Advertisement

ಸ್ಥಳೀಯ ಸಂಸ್ಥೆ ಚುನಾವಣೆ: ಮತ್ತೂಂದು ಸುತ್ತಿನ ಕಾನೂನು ಕಗ್ಗಂಟು

12:30 AM Feb 01, 2019 | Team Udayavani |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗ ಮತ್ತೂಂದು ಸುತ್ತಿನ ಕಾನೂನು ಕಗ್ಗಂಟು ಎದುರಾಗಿದ್ದು, ಚುನಾವಣೆ ಮುಗಿದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮತ್ತು ಚುನಾವಣೆ ನಡೆಯಬೇಕಿರುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಏಕ ಸದಸ್ಯಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಕೆಲವರು ಮೇಲ್ಮನವಿ ಸಲ್ಲಿಸಿದ್ದಾರೆ.

Advertisement

ಈ ಮೇಲ್ಮನವಿಗಳ ವಿಚಾರವಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್‌. ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಾದ ಆಲಿಸಿ ವಾರ್ಡ್‌ವಾರು ಮೀಸಲಾತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿರುವ ಹೈಕೋರ್ಟ್‌, ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆವರೆಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸದಂತೆ ಮಧ್ಯಂತರ ಆದೇಶ ನೀಡಿ, ವಿಚಾರಣೆಯನ್ನು ಸೋಮವಾರಕ್ಕೆ (ಫೆ.4) ಮುಂದೂಡಿತು.

ರಾಯಚೂರು ಜಿಲ್ಲೆಯ ಸಿಂಧನೂರು ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಆಲಂಬಾಷಾ, ಯಾದಗಿರಿ ಜಿಲ್ಲೆಯ ಗುರುಮಿಠಕಲ್‌ ಪುರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಪವಿತ್ರಮ್ಮ ಹಾಗೂ ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಅಮ್ಜದ್‌ ಪಟೇಲ್‌ ಮೇಲ್ಮನವಿ ಸಲ್ಲಿಸಿದ್ದಾರೆ. ಅದೇ ರೀತಿ ಮಾಗಡಿ ಪುರಸಭೆ ವಾರ್ಡ್‌ವಾರು ಮೀಸಲಾತಿ ಪ್ರಶ್ನಿಸಿ ಸೀತಾರಾಮು, ಕನಕಪುರ ಪುರಸಭೆ ವಾರ್ಡ್‌ವಾರು ಮೀಸಲಾತಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ.

ಈ ವರ್ಷ ಮಾರ್ಚ್‌ನಲ್ಲಿ ಅವಧಿ ಕೊನೆಗಳ್ಳಲಿರುವ 101 ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಏಕಸದಸ್ಯಪೀಠ ಅದರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸೇರಿ 13 ನಗರ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ವಾರ್ಡ್‌ವಾರು ಮೀಸಲಾತಿ ಮರುನಿಗದಿಗೊಳಿಸುವಂತೆ ಜ.14ರಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಅದರಲ್ಲಿ ಮಾಗಡಿ ಮತ್ತು ಕನಕಪುರ ಪುರಸಭೆಗಳ ವಾರ್ಡ್‌ ಮೀಸಲಾತಿ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅವಶ್ಯಕತೆಯಿಲ್ಲ ಎಂದು ಏಕಸದಸ್ಯಪೀಠ ಹೇಳಿತ್ತು. ಅದನ್ನು ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿದೆ.

ಅದೇ ರೀತಿ ಕಳೆದ ಕಳೆದ ವರ್ಷ ಆಗಸ್ಟ್‌ನಲ್ಲಿ ಚುನಾವಣೆ ನಡೆದ 105ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಏಕಸದಸ್ಯಪೀಠ, ಈ ವಿಚಾರದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಆದೇಶಿಸಿ ಅರ್ಜಿಗಳನ್ನು ಇತ್ಯರ್ಥಪಡಿಸಿತ್ತು. ಇದೀಗ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.

Advertisement

ಅರ್ಜಿದಾರರ ಆಕ್ಷೇಪವೇನು?: ನೂರಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಮೊದಲು 2018ರ ಸೆ.3ರಂದು ಅಧಿಸೂಚನೆ ಹೊರಡಿಸಿತು. ಈ ಅಧಿಸೂಚನೆಯಲ್ಲಿ ಕೆಲವೊಂದು ನ್ಯೂನತೆಗಳಿವೆ ಎಂದು ಹೇಳಿ ಸರ್ಕಾರ ಸೆ.6ರಂದು ಪರಿಷ್ಕೃತ ಪಟ್ಟಿ ಪ್ರಕಟಿಸಿತು. ಇದನ್ನು ಪ್ರಶ್ನಿಸಿ ಕೆಲವುರು ಕೋರ್ಟ್‌ ಮೆಟ್ಟಿಲೇರಿದಾಗ ಸರ್ಕಾರದ ಅಧಿಸೂಚನೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿ ಏಕಸದಸ್ಯಪೀಠ ಅರ್ಜಿಗಳನ್ನು ವಜಾಗೊಳಿಸಿದೆ. ಸೆ.3ರ ಅಧಿಸೂಚನೆಯಲ್ಲಿ ಆವರ್ತನೆ ನಿಯಮ ಉಲ್ಲಂಘಿಸಲಾಗಿದೆ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸದಂತೆ ಸರ್ಕಾ ರಕ್ಕೆ ಮಧ್ಯಂತರ ಆದೇಶ ನೀಡಬೇಕು ಎಂದು ಕೋರಿದ್ದಾರೆ.

ಇದೇ ವೇಳೆ ಮಾಗಡಿ ಮತ್ತು ಕನಕಪುರ ಪುರಸಭೆ ವಾರ್ಡ್‌ ಗಳ ಮೀಸಲಾತಿ ಪ್ರಶ್ನಿಸಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಪರಿಷ್ಕೃತ ಪಟ್ಟಿ: ಸರ್ಕಾರಕ್ಕೆ ನೋಟಿಸ್‌
ಬೆಂಗಳೂರು:
ಮಂಗಳೂರು ಮಹಾನಗರ ಪಾಲಿಕೆ ಸೇರಿ ರಾಜ್ಯದ 13 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲು ಮರುನಿಗದಿಪಡಿಸಿ ಪರಿಷ್ಕೃತ ಪಟ್ಟಿ ನೀಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಚುನಾವಣಾ ಆಯೋಗ ಸಲ್ಲಿಸಿರುವ ಮಧ್ಯಂತರ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್‌. ಸುನಿಲ್‌ ದತ್‌ ಯಾದವ್‌ ಅವರಿದ್ದ ಪೀಠದ ಮುಂದೆ ಗುರುವಾರ ವಾದ ಮಂಡಿಸಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ, ಇದೇ ಮಾರ್ಚ್‌ನಲ್ಲಿ ಅವಧಿ ಪೂರ್ಣಗೊಳ್ಳಲಿರುವ ರಾಜ್ಯದ 101 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 13 ರ ಮೀಸಲು ನಿಗದಿ ಅಧಿಸೂಚನೆಯನ್ನು ಜ.14ರಂದು ಹೈಕೋರ್ಟ್‌ ರದ್ದುಪಡಿಸಿ, ಆ 13 ನಗರ ಸ್ಥಳೀಯ ಸಂಸ್ಥೆಗಳಿಗೆ ಜ.28ರೊಳಗೆ ವಾರ್ಡ್‌ವಾರು ಮೀಸಲು ಮರುನಿಗದಿಪಡಿಸಿ ಆಯೋಗಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ಈವರೆಗೂ ಸರ್ಕಾರ ಮೀಸಲು ಮರುನಿಗದಿಪಡಿಸಿಲ್ಲ ಎಂದು ದೂರಿದರು.

ಈ ವೇಳೆ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್‌ ದಿನೇಶ್‌ ರಾವ್‌, ಮೀಸಲು ಮರುನಿಗದಿ ಪಡಿಸಲು ಸರ್ಕಾರಕ್ಕೆ ನಿರ್ದೇಶಿಸಿ ಏಕಸದಸ್ಯ ಪೀಠ ನೀಡಿರುವ ತೀರ್ಪು ಪ್ರಶ್ನಿಸಿ ಸರ್ಕಾರದಿಂದ ಮೇಲ್ಮನವಿ ಸಲ್ಲಿಸಲಾಗಿದೆ. ಮುಂದಿನ ವಾರ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ವಿಚಾರಣೆಗೆ ಬರಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದರಿಂದ ನ್ಯಾಯಪೀಠ, ಮೇಲ್ಮನವಿ ಕುರಿತು ವಿಭಾಗೀಯ ಪೀಠ ತೀರ್ಮಾನ ಕೈಗೊಂಡ ನಂತರ ಅರ್ಜಿ ವಿಚಾರಣೆ ಮುಂದುವರಿಸುವ ಕುರಿತು ನಿರ್ಧರಿಸುವುದಾಗಿ ತಿಳಿಸಿ, ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next