ಹನೂರು: ಪಟ್ಟಣ ಪಂಚಾಯಿತಿಯ 13 ವಾರ್ಡುಗಳಿಗೆ ಜರುಗಿದ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಮತಯಂತ್ರಗಳನ್ನು ಸ್ಟ್ರಾಂಗ್‌ರೂಂನಲ್ಲಿ ಇಡಲಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು ಶುಕ್ರವಾರ ಮತ ಎಣಿಕೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಪಟ್ಟಣದಲ್ಲಿ ಮೊದಲ ಬಾರಿಗೆ ಸ್ಟ್ರಾಂಗ್‌ರೂಂ: ಹನೂರು ಪಟ್ಟಣವು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾದ ಬಳಿಕ ನಡೆಯುತ್ತಿರುವ 3ನೇ ಚುನಾವಣೆ ಇದಾಗಿದ್ದು ಪ್ರಥಮ ಬಾರಿಗೆ ಹನೂರು ಪಟ್ಟಣದಲ್ಲಿಯೇ ಸ್ಟ್ರಾಂಗ್ ರೂಂ ಅನ್ನು ತೆರೆಯಲಾಗಿದ್ದು ಮತ ಎಣಿಕೆಯನ್ನೂ ಸಹ ಇಲ್ಲಿಯೇ ಮಾಡಲಾಗುತ್ತಿದೆ. ಈ ಹಿಂದೆ ಹನೂರು ಕೇವಲ ಪಟ್ಟಣವಾಗಿದ್ದು ತಾಲೂಕು ಕೇಂದ್ರವಾಗದಿದ್ದ ಹಿನ್ನೆಲೆ ಸ್ಟ್ರಾಂಗ್ ರೂಂ ಮತ್ತು ಮತ ಎಣಿಕೆ ಪ್ರಕ್ರಿಯೆಯನ್ನು ಕೊಳ್ಳೇಗಾಲದಲ್ಲಿ ನಡೆಸಲಾಗುತಿತ್ತು. ಆದರೆ ಇದೀಗ ಹನೂರು ತಾಲೂಕು ಕೇಂದ್ರವಾಗಿರುವುದರಿಂದ ಪ್ರಥಮ ಬಾರಿಗೆ ಎಣಿಕೆ ಕಾರ್ಯ ನಡೆಯುತ್ತಿದೆ.
ಸ್ಟ್ರಾಂಗ್‌ರೂಂಗೆ ಬಿಗಿ ಭದ್ರತೆ: 13 ವಾರ್ಡುಗಳ ಮತಯಂತ್ರಗಳನ್ನು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಸ್ಟ್ರಾಂಗ್‌ರೂಂನಲ್ಲಿ ಇಡಲಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸ್ಟ್ರಾಂಗ್‌ರೂಂ ಕೊಠಡಿಯ ಭದ್ರತೆಗಾಗಿ ಓರ್ವ ಸಹಾಯಕ ಸಬ್ ಇನ್ಸ್‌ಪೆಕ್ಟರ್, ಇಬ್ಬರು ಹೆಡ್ ಕಾನ್ಸ್‌ಟೇಬಲ್, ಇಬ್ಬರು ಪೊಲೀಸ್ ಪೇದೆ ಮತ್ತು ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯ 3 ತಂಡಗಳನ್ನು ನೇಮಕ ಮಾಡಲಾಗಿದ್ದು 3 ಪಾಳಿಯಲ್ಲಿ ಭದ್ರತೆ ಒದಗಿಸಲಾಗಿದೆ. ಅಲ್ಲದೆ ಸ್ಟ್ರಾಂಗ್ ರೂಂನ ಭದ್ರತೆಗಾಗಿ ಒಂದು ಡಿ.ಆರ್ ತುಕ್ಕಡಿಯನ್ನೂ ಸಹ ನಿಯೋಜಿಸಲಾಗಿದೆ.
ಮತ ಎಣಿಕೆಗೆ ಸಕಲ ಸಿದ್ಧತೆ: ಪಟ್ಟಣ ಪಂಚಾಯಿತಿಯ 13 ವಾರ್ಡುಗಳಿಗೆ ಮತದಾನ ಜರುಗಿದ್ದು ಮತ ಎಣಿಕೆ ಪ್ರಕ್ರಿಯೆಯು ಶುಕ್ರವಾರ ಜರುಗಲಿದೆ. ಮತ ಎಣಿಕೆ ಪ್ರಕ್ರಿಯೆಯು ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿಖೀತಾ ಚಿನ್ನಸ್ವಾಮಿ ಮೇಲುಸ್ತುವಾರಿಯಲ್ಲಿ ಜರುಗಲಿದ್ದು ಮತ ಎಣಿಕೆಗಾಗಿ ಈಗಾಗಲೇ ಎಣಿಕೆ ಕೊಠಡಿಯನ್ನು ಗುರುತಿಸಲಾಗಿದ್ದು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಅವರ ಏಜೆಂಟರುಗಳಿಗೆ ಪ್ರತ್ಯೇಕ ಪಾಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಪತ್ರಿಕಾ ಮಾಧ್ಯಮಗಳ ಪ್ರತಿನಿಧಿಗಳಿಗೂ ಸಹ ಪಾಸ್ ಕಲ್ಪಿಸಲಾಗಿದ್ದು ಮತ ಎಣಿಕೆ ಕೇಂದ್ರಕ್ಕೆ 3 ಹಂತದಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಚುನಾವನಾಧಿಕಾರಿ ಟಿ.ಆರ್.ಸ್ವಾಮಿ ತಿಳಿಸಿದರು.
ಪಟ್ಟಣ ವಾಸಿಗಳಿಗೆ ಮೊದಲ ಅನುಭವ: ಹನೂರು ಪಟ್ಟಣದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಮತ ಎಣಿಕೆಯ ಕ್ಷಣಗಳು ಮತ್ತು ಅನುಭವವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಈ ಹಿಂದೆ ಹನೂರು ವಿಧಾನಸಭಾ ಕ್ಷೇತ್ರ ಚುನಾವಣೆ ಸೇರಿದಂತೆ ಜಿಪಂ, ತಾಪಂ, ಗ್ರಾಪಂ ಮತ್ತು ಪಪಂ ಚುನಾವಣೆಗಳು ಜರುಗಿದರೂ ಮತ ಎಣಿಕೆಗಾಗಿ ತಾಲೂಕು ಕೇಂದ್ರವಾಗಿದ್ದ ಕೊಳ್ಳೇಗಾಲ ಅಥವಾ ತಾಲೂಕು ಕೇಂದ್ರವಾದ ಚಾಮರಾಜನಗರಕ್ಕೆ ತೆರಳಬೇಕಿತ್ತು. ಆದರೆ ಇದೇ ಪ್ರಥಮ ಬಾರಿಗೆ ಹನೂರು ಪಟ್ಟಣದಲ್ಲಿ ಎಣಿಕೆ ಕಾರ್ಯ ಜರುಗುತ್ತಿರುವುದು ಪಟ್ಟಣವಾಸಿಗಳಲ್ಲಿ ಹರ್ಷ ಮೂಡಿಸಿದೆ.