Advertisement
ಮಹಿಳೆಯರ ಪಾಲ್ಗೊಳ್ಳುವಿಕೆಯಿಲ್ಲದ ಕ್ಷೇತ್ರವೇ ಇಲ್ಲ ಎಂಬ ನಂಬಿಕೆ ದೃಢವಾಗಿದ್ದು ಮುಂಬೈ ನಗರಿಗೆ ಬಂದ ಮೇಲೆ. ಇಲ್ಲಿ ಮಹಿಳೆಯರ ಕಾರ್ಯಕ್ರಮವೆಂದರೆ, ಆಸನ ಗಳೆಲ್ಲ ಭರ್ತಿಯಾಗಿ ನಿಂತು ನೋಡುವಷ್ಟು ಜನ ಸೇರುತ್ತಾರೆ. ಹಬ್ಬಗಳ ಆಚರಣೆಯಿರಲಿ, ಅಥವಾ ವಿವಿಧ ಸ್ಪರ್ಧೆಗಳಿರಲಿ ಮಹಿಳೆಯರ ಸಂಭ್ರಮವನ್ನು ನೋಡುವುದೇ ಎಲ್ಲರಿಗೂ ಖುಷಿ. ಕಳೆದ ತಿಂಗಳು ಸುಗಮ ಸಂಗೀತ ಪರಿಷತ್ತು ಮಹಾರಾಷ್ಟ್ರ ಘಟಕ ಏರ್ಪಡಿಸಿದ ಗಾಯನ ಸ್ಪರ್ಧೆಗೆ ಮಹಿಳೆಯರ ಹಲವಾರು ತಂಡಗಳು ಭಾಗವಹಿಸಿದ್ದವು. ಪ್ರತಿಯೊಂದು ತಂಡಗಳ ಉಡುಗೆ-ತೊಡುಗೆಗಳಲ್ಲಿ ವೈವಿಧ್ಯ ಇತ್ತು. ಅಂದು ಸ್ಪರ್ಧಾಳುಗಳು ವೇದಿಕೆಯ ಮೇಲೆ ಬಂದು ಹಾಡುವುದನ್ನು ಕೇಳಲು ಎಲ್ಲರಂತೆ ನಾನೂ ಉತ್ಸುಕಳಾಗಿ ಕಾಯುತ್ತಿದ್ದೆ. ಆಯಾಯ ತಂಡದ ಮಹಿಳೆಯರು ಒಂದೇ ಬಣ್ಣದ ಸೀರೆ, ಬೆಂಡೋಲೆ, ಕೈಬಳೆ, ಮುಡಿಗೆ ಮಲ್ಲಿಗೆ, ಅದಕ್ಕೊಪ್ಪು$ವ ಆಭರಣ ಹೀಗೆ ಎಲ್ಲರೂ ಸರ್ವಾಲಂಕಾರ ಭೂಷಿತರಾಗಿ ಎಲ್ಲರ ಗಮನ ಸೆಳೆಯುವಂತಿದ್ದರು. ಅವರಲ್ಲಿ ಯಾರೂ ಸಂಗೀತದಲ್ಲಿ ವಿಶೇಷ ಪರಿಣತಿಯನ್ನು ಪಡೆದವರಲ್ಲ ಮಧ್ಯವಯಸ್ಸು ದಾಟಿದವರೇ ಹೆಚ್ಚು. ಅವರು ಶ್ರುತಿಬದ್ಧವಾಗಿ ಹಾಡಿದರೋ ಇಲ್ಲವೋ ಎಂಬುದು ಅಲ್ಲಿ ಮುಖ್ಯವಾಗಿರಲಿಲ್ಲ. ಮಹಿಳೆಯರ ಮುಖದಲ್ಲಿನ ತೇಜಸ್ಸು, ಭಾಗವಹಿಸುವ ಹುರುಪು, ಸ್ಪರ್ಧೆಯ ನಿಯಮಗಳನ್ನು ಪಾಲಿಸುವ ಪ್ರಾಮಾಣಿಕತೆಯ ಜೊತೆಗೆ ಮುಗ್ಧತೆಯೂ ಎದ್ದು ಕಾಣುತ್ತಿತ್ತು.
ಅಂದು ಮಹಿಳೆಯರ ಸುಗಮ ಸಂಗೀತ ಕೇಳಿದ ಸಂಭ್ರಮ ಲೋಕಲ್ ರೈಲು ಹತ್ತುವಾಗಲೂ ಕಳೆದು ಹೋಗಿರಲಿಲ್ಲ. ತಿಂಗಳ ಕೊನೆಯ ಶನಿವಾರವಾದ್ದರಿಂದ ಕೂತು ಪ್ರಯಾಣಿಸುವಷ್ಟು ಮಹಿಳಾ ಬೋಗಿ ಖಾಲಿ ಇತ್ತು. ಘಾಟ್‌ಕೋಪರ್ ದಾಟಿ ಥಾಣೆ ಸ್ಟೇಷನ್ನಿನಲ್ಲಿ ರೈಲು ನಿಂತಿದ್ದೇ ತಡ ಒಂದೇ ಸಮನೆ ಗದ್ದಲ ಕೇಳಲಾರಂಭಿಸಿತು. ಸಾಮಾನ್ಯವಾಗಿ ಥಾಣೆಯಲ್ಲಿ ಹತ್ತಿಳಿಯುವವರ ಸಂಖ್ಯೆ ಜಾಸ್ತಿಯಿರುವುದರಿಂದ ಇದೆಲ್ಲ ಮಾಮೂಲಿ. ಆದರೆ, ಅಲ್ಲಿಂದ ಹೊರಟ ರೈಲು ಮತ್ತೆ ನಿಂತ ಕಾರಣ ನನ್ನ ಗಮನವೂ ಬಾಗಿಲಿನತ್ತ ಸರಿಯಿತು. ಅಲ್ಲಿ ಇಳಿಯುವುದಕ್ಕೂ ಹತ್ತುವುದಕ್ಕೂ ಅಸಾಧ್ಯವೆನ್ನುವಷ್ಟು ಮಂದಿ ಕಿಕ್ಕಿರಿದು ತುಂಬಿದ್ದರು. ಒಮ್ಮೆಲೆ ಯಾಕೆ ಹೀಗಾಯ್ತು ಎಂದು ಮೊದಲಿಗೆ ತಿಳಿಯಲಿಲ್ಲ. ರೈಲು ಮೂರು ಬಾರಿ ಹೊರಡಲನುವಾದರೂ ಯಾರೋ ಚೈನ್ ಎಳೆದ ಕಾರಣ ಮತ್ತೆ ನಿಂತಿತು. ಆ ನೂಕುನುಗ್ಗಲಿನಲ್ಲಿ ಬೋಗಿಯೊಳಗಡೆ ಬಂದುಸೇರಿದ ಮಹಿಳೆಯೋರ್ವಳು ಹೊರಗಡೆ ಹೋಗುವುದಕ್ಕೆ ಪರದಾಡುತ್ತಿದ್ದಳು. ರೈಲು ಹತ್ತುವ ತರಾತುರಿಯಲ್ಲಿ ಅವಳ ಮಗು ಬಾಗಿಲಿನಿಂದ ಹೊರಗೆ ತಳ್ಳಲ್ಪಟ್ಟಿತ್ತು. ಹೇಗಾದರೂ ಹೊರಗಡೆ ಹೋಗಲು ದಾರಿ ಮಾಡಿಕೊಡಿ ಎಂದು ವಿನಂತಿಸಿಕೊಳ್ಳುತ್ತಿದ್ದಳು. ಆದರೆ, ಎಲ್ಲರೂ ನಿಸ್ಸಹಾಯಕರು. ಕಿಟಕಿಯ ಬದಿಯಲ್ಲಿ ಕೂತಿದ್ದ ನನಗೆ, ಮಗು ಹೊರಗಡೆ ತಾಯಿಯನ್ನು ಕಾಣದೆ ಅಳುತ್ತಿರುವುದು ಕಾಣುತ್ತಿತ್ತು. ಆಕೆಯೂ ನನ್ನ ಪಕ್ಕ ಬಂದು ಕಿಟಕಿಯ ಮೂಲಕ ಅಳುತ್ತಿದ್ದ ತನ್ನ ಮಗುವನ್ನು ನೋಡಿದಳು. ಅವಳ ಆತಂಕ ಇನ್ನೂ ಹೆಚ್ಚಾಯಿತು. ಮರುಕ್ಷಣವೇ ನಾನು ಒರಗಿ ಕೂತಿರುವ ಆಸನದ ಇನ್ನೊಂದು ಮೂಲೆಯಿಂದ ಮೇಲೇರಿದಳು. ತೆಳ್ಳಗೆ ಇದ್ದಿದ್ದರಿಂದ ಅವಳಿಗೆ ಕಷ್ಟವಾಗಲಿಲ್ಲ. ಮೇಲಿರುವ ಸರಳುಗಳನ್ನು ಹಿಡಿದುಕೊಂಡೇ ಒತ್ತೂತ್ತಾಗಿ ಸಿಲುಕಿಕೊಂಡ ಮಹಿಳೆಯರ ಭುಜದಿಂದ ಭುಜಕ್ಕೆ ಕಾಲಿಟ್ಟು ಬಾಗಿಲಿನವರೆಗೆ ತಲುಪಿದಳು. ಅಲ್ಲಿದ್ದವರು ಅವಳನ್ನು ಹೇಗೂ ಬಾಗಿಲಿ ನಿಂದ ಹೊರಗಡೆ ಇಳಿಸಲು ಸಹಕರಿಸಿದರು. ರೈಲು ಸುಮಾರು ಹೊತ್ತು ನಿಂತಿದ್ದರಿಂದ ಹತ್ತಿದವರು ಮತ್ತೆ ಇಳಿದು, ಇಳಿಯಲಿರುವವರಿಗೆ ದಾರಿ ಮಾಡಿಕೊಟ್ಟರು. ರೈಲು ಮತ್ತೆ ಥಾಣೆ ಸ್ಟೇಷನ್ನಿನಿಂದ ಡೊಂಬಿವಲಿಯ ಕಡೆಗೆ ಹೊರಟಿತು.
Related Articles
Advertisement
ಲೋಕಲ್ ರೈಲಿಗೂ ಮಾತು ಬರಬೇಕಿತ್ತುಲೋಕಲ್ ರೈಲಿಗೂ ಮಾತು ಬರುತ್ತಿದ್ದರೆ ಯಾರಿಗೂ ಯಾವ ಚಿಂತೆ ಇರುತ್ತಿರಲಿಲ್ಲ. ಆಲಿಸುವ ಮನಸ್ಸುಗಳು ಸಿಕ್ಕಿದರೆ, ರೈಲು ತನ್ನ ವ್ಯಥೆಯನ್ನೂ ಹಂಚಿಕೊಳ್ಳುತ್ತಿತ್ತು. ದುಡಿಮೆಗೆಂದು ನಿತ್ಯ ಊರೂರು ಅಲೆಯುವ ಶ್ರಮಜೀವಿಗಳ ಬದುಕಿನ ಕಥೆಯನ್ನು ಹೇಳಿ ಬೆರಗು ಮೂಡಿಸುತ್ತಿತ್ತು. ಬದುಕಿನ ಕಥೆಗಳನ್ನು ಅರ್ಧದಲ್ಲಿಯೇ ನಿಲ್ಲಿಸಿ, ಚಿಂದಿ ಚಿಂದಿಯಾಗಲು ಹಳಿಗಳ ಮೇಲೆ ಬಂದವರಿಗೆ ಗದರಿಸಿ ಬುದ್ಧಿ ಹೇಳುತ್ತಿತ್ತು. ತನ್ನ ಮಡಿಲಿನಲ್ಲಿ ಒಂದಷ್ಟು ಹೊತ್ತು ಕೂತೋ ನಿಂತೋ ಪ್ರಯಾಣಿಸುವವರು ಜಗಳವಾಡದಂತೆ ಸಮರಸ ಭಾವದಿ ಬಾಳುವ ಪರಿಯನ್ನು ಕಲಿಸುತ್ತಿತ್ತು. ನಗರದ ಸುತ್ತ ಹಲವಾರು ಬಾರಿ ಗಿರಕಿ ಹೊಡೆಯುವಾಗ ತಾನು ಪಡೆದಂಥ ಅನುಭವವನ್ನು ನಮಗೂ ಧಾರೆಯೆರೆಯುತ್ತಿತ್ತು. ದುಃಖ-ದುಮ್ಮಾನಗಳಿಗೆ ಸಾಂತ್ವನವಾಗಿ, ನವಿರು ಕನಸುಗಳಿಗೆ ಆಹ್ವಾನವಾಗಿ ಕ್ಷಣ ಕ್ಷಣಕೂ ಜೊತೆಯಾಗುತ್ತಿತ್ತು. ಒಂದು ವೇಳೆ ರೈಲಿಗೂ ಮಾತು ಬರುತ್ತಿದ್ದರೆ ಸುಮ್ಮನಿರುತ್ತಿತ್ತೇ! ಕ್ರಾಸಿಂಗ್ ಇದೆ, ಊರಿಗೆ ಹೋಗುವ ಜಲದ್‌ಗಾಡಿಗೆ ದಾರಿ ಬಿಡಬೇಕು.
ಆ ಕಡೆಯ ಹಳಿಗಳು ಬಿರುಕು ಬಿಟ್ಟಿವೆ. ಅಲ್ಲೆಲ್ಲೋ ಅಪಘಾತ ಆಗಿದೆ.
ಹಾಗೆಯೇ ನಡೆದು ಬಿಟ್ಟರೆ ಹೇಗೆ ! ಎಂದು ಎಲ್ಲರ ಊಹಾಪೋಹ ಗಳಿಗೆ ತಕ್ಕ ಉತ್ತರ ನೀಡಿ ನಮ್ಮ ಊಹಾಪೋಹಗಳಿಗೆ ಕಡಿವಾಣ ಹಾಕು ತ್ತಿತ್ತು. ಲೋಕಲ್ ರೈಲು ಎಲ್ಲರ ಭಾವಾವೇಶಗಳಿಗೆ ಕಿವಿಯಾಗುತ್ತದೆ. ಸಾವು, ನೋವು, ನಲಿವುಗಳನ್ನು ನಿತ್ಯ ಕಾಣುತ್ತದೆ. ಧಾವಂತದ ಬದುಕಿನ ಅದೆಷ್ಟೋ ಕಥೆಗಳಿಗೆ ಜೀವಂತ ಪ್ರತಿಮೆಯಾಗುತ್ತದೆ. ಹೇಳಿಕೊಳ್ಳುವುದಕ್ಕೆ ಮಾತು ಮಾತ್ರ ಬರುವುದಿಲ್ಲ ! ಅನಿತಾ ಪಿ. ತಾಕೊಡೆ