Advertisement

ಸ್ಥಳೀಯ ಸಂಸ್ಥೆ ಸ್ಪರ್ಧೆಗೆ ಲೋಕ ಟಾರ್ಗೆಟ್‌ ಫಿಕ್ಸ್‌

09:22 AM Apr 09, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಕಳೆದ ಬಾರಿಯಂತೆ ಈ ಬಾರಿ ತ್ರೀಕೋನ ಸ್ಪರ್ಧೆಗೆ ಸಾಕ್ಷಿಯಾಗದೇ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಹಾಗೂ ಬಿಜೆಪಿ ನಡುವೆ ನೇರ ಜಿದ್ದಾಜಿದ್ದಿಯಿಂದ ಕೂಡಿ ಕುತೂಹಲಕ್ಕೆ ಕಾರಣವಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತಗಳಿಕೆಗೆ ನಾನಾ ರೀತಿಯ ತಂತ್ರ, ಪ್ರತಿ ತಂತ್ರಗಳನ್ನು ಹೆಣೆಯುತ್ತಿವೆ.

Advertisement

ಮತ್ತೂಂದೆಡೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಿಗೆ ಪಕ್ಷದ ಅಭ್ಯರ್ಥಿಗಳ ಪರ ಮತ ಪಡೆಯಲು ಟಾರ್ಗೆಟ್‌ ಫಿಕ್ಸ್‌ ಮಾಡಲು ಮುಂದಾಗಿವೆ.
ಲೋಕಸಭಾ ಚುನಾವಣೆಗೂ ಮೊದಲೇ ಜಿಲ್ಲೆಯಲ್ಲಿ ಸ್ಥಳೀಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ಆಡಳಿತ ಮಂಡಳಿಗಳಿಗೆ ಚುನಾವಣೆ ನಡೆಯಬೇಕಿತ್ತು.

ಆದರೆ ಮೀಸಲಾತಿ ವಿಚಾರದಲ್ಲಿ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿರುವ ಪರಿಣಾಮ ವಿವಾದ ಬಗೆಹರಿಯದೇ ನಿಗದಿತ ಅವಧಿಯಲ್ಲಿ ನಡೆಯಬೇಕಿದ್ದ ಚುನಾವಣೆ ಲೋಕಸಭಾ ಚುನಾವಣೆ ಘೋಷಣೆಯಾದ್ದರಿಂದ ಅನಿರ್ವಾಯವಾಗಿ ಮುಂದೂಡಲಾಗಿದೆ. ಆದರೆ ಲೋಕಸಭಾ ಚುನಾವಣೆ ಮುಗಿದು ಫ‌ಲಿತಾಂಶ ಹೊರ ಬಿದ್ದ ಬೆನ್ನಲ್ಲೇ ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯ ಮುಹೂರ್ತ ನಿಗದಿಯಾಗಲಿದೆ.

ಆಡಳಿತಾಧಿಕಾರಿಗಳ ನೇಮಕ: ಸದ್ಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ ನಗರಸಭೆಗಳಾದರೆ ಬಾಗೇಪಲ್ಲಿ ಪುರಸಭೆ, ಗುಡಿಬಂಡೆ ಪಟ್ಟಣ ಪಂಚಾಯಿತಿಯಿಂದ ಕೂಡಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲ ನಗರಸಭೆ ಸ್ಥಾನಮಾನ ಹೊಂದಿದ್ದರೆ, ದೇವನಹಳ್ಳಿ ಹಾಗೂ ವಿಜಯಪುರ ಪುರಸಭೆ ಸ್ಥಾನಮಾನ ಹೊಂದಿದೆ.

ಈಗಾಗಲೇ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಆಡಳಿತ ಮಂಡಳಿಯ ಅಧಿಕಾರ ಅವಧಿ ಮುಗಿದು ನಗರಸಭೆಗಳಿಗೆ ಜಿಲ್ಲಾಧಿಕಾರಿ ಹಾಗೂ ಪುರಸಭೆಗಳಿಗೆ ಉಪ ವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿ ಸರ್ಕಾರ ಆದೇಶ ಮಾಡಿದೆ.

Advertisement

ಈಗಾಗಲೇ ನಗರಾಭಿವೃದ್ಧಿ ನಿರ್ದೇಶನಾಲಯವು ಕೂಡ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ಮತದಾರರ ಪಟ್ಟಿಯನ್ನು ಕೂಡ ಪರಿಷ್ಕರಣೆ ಮಾಡಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಜೊತೆಗೆ ವಾರ್ಡ್‌ಗಳನ್ನು ಈ ಬಾರಿ ಮರುವಿಗಂಡನೆ ಮಾಡಿ ಹೊಸದಾಗಿ ಹಲವು ಪ್ರದೇಶಗಳನ್ನು ಸೇರಿಸಿ ಹೊಸದಾಗಿ ವಾರ್ಡ್‌ಗಳನ್ನು ರಚಿಸಿದೆ. ಹೀಗಾಗಿ ಲೋಕ ಕದನ ಮುಗಿದ ಕೂಡಲೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಚುಣಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ.

ಟಿಕೆಟ್‌ ಆಕಾಂಕ್ಷಿಗಳಿಗೆ ಟಾರ್ಗೆಟ್‌: ಲೋಕ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನಾನಾ ರೀತಿಯ ತಂತ್ರಗಳನ್ನು ರೂಪಿಸುತ್ತಿರುವ ರಾಜಕೀಯ ಪಕ್ಷಗಳು ಇದೀಗ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕೇಂದ್ರೀಕರಿಸಿ, ಲೋಕ ಸಮರದಲ್ಲಿ ಸ್ಪರ್ಧಿಸುವ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳಿಗೆ ಇಂತಿಷ್ಟೇ ಮತ ತಂದು ಕೊಡಬೇಕೆಂಬ ಜವಾಬ್ದಾರಿಯನ್ನು ಹೆಗಲಿಗೇರಿಸಿವೆ.

ಹೆಚ್ಚು ಮತ ತಂದು ಕೊಡುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗುವುದು ಎಂದು ಬಹಿರಂಗವಾಗಿಯೇ ರಾಜಕೀಯ ಪಕ್ಷಗಳು ಟಿಕೆಟ್‌ ಆಕಾಂಕ್ಷಿಗಳಿಗೆ ಭರವಸೆ ನೀಡುತ್ತಿವೆ. ಜೊತೆಗೆ ಚುನಾವಣೆಯ ಸಂದರ್ಭದಲ್ಲಿ ನಗರದಲ್ಲಿ ನಡೆಯುವ ಪಕ್ಷಗಳ ಮುಖಂಡರು ನಡೆಸುವ ರೋಡ್‌ ಶೋ, ಬಹಿರಂಗ ಸಭೆ ಸಮಾವೇಶಗಳಿಗೂ ಸಹ ಪಕ್ಷದ ಕಾರ್ಯಕರ್ತರನ್ನು ಹೆಚ್ಚಿನ ಪ್ರಮಾಣದಲ್ಲಿ ಕರೆ ತರಬೇಕೆಂದು ಗುರಿ ನೀಡುತ್ತಿರುವುದು ನಗರ ಸ್ಥಳೀಯ ಸಂಸ್ಥೆಗಳ ಟಿಕೆಟ್‌ ಆಕಾಂಕ್ಷಿಗಳಿಗೆ ಸವಾಲಾಗಿದೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ರಾಜಕೀಯ ಪಕ್ಷಗಳು ನಾನಾ ರೀತಿಯ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಪಕ್ಷಗಳು ಇದೀಗ ಮುಂಬರುವ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಲು ಉತ್ಸಾಹದಿಂದ ಇರುವ ಟಿಕೆಟ್‌ ಆಕಾಂಕ್ಷಿಗಳಿಗೆ ಚುನಾವಣೆಗೂ ಮೊದಲೇ ಸಮಿಪೈನಲ್‌ ಪರೀಕ್ಷೆ ಫಿಕ್ಸ್‌ ಮಾಡಿದೆ.

ಲೋಕಸಭಾ ಚುನಾವಣೆ ವೇಳೆ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತ ತಂದುಕೊಡುವ ಅಭ್ಯರ್ಥಿಗಳನ್ನು ಗುರುತಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಟಿಕೆಟ್‌ ಕೊಡಲಾಗುವುದು. ಲೋಕಸಭಾ ಚುನಾವಣೆ ಸ್ಪರ್ಧಾಕಾಂಕ್ಷಿಗಳಿಗೆ ಸೆಮಿಫೈನಲ್‌ ಆಗಿರುವುದರಿಂದ ಆಕಾಂಕ್ಷಿಗಳು ಲೋಕಸಭಾ ಚುನಾವಣೆಯನ್ನು ಪ್ರಾಯೋಗಿಕವಾಗಿ ಬಳಸಿಕೊಂಡು ಅಭ್ಯರ್ಥಿಗೆ ಹೆಚ್ಚಿನ ತಂದುಕೊಡಲು ಶ್ರಮಿಸಬೇಕು.
-ಡಾ.ಕೆ.ಸುಧಾಕರ್‌, ಶಾಸಕರು, ಚಿಕ್ಕಬಳ್ಳಾಪುರ (ಸಭೆಯೊಂದರದಲ್ಲಿ ಮಾತನಾಡಿದ್ದು)

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next