Advertisement
ತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ಆವಿಷ್ಕಾರಗಳು, ಮಾದರಿಗಳು ಬರುತ್ತಿವೆ. ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಇದನ್ನು ವಿವಿಧ ನೆಲೆಗಳಲ್ಲಿ ಉಪಯೋಗಿಸುವ ಬಗ್ಗೆ ಈಗಾಗಲೇ ಹಲವಾರು ಪ್ರಯತ್ನಗಳು ನಡೆದಿವೆ. ಪ್ರತಿ ವಾರ್ಡ್‌ನ ಕಸವನ್ನು ವಾರ್ಡ್‌ನ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ವಾರ್ಡ್‌ಮಟ್ಟದಲ್ಲೇ ವಿಲೇವಾರಿ ಆಗುವ ನಿಟ್ಟಿನಲ್ಲಿ ತ್ಯಾಜ್ಯ ನಿರ್ವಹಣೆ ಯೋಜನೆಗಳು ರೂಪುಗೊಂಡರೆ ಲ್ಯಾಂಡ್‌ಪಿಲ್ ( ಭೂಭರ್ತಿ) ಕೇಂದ್ರಗಳನ್ನು ಮಿತಿ ಮೀರಿ ಅವಲಂಬಿಸುವುದು ತಪ್ಪುತ್ತದೆ. ಪ್ರಸ್ತುತ ಹೊಸದಾಗಿ ತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆಗೆ ಆ ಪ್ರದೇಶಗಳ ನಾಗರಿಕರಿಂದಲೂ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ.
Related Articles
ನಮ್ಮ ಮನೆಯ ತ್ಯಾಜ್ಯಗಳನ್ನು ನಾವೇ ವಿಲೇವಾರಿ ಮಾಡಿ ಅದರಿಂದ ಜೈವಿಕ ಇಂಧನ ಪಡೆಯುವ ಅಡುಗೆ ಜೈವಿಕ ಇಂಧನ ಘಟಕ ಒಂದು ಪರಿಣಾಮಕಾರಿ ವಿಧಾನ. ಮನೆ, ಹೊಟೇಲ್, ವಸತಿ ನಿಲಯಗಳ ತ್ಯಾಜ್ಯಗಳ ವಿಲೇವಾರಿ ಹಾಗೂ ವಿಂಗಡನೆಯಲ್ಲಿ ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಈ ಜೈವಿಕ ಇಂಧನ ಘಟಕ. ಅಡುಗೆ ತ್ಯಾಜ್ಯ ಜೈವಿಕ ಇಂಧನ ಘಟಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಪ್ರಾಯೋಗಿಕ ನೆಲೆಯಲ್ಲಿ ಅಲ್ಲಲ್ಲಿ ನಡೆಯುತ್ತಿದೆ.
Advertisement
ಜೈವಿಕ ಅನಿಲ ಜತೆಗೆ ಇದರಲ್ಲಿ ಉತ್ಪತಿಯಾಗುವ ದ್ರವವನ್ನು ತರಕಾರಿ ಗಿಡಗಳಿಗೆ ಸೇರಿದಂತೆ ಕೃಷಿಗೆ ಪೌಷ್ಟಿಕಾಂಶವಾಗಿ ಬಳಸಬಹುದಾಗಿದೆ. ಅನ್ನ, ಸಾಂಬಾರು, ಚಪಾತಿ, ಗಂಜಿ ನೀರು, ತರಕಾರಿ ತ್ಯಾಜ್ಯಗಳು, ಚಹಾ ಮತ್ತು ಕಾಫಿಯ ತ್ಯಾಜ್ಯ ಮುಂತಾದ ತ್ಯಾಜ್ಯಗಳನ್ನು ಇದಕ್ಕೆ ಬಳಸಬಹುದಾಗಿದೆ. ಉತ್ಪತಿಯಾಗುವ ಅಡುಗೆ ತ್ಯಾಜ್ಯದ ಪ್ರಮಾಣದ ಮೇಲೆ ಘಟಕದ ಸಾಮರ್ಥ್ಯ ಅಡಗಿದೆ. ಸಾಮಾನ್ಯವಾಗಿ ಮನೆಗಳಲ್ಲಿ 5 ಕೆ.ಜಿ.ವರೆಗೆ ಅಡುಗೆ ತ್ಯಾಜ್ಯ ಉತ್ಪತಿಯಾಗಲು ಸಾಧ್ಯವಿದೆ. 5 ಕಿಲೋ ಸಾಮರ್ಥ್ಯದ ಘಟಕದಲ್ಲಿ ದಿನವೊಂದಕ್ಕೆ ಅರ್ಧ ಕಿಲೋ ಅನಿಲ ಲಭ್ಯವಾಗುತ್ತದೆ.
ಮಣ್ಣಿನ ಮಡಕೆ ಕಾಂಪೋಸ್ಟ್ ಕಸದ ಸಮಸ್ಯೆಯನ್ನು
ಬಗೆಹರಿಸುವ ನಿಟ್ಟಿನಲ್ಲಿ ಸ್ವತ್ಛತಾ ಅಭಿಯಾನ , ಜಾಗೃತಿ ಕಾರ್ಯಕ್ರಮಗಳ ಮೂಲಕ ಹೆಸರು ಮಾಡಿರುವ ಮಂಗಳೂರು ರಾಮಕೃಷ್ಣ ಮಿಷನ್ ಮಣ್ಣಿನ ಮಡಕೆ ಕಾಂಪೋಸ್ಟ್ ಎಂಬ ನೂತನ ಪ್ರಯೋಗವನ್ನು ಸುಮಾರು ಎರಡು ವರ್ಷದಿಂದ ಮಾಡುತ್ತಿದೆ. ಮನೆಯ ಹಸಿ ಕಸಗಳನ್ನು ಗೊಬ್ಬರವಾಗಿ ಪರಿವರ್ತಿಸುವ ಈ ಯೋಜನೆಯಿಂದ ಹಸಿ ಕಸದ ವಿಲೇವಾರಿ ಸಮಸ್ಯೆಯನ್ನು ಭಾಗಶಃ ಪರಿಹರಿಸಬಹುದು ಎಂಬುದು ರಾಮಕೃಷ್ಣ ಮಿಷನ್ ಚಿಂತನೆ. ಸುಮಾರು 3,400ಕ್ಕೂ ಅಧಿಕ ಜನರು ಕಸ ನಿರ್ವಹಣೆ ಮಾಡಲು ಮೂರು ಮಡಕೆ ಸಾಧನಕ್ಕಾಗಿ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
ಸ್ವತ್ಛ ಭಾರತ ಯೋಜನೆಯಡಿ ಮನೆಯಲ್ಲೇ ತ್ಯಾಜ್ಯ ನಿರ್ವಹಣೆಯನ್ನು ಒಂದು ಕಾರ್ಯಕ್ರಮವಾಗಿ ಸೇರ್ಪಡೆಗೊಳಿಸಿ ಸರಕಾರದಿಂದ ಪ್ರೋತ್ಸಾಹ ನೀಡಿದರೆ ಹೆಚ್ಚಿನ ರೀತಿಯಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ ಪೈಪ್ ಕಾಂಪೋಸ್ಟ್ ಮಾದರಿ ಕೂಡ ಬಳಕೆಯಲ್ಲಿದೆ. ಕಾಂಪೋಸ್ಟರ್‌ಗಳ ಮೂಲಕ ತಯಾರಾದ ಸಾವಯವ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಆದಾಯವನ್ನು ಕೂಡ ಇದು ತರಲಿದೆ. ಉತ್ಪತಿಯಾಗುವ ಸಾಯಯವ ಗೊಬ್ಬರವನ್ನು ಕಾಂಪೋಸ್ಟ್ ಸಂತೆಯ ಮೂಲಕ ವಿಲೇವಾರಿ ಮಾಡಬಹುದಾಗಿದೆ. ಬೆಂಗಳೂರಿನಲ್ಲಿ ಇಂಥದ್ದೇ ಕಾಂಪೋಸ್ಟ್ ಸಂತೆಯ ಪ್ರಯೋಗ ಮಾಡಿ ಯಶಸ್ಸು ಕಂಡುಕೊಳ್ಳಲಾಗಿದೆ. ಇದಲ್ಲದೆ ಸ್ಥಳೀಯರು ತಮ್ಮ ಮನೆಯ ಹೂವಿನ ಗಿಡಗಳು, ಕೈತೋಟಗಳಿಗೆ ಬಳಸಬಹುದು. ವಾರ್ಡ್ ಮಟ್ಟದಲ್ಲಿ ನಿರ್ವಹಣೆ
ಹಸಿ ಕಸ ವಿಲೇವಾರಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಂದ ಬೇಸತ್ತ ಬೆಂಗಳೂರಿನಲ್ಲಿ ಸ್ಥಳೀಯರು ವಾರ್ಡ್ ಮಟ್ಟದಲ್ಲೇ ತ್ಯಾಜ್ಯ ನಿರ್ವಹಣೆ ಮಾಡುವ ಕ್ರಮವನ್ನು ಅನುಸರಿಸುತ್ತಿದ್ದಾರೆ. ವಾರ್ಡ್ ಮಟ್ಟದಲ್ಲಿ ಹಸಿ ಕಸವನ್ನು ಬಳಸಿ ಬೀದಿಯಲ್ಲೇ ಕಾಂಪೋಸ್ಟರ್‌ಗಳನ್ನು ಬಳಸಿ ಕಾಂಪೋಸ್ಟ್ ತಯಾರಿಸಲಾಗುತ್ತಿದೆ. ಕಾಂಪೋಸ್ಟರ್ ಸಾಧನ ಬಳಸಿ ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸಲು ಕಾರ್ಯೋನ್ಮುಖರಾಗಿದ್ದಾರೆ. ಕಾಂಪೋಸ್ಟರ್‌ಗಳನ್ನು ಬೀದಿಗಳಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಇಡಲಾಗುತ್ತಿದೆ. ನಿತ್ಯವೂ ಮನೆಗಳಿಂದ ಸಂಗ್ರಹಿಸುವ ಹಸಿ ಕಸವನ್ನು ಪೌರಕಾರ್ಮಿಕರು ಈ ಕಾಂಪೋಸ್ಟರ್‌ಗಳಿಗೆ ತುಂಬಿಸುತ್ತಾರೆ. ದುರ್ವಾಸನೆ ಬಾರದಂತೆ ಅದಕ್ಕೆ ಕೋಕೋಪಿಟ್ ಮಿಶ್ರ ಮಾಡಿ ಮುಚ್ಚಳಕ್ಕೆ ಬೀಗ ಹಾಕಲಾಗುತ್ತದೆ. ಸುಮಾರು 40 ದಿನಗಳಲ್ಲಿ ಸಾವಯವ ಗೊಬ್ಬರ ತಯಾರಾಗುತ್ತದೆ. ಒಂದು ಕಾಂಪೋಸ್ಟರ್ ತುಂಬಿದ ಬಳಿಕ ಇನ್ನೊಂದು ಕಾಂಪೋಸ್ಟರ್ ಅನ್ನು ಬಳಸಲಾಗುತ್ತದೆ. ಇದಕ್ಕೆ ಬಿಬಿಎಂಪಿಯು ವಿಶೇಷ ಆಸಕ್ತಿ ವಹಿಸಿದೆ. - ಕೇಶವ ಕುಂದರ್