ ತಿರುಗಿ ನಿಂತಿರುತ್ತಾರೆ. ಅಂತೆಯೇ ರೈಲು ತಿರುಗಿ ಬರುವಾಗ ಕೂಡ ಪುರುಷರು ನಿಲ್ಲುವ ದಿಕ್ಕು ಮಹಿಳಾ ಬೋಗಿಯನ್ನು ಅವಲಂಬಿಸಿರುತ್ತದೆ. ಕೆಲವರು ಹುಡುಗಿಯರನ್ನು ಪಟಾಯಿಸಲೆಂದೋ ಪ್ರೇಮಿಕೆಯನ್ನು ನೋಡಲೆಂದೋ ಅಥವಾ ಇನ್ನು ಕೆಲವರು ಅದ್ಯಾವ ಕಾರಣವಿಲ್ಲದೆಯೂ ಮಹಿಳಾ ಬೋಗಿಯ ಪಕ್ಕದ ಬೋಗಿಯನ್ನೇರುತ್ತಾರೆ.
Related Articles
ನಿತ್ಯ ರೈಲು ಪ್ರಯಾಣದ ಅಭ್ಯಾಸ ಇಲ್ಲದವರು, ಸಿಗುವ ಒಂದಿಷ್ಟು ಸಮಯದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಪ್ರೇಮಿಗಳು, ದೊಡ್ಡ ಬ್ಯಾಗು ಮತ್ತು ಸಣ್ಣ ಪ್ರಾಯದ ಮಗುವಿದ್ದರೆ ತನ್ನ ಪತಿಯನ್ನು ಹಿಂಬಾಲಿ ಸುವ ಮಹಿಳೆಯರು, ಬೋಗಿ ಖಾಲಿಯಿರುವುದು ಕಂಡುಬಂದಲ್ಲಿ, ಪುರುಷರ ಬೋಗಿಯನ್ನೇರುವುದುಂಟು. ಪ್ರೇಮಿಗಳು ಅಥವಾ ಪತಿಯಂದಿರು ಮಹಿಳೆಯರ ಜೊತೆಗಿದ್ದರೆ ಅವರನ್ನು ಒಂದು ಬದಿಯಲ್ಲಿ ನಿಲ್ಲಿಸಿ ತಮ್ಮ ತೋಳಿನ ಕಾವಲಿನಲ್ಲಿ ರಕ್ಷಣೆ ನೀಡುತ್ತಾರೆ. ವಯಸ್ಸಾದವರು, ಗರ್ಭಿಣಿಯರು ಅಥವಾ ಎಳೆ ಮಗುವನ್ನು ಕಂಕುಳಿನಲ್ಲಿರಿಸಿಕೊಂಡು ಬಂದ ಮಹಿಳೆಗೆ ಪುರುಷರೇ ಕರೆದು ಸೀಟು ಬಿಟ್ಟುಕೊಡುತ್ತಾರೆ. ಪೀಕ್ ಅವರ್ಸ್‌ನಲ್ಲಿ ಹುಡುಗರು ತಮ್ಮ ಪ್ರೇಮಿಕೆಯರನ್ನು ಕರೆದುಕೊಂಡು ರೈಲು ಹತ್ತಿದರೆ ಎಲ್ಲರೂ ಸೇರಿ ಅಸಮಾಧಾನ ವ್ಯಕ್ತಪಡಿಸುವುದುಂಟು. ಯಾಕೆಂದರೆ, ಅವರಿಂದಾಗಿ ಇಳಿಯುವಾಗ ಹತ್ತುವಾಗ ಎಲ್ಲರಿಗೂ ಅಡಚಣೆಯಗುತ್ತದೆ !
Advertisement
ಮಹಿಳೆ ಪುರುಷರ ಬೋಗಿಯೇರಿದಳೆಂದರೆ ಎಲ್ಲರ ದೃಷ್ಟಿಯೂ ಅವಳ ಮೇಲಿರುತ್ತದೆ. ಅದು ಸಹಜವೇ. ಕೆಲವರಂತೂ ತದೇಕ ಚಿತ್ತದಿಂದ ನೋಡುತ್ತಲೇ ಇರುತ್ತಾರೆ. ಯಾರಾದರೂ ಏನಾದರೂ ಅನ್ನುವರೆಂಬ ಪರಿವೆ ಅವರಿಗಿರುವುದಿಲ್ಲ. ಇನ್ನು ಕೆಲವರು ಕಣ್ಣು ತಪ್ಪಿಸಿ ನೋಡುವುದುಂಟು. ಎದುರು ಬದುರಾಗಿ ಕುಳಿತಿದ್ದರೆ, ಪಕ್ಕದಲ್ಲಿ ಹುಡುಗಿ ನಿಂತಿದ್ದರೆ ಮೊಬೈಲ್ ಸ್ಕ್ರೀನ್‌ನಲ್ಲಿ ಕೆಮರಾ ಆನ್ ಮಾಡಿ ಆ ಮೂಲಕ ನೋಡುವವರೂ ಅದೆಷ್ಟೋ ಮಂದಿ ಇದ್ದಾರೆ. ಕೆಲವು ತಿಂಗಳ ಹಿಂದೆ ಅಂಥ ಒಂದು ವೀಡಿಯೋ ವಾಟ್ಸಾಪ್ ಮತ್ತು ಫೇಸುºಕ್‌ನಲ್ಲಿ ವೈರಲ್ ಆಗಿತ್ತು. ಬಾಗಿಲ ಬಳಿ ನಿಂತು, ಇಯರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು, ಬಾಗಿಲಿನ ಒತ್ತಿನಲ್ಲಿರುವ ಸರಳನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಒಬ್ಬಳು ಕಾಲೇಜು ಹುಡುಗಿ ನಿಂತಿದ್ದಳು. ರೈಲಿನ ವೇಗಕ್ಕೆ ಜೋರಾಗಿ ಗಾಳಿ ಬೀಸುತ್ತಿತ್ತು. ಅವಳು ಹಾರುವ ಮುಂಗುರಳನ್ನು ಇನ್ನೊಂದು ಕೈಯಲ್ಲಿ ಆಗಾಗ ಸರಿ ಮಾಡುತ್ತಿದ್ದಳು. ಟೀಶರ್ಟಿನ ಮೇಲೆ ತೊಟ್ಟಿರುವ ಜಾಕೆಟ್ ಬೇಡವೆನಿಸಿತೋ ಏನೋ! ಅದನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡಳು. ಅಷ್ಟರಲ್ಲಿ ಸರಳನ್ನು ಹಿಡಿದಿದ್ದ ಕೈ ತಪ್ಪಿ$ರೈಲಿನಿಂದ ಕೆಳಗೆ ಜಾರಿದಳು. ಅವಳನ್ನೇ ಗಮನಿಸುತ್ತಿದ್ದ ಹುಡುಗನೊಬ್ಬ ತಕ್ಷಣ ಒಂದು ಕೈಯನ್ನು ಹಿಡಿದುಬಿಟ್ಟ. ಒಂದು ಕೈ ಬಿಟ್ಟರೆ ಅವಳ ಇಡೀ ದೇಹ ಕೆಳಗಡೆ ನೇತಾಡುತ್ತಿತ್ತು. ಅಲ್ಲೇ ನಿಂತಿದ್ದ ಮತ್ತೋರ್ವ ವ್ಯಕ್ತಿ ಸಹಾಯಕ್ಕೆ ಬಂದರು. ರೈಲು ಚಲಿಸುತ್ತಿದ್ದಂತೆಯೇ ಅವಳನ್ನು ಮೇಲಕ್ಕೆತ್ತಿದರು. ಕೂದಳೆಳೆಯ ಅಂತರದಲ್ಲಿ ಅಂದು ಅವಳು ಪಾರಾಗಿದ್ದಳು. ಯಾರೋ ಒಬ್ಬರು ಸುಮಾರು ಐದು ನಿಮಿಷದಿಂದ ಅವಳ ಎಲ್ಲ ಚಲನವಲನಗಳನ್ನು ಸೆರೆ ಹಿಡಿದ ವೀಡಿಯೋ ಮರುಕ್ಷಣವೇ ಎಲ್ಲ ಕಡೆ ವೈರಲ್ ಆಗಿತ್ತು. ಟಿ.ವಿ, ನ್ಯೂಸ್ ಪೇಪರಿನಲ್ಲಿಯೂ ಸುದ್ದಿ ಪ್ರಕಟವಾಗಿತ್ತು. ಮಾಧ್ಯಮಗಳು ಅವಳ ಸಂದರ್ಶನವನ್ನೂ ನಡೆಸಿದ್ದವು. ಮೂರನೆಯ ಬಾರಿ ಇಂಥ ಕಂಟಕದಿಂದ ಪಾರಾದೆ ಅನ್ನುವುದರ ಜೊತೆಗೆ ಈ ದೃಶ್ಯವನ್ನು ಸೆರೆಹಿಡಿದವರ ಕುರಿತು ಕಟುವಾಗಿ ಹೇಳಿಕೆ ನೀಡಿದ್ದಳು.
ಅವರು ಮೊಬೈಲ್‌ನಲ್ಲಿಯೇ ಮಗ್ನರಾಗಿದ್ದಾರೆ. ನಮ್ಮತ್ತ ಗಮನವಿಲ್ಲ ಎಂದು ಭಾವಿಸಿದರೆ ಅದು ನಮ್ಮ ಭ್ರಮೆಯಷ್ಟೆ. ನಮ್ಮ ಅರಿವಿಗೆ ಬಾರದಿರುವ ಹಾಗೆ ಸೆರೆಹಿಡಿದ ಇಂಥ ಬೇರೆ ಬೇರೆ ದೃಶ್ಯಗಳು ಅಂತರ್ಜಾಲದಲ್ಲಿ ಹರಿದಾಡುತ್ತಿರುತ್ತವೆ ಎಂಬುದಕ್ಕೆ ರೈಲಿನಲ್ಲಿ ಜಾರಿ ಬಿದ್ದ ಹುಡುಗಿಯ ವೀಡಿಯೋ ವೈರಲ್ ಆದ ಒಂದು ಉದಾಹರಣೆ ಸಾಕು. ಸಹ ಪ್ರಯಾಣಿಕರನ್ನು ತನ್ನ ಮನೆಯವರಂತೆ ತಿಳಿದು ರಕ್ಷಣೆ ಮಾಡುವ ಮಾನವೀಯ ಮನಸ್ಸುಗಳ ಜೊತೆಗೆ, ಕದ್ದು ವೀಡಿಯೋ ಮಾಡಿ ಮಜಾ ಉಡಾಯಿಸುವ ಸ್ವಭಾವದವರೂ ಇರುತ್ತಾರೆ.
ಅನಿತಾ ಪಿ. ತಾಕೊಡೆ