Advertisement

ಕುಂದಾಪುರ: ಬಿಸಿಲ ತಾಪಕ್ಕೆ ಇನ್ನೋರ್ವ ಬಲಿ

02:16 PM Apr 14, 2020 | Karthik A |

ಕುಂದಾಪುರ: ತಾಲೂಕಿನಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುತ್ತಿದ್ದು. ಶನಿವಾರ ವ್ಯಕ್ತಿಯೋರ್ವರು ಬಿಸಿಲ ತಾಪದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇದರೊಂದಿಗೆ ಕುಂದಾಪುರ ತಾಲೂಕಿನಲ್ಲಿ ತಿಂಗಳ ಅವಧಿಯಲ್ಲಿ ಬಿಸಿಲ ಝಳಕ್ಕೆ ಬಲಿಯಾದವರ ಸಂಖ್ಯೆ ಮೂರಕ್ಕೇರಿದೆ. ತಲ್ಲೂರು ಗ್ರಾಮದ ಕೋಟೆಬಾಗಿಲು ನಿವಾಸಿ ಕೃಷಿ ಕೂಲಿ ಕಾರ್ಮಿಕ ತಿಮ್ಮ (33) ಅವರು ಕೆಲಸ ನಿರ್ವಹಿಸುತ್ತಿದ್ದಾಗ ಬಿಸಿಲಿನ ತಾಪಕ್ಕೆ ತೀವ್ರ ಅಸ್ವಸ್ಥಗೊಂಡು ಮೃತಪಟ್ಟರು. ಎ. 3ರಂದು ಮರವಂತೆಯಲ್ಲಿ ದನ ಮೇಯಿಸಲು ತೆರಳಿದ್ದ ಕೃಷ್ಣ ದೇವಾಡಿಗ ಮತ್ತು ಎ. 9ರಂದು ಅಂಪಾರು ಗ್ರಾಮದ ಹಡಾಳಿ ಕೊಟ್ಟಿಗೆ ಮನೆ ನಿವಾಸಿ ವಸಂತ ಶೆಟ್ಟಿ ಅವರು ಗದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಬಿಸಿಲ ತಾಪಕ್ಕೆ ಮೃತಪಟ್ಟಿದ್ದರು.

Advertisement

ತಿಮ್ಮ ಅವರು ಶನಿವಾರ ಉಪ್ಪಿನಕುದ್ರು ಬಾಬು ಶೆಟ್ಟಿ ಅವರ ಜತೆಯಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದು, ಮಧ್ಯಾಹ್ನದ ವೇಳೆ ಕೆಲಸದಲ್ಲಿದ್ದಾಗಲೇ ತೀವ್ರ ಅಸ್ವಸ್ಥಗೊಂಡು ಕುಸಿದರು. ತತ್‌ಕ್ಷಣ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ತಾಲೂಕಿನಲ್ಲಿ ತಾಪಮಾನ 37 ಡಿಗ್ರಿ ಸೆಲ್ಷಿಯಸ್‌ಗೆ ಏರಿರುವುದು ದಾಖಲೆಯಾಗಿದೆ. ಉತ್ತರ ಕರ್ನಾಟಕದ ಜಿ‌ಲ್ಲೆಗಳಲ್ಲಿ 40 ಡಿಗ್ರಿ ಸೆ.ಗೇರಿದಾಗ ಸಾವುಗಳು ಸಂಭವಿಸಿದ ದಾಖಲೆ ಇದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಕಳೆದ ವರ್ಷದ ತನಕ ಕಂಡು ಬಂದಿಲ್ಲ. ಆದರೆ ಕುಂದಾಪುರ ತಾಲೂಕಿನಲ್ಲಿ ಈ ಬಾರಿ ಮೂವರು ಬಿಸಿಲ ತಾಪಕ್ಕೆ ಮೃತಪಟ್ಟಿದ್ದಾರೆ ಎಂದು ಇಲಾಖೆ ವರದಿ ಮಾಡಿದೆ. ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next