Advertisement

ಸ್ಥಳೀಯ ಚುನಾವಣೆ: ಹಣ ಬಿತ್ತಿ ಓಟು ಬೆಳೆವ ತವಕ

11:48 AM Jan 17, 2019 | |

ಮೈಸೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾ ವಣೆ ನಡೆಯಲಿದ್ದು, ಸ್ಪರ್ಧಾಕಾಂಕ್ಷಿಗಳು ಟಿಕೆಟ್ಗಾಗಿ ಸ್ಥಳೀಯ ಶಾಸಕರು ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ.

Advertisement

ಈಗಾಗಲೇ ವಾರ್ಡ್‌ ಗಟ್ಟಿ ಮಾಡಿಕೊಂಡು ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿರುವವರು ತಮ್ಮದೇ ಆದ ರೀತಿಯಲ್ಲಿ ಹಗಲು-ರಾತ್ರಿ ಎನ್ನದೆ ಜನಸೇವೆ ಮಾಡುತ್ತಾ ಕ್ಷೇತ್ರ ಕಾರ್ಯ ಆರಂಭಿಸಿದ್ದರೆ, ಮತ್ತೂಂದೆಡೆ ಒಂದು ವೇಳೆ ಟಿಕೆಟ್ ಸಿಗದಿದ್ದರೆ ಪಕ್ಷೇತರ ರಾಗಾದರೂ ಚುನಾವಣೆಗೆ ಸ್ಪರ್ಧಿಸಲೇಬೇಕು ಎಂಬ ಆಸೆ ಹೊತ್ತ ವರು ತಾವು ಆಯ್ಕೆ ಮಾಡಿಕೊಂಡಿರುವ ವಾರ್ಡ್‌ನ ಮತದಾರರಿಗೆ ಬಣ್ಣ ಬಣ್ಣದ ಆಮಿಷ ಗಳನ್ನು ಒಡ್ಡುವ ಮೂಲಕ ಮನಗೆಲ್ಲಲು ಪ್ರಯತ್ನ ನಡೆಸಿದ್ದಾರೆ.

ಸಕಲ ಸಿದ್ಧತೆ: ಜಿಲ್ಲೆಯ ಹುಣಸೂರು, ನಂಜನಗೂಡು ನಗರಸಭೆಗಳು, ಕೆ.ಆರ್‌. ನಗರ ಹಾಗೂ ಬನ್ನೂರು ಪುರಸಭೆಗಳಲ್ಲಿನ ಚುನಾಯಿತ ಸದಸ್ಯರ ಅವಧಿ ಮಾರ್ಚ್‌ಗೆ ಪೂರ್ಣಗೊಳ್ಳಲಿರುವುದರಿಂದ ಅಷ್ಟರೊ ಳಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಈಗಾಗಲೇ ಸಿದ್ಧತೆ ಆರಂಭಿಸಿದೆ.

ಅಸ್ತಿವ ಉಳಿಕೊಳ್ಳಲು ಹರಸಾಹಸ: ಎರಡನೇ ಹಂತದಲ್ಲಿ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆಗಳ ಬಗ್ಗೆ ಸ್ವತಃ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್‌.ಶ್ರೀನಿವಾಸಾಚಾರ್‌ ಅವರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿಗಳ ಸಭೆ ನಡೆಸಿ, ಚುನಾವಣಾ ಸಿದ್ಧತೆ ಮತ್ತು ಬಂದೋಬಸ್ತ್ ವ್ಯವಸ್ಥೆ ಬಗ್ಗೆ ಸಲಹೆ ಸೂಚನೆ ನೀಡಿ ಹೋಗಿದ್ದು, ಯಾವುದೇ ಸಂದರ್ಭದಲ್ಲಿ ಚುನಾವಣಾ ವೇಳಾಪಟ್ಟಿ ಹೊರಬೀಳುವ ಸಾಧ್ಯತೆ ಇದೆ.ವಾರ್ಡ್‌ಗಳ ಪುನರ್‌ ವಿಂಗಡಣೆಯಿಂದಾಗಿ ಹಲವರಿಗೆ ಸ್ಪರ್ಧೆಗೆ ಅವಕಾಶವಿಲ್ಲವಾದರೂ ಆ ವಾರ್ಡ್‌ಗೆ ತಮ್ಮ ಪತ್ನಿ ಅಥವಾ ಸಂಬಂಧಿಕರನ್ನು ನಿಲ್ಲಿಸಿ -ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ಆಡಳಿತಾರೂಢ ಪಕ್ಷದ ಶಾಸಕರ ಆಪ್ತ ಬಳಗದಲ್ಲಿರುವ ಹಾಲಿ ಸದಸ್ಯರು ಕ್ಷೇತ್ರದ ಮೀಸಲಾತಿ ಬದಲಾಗದಂತೆ ನೋಡಿಕೊಳ್ಳುವ ಮೂಲಕ ಜಯ ನಮ್ಮದೇ ಎಂದು ಬೀಗುತ್ತಿದ್ದಾರೆ.

6 ತಿಂಗಳಿಂದಲೇ ತಯಾರಿ: ಈ ಬಾರಿ ಚುನಾವಣೆ ಯಲ್ಲಿ ನಿಂತು-ಗೆದ್ದು ಜನಸೇವೆ ಮಾಡಬೇಕು ಎಂಬ ಹಂಬಲ ಹೊಂದಿರುವವರು ಕಳೆದ ಆರು ತಿಂಗಳಿಂದಲೇ ಕ್ಷೇತ್ರ ಕಾರ್ಯ ಆರಂಭಿಸಿದ್ದಾರೆ. ಹಾಲಿ ಸದಸ್ಯರಿಗಿಂತ ಹೆಚ್ಚಾಗಿ ವಾರ್ಡ್‌ ಜನರ ಕುಂದುಕೊರತೆ ಆಲಿಸಲು ಮುಂದಾಗಿರುವ ಸ್ಪರ್ಧಾಕಾಂಕ್ಷಿಗಳು, ತಮ್ಮ ವಾರ್ಡ್‌ಗೆ ಸಂಬಂಧಿಸಿದ ಮತದಾರರ ಪಟ್ಟಿ ಹಿಡಿದು, ಮೊದಲ ಹಂತವಾಗಿ ನಿರ್ದಿಷ್ಟ ಹೆಸರನ್ನು ಗುರುತು ಹಾಕಿಕೊಂಡು ಈ ಮತತದಾರರು ಯಾರ ಪರ, ಯಾರಿಗೆ ಓಟ್ ಮಾಡುತ್ತಾರೆ, ನಮ್ಮ ಪರ ಮನ ವೊಲಿಸಬಹುದಾ? ಎಂದು ಸ್ನೇಹಿತರೊಟ್ಟಿಗೆ ಪಾನ ಗೋಷ್ಠಿಗಳಲ್ಲಿ ಲೆಕ್ಕಚಾರದಲ್ಲಿ ನಿರತರಾಗಿದ್ದಾರೆ. ಮತ ದಾರರ ಪಟ್ಟಿಯನ್ನು ಮೂರು ಭಾಗ ಮಾಡಿಕೊಂಡು ಇಂಥವರ ಓಟು ನಮಗೆ ಬಂದೇ ಬರುತ್ತದೆ. ಪ್ರಯತ್ನ ಪಟ್ಟರೆ ಇವರ ಓಟು ಪಡೆಯಬ ಹುದು, ಏನು ಮಾಡಿ ದರು ಇವರ ಓಟು ನಮಗೆ ಬರುವುದಿಲ್ಲ ಎಂದು ಕೂಡು-ಕಳೆಯುವ ಲೆಕ್ಕಾಚಾರ ದಲ್ಲಿ ತೊಡಗಿದ್ದಾರೆ.

Advertisement

ಯುವಕರ ಮನ ಗೆಲ್ಲುವ ಪ್ರಯತ್ನ: ಗೌರಿ-ಗಣೇಶ ಹಬ್ಬದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹಣ ನೀಡುವ ಮೂಲಕ ಯುವಕರ ಮನಗೆಲ್ಲುವ ಪ್ರಯತ್ನ ಮಾಡಿದ ಈ ನಾಯಕರು, ಗೌರಿ ಹಬ್ಬದ ದಿನ ಮುತ್ತೈದೆಯರಿಗೆ ಬಾಗಿನ ಕೊಡುವುದು, ದೀಪಾವಳಿ ಯಲ್ಲಿ ಯುವಕರಿಗೆ ಪಟಾಕಿ ಕೊಡಿಸುವುದು ಸೇರಿದಂತೆ ಯಾವುದೇ ಹಬ್ಬಗಳನ್ನೂ ಬಿಡುತ್ತಿಲ್ಲ. ಜೊತೆಗೆ ಯುವಕರಿಗೆ ಆಗಾಗ್ಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ಫ‌ಂಡಿಂಗ್‌ ಮಾಡಿ ಎಲ್ಲದರ ಮೇಲೂ ಹಣವನ್ನು ಬಿತ್ತಿ ಓಟು ಬೆಳೆಯುವ ತವಕದಲ್ಲಿದ್ದಾರೆ.

ಮನೆ ಮನೆಗೆ ಕ್ಯಾಲೆಂಡರ್‌ ವಿತರಣೆ: ಇನ್ನೂ ಕೆಲವರು ಮಹಿಳಾ ಸಂಘದವರಿಗೆ ವಾರಗಳ ಕಾಲ ಧರ್ಮಸ್ಥಳ, ಸುಬ್ರಹ್ಮಣ್ಯ, ಮಲೆ ಮಹದೇಶ್ವರ ಬೆಟ್ಟ, ತಮಿಳು ನಾಡಿನ ದೇವಸ್ಥಾನಗಳಿಗೆ ಕರೆದೊ ಯ್ಯುವ ತೀರ್ಥಯಾತ್ರೆಯನ್ನೂ ಪ್ರಾಯೋಜಿಸು ತ್ತಿದ್ದಾರೆ. ಧನುರ್ಮಾಸ ಪೂಜೆ ಹೆಸರಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳು, ಸ್ಪರ್ಧೆಗಳನ್ನು ಆಯೋಜಿಸಿ, ಬಹುಮಾನ ಗಳನ್ನು ಪ್ರಾಯೋಜಿಸುವ ಮೂಲಕ ತಮ್ಮ ಹಣದಲ್ಲೇ ವೇದಿಕೆ ಕಲ್ಪಿಸಿಕೊಂಡು ಭಾಷಣ ಬಿಗಿದು ಜನನಾಯಕ ನೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಹೊಸ ವರ್ಷದ ಹೆಸರಿನಲ್ಲಿ ಎಲ್ಲರ ಮನೆಗೆ ಕೇಕ್‌ ಕಳುಹಿಸುವುದು, ದೊಡ್ಡದಾಗಿ ತಮ್ಮ ಫೋಟೋ ಇರುವ ಕ್ಯಾಲೆಂಡರ್‌ ಮಾಡಿಸಿ ಮನೆ ಮನೆಗೆ ತಲುಪಿಸಿ, ತಮ್ಮ ಮುಖ ಪರಿಚಯಕ್ಕೆ ಹವಣಿಸುವುದು ತಪ್ಪಿಲ್ಲ. ಹೀಗಾಗಿ ಈಗ ಬೆಳಗಾದರೆ ವಾರ್ಡ್‌ಗಳಲ್ಲಿ ಗರಿಗರಿ ಬಟ್ಟೆ ಧರಿಸಿದ ಹುರಿಯಾಳುಗಳು ಜನಸೇವೆಗೆ ಟೊಂಕಕಟ್ಟಿ ನಿಂತಿರು ವುದು ಕಂಡುಬರುತ್ತದೆ.

ವಾರ್ಡ್‌ ಕಡೆ ಬರಲಿ: ಇನ್ನು ಮತದಾನದ ಹಿಂದಿನ ದಿನ ಹಣವನ್ನು ಚೆಲ್ಲಿ ಓಟು ಪಡೆದು ಗೆದ್ದು ಬರುವ ಕಲೆಯನ್ನು ಕರಗತ ಮಾಡಿಕೊಂಡ ಕೆಲವರು ಗೆದ್ದು ಹೋಗಿ ಐದು ವರ್ಷಗಳಾದರೂ ವಾರ್ಡ್‌ಗಳ ಅಭಿವೃದ್ಧಿ ಕಡೆಗೆ ಗಮನಹರಿಸುವುದಿರಲಿ, ವಾರ್ಡ್‌ ಜನರ ಕುಂದುಕೊರತೆ ಆಲಿಸಲೂ ಬರುವುದಿಲ್ಲ , ಸಮಸ್ಯೆ ಹೇಳಿಕೊಳ್ಳಲು ಫೋನ್‌ ಮಾಡಿದರೆ ಓಟು ಹಾಕಿದ್ದೀರಾ ಅಂತಾ ನಿಮ್ಮ ಮನೆ ಮುಂದೆನೇ ಇರೋಕ್ಕಾಗುತ್ತಾ ಎಂದು ದರ್ಪದಿಂದ ಮಾತನಾಡು ತ್ತಾರೆ ಎನ್ನುತ್ತಾರೆ ನಮ್ಮ ವಾರ್ಡ್‌ನಲ್ಲಿ ಸರಿಯಾಗಿ ನೀರು ಬರುವುದಿಲ್ಲ, ಕಸ ವಿಲೇವಾರಿ ಸರಿಇಲ್ಲ, ಬೀದಿ ದೀಪ ಕೆಟ್ಟು ನಿಂತಿವೆ, ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ ಎಂದು ದೂರುಗಳ ಪಟ್ಟಿಯನ್ನೇ ಮಾಡುವ ಮಹಿಳೆಯರು, ಈ ಬಾರಿ ಓಟು ಕೇಳಲು ಬರಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಎಣ್ಣೆ ದುಡ್ಡು ಮಡ್ಗು!
ಮತಬೇಟೆಗಾಗಿ ಪ್ರವಾಸ ಆಯೋಜಿಸಿದ್ದ ಯುವ ರಾಜಕಾರಣಿಯೊಬ್ಬರು ಮನೆಮಂದಿ ಯನ್ನೆಲ್ಲಾ ಒಟ್ಟಿಗೆ ಕರೆದೊಯ್ದು ಯಡವಟ್ಟು ಮಾಡಿಕೊಂಡ ಇಂಟರೆಸ್ಟಿಂಗ್‌ ಘಟನೆಯೂ ನಡೆದಿದೆ. ತಮಿಳು ನಾಡಿಗೆ ಪ್ರವಾಸ ಕರೆದೊಯ್ದಿದ್ದ ಸ್ಪರ್ಧಾ ಕಾಂಕ್ಷಿ ಸಂಜೆಯಾಗುತ್ತಲೇ ವಾಸ್ತವ್ಯಕ್ಕೆ ಏರ್ಪಾಡು ಮಾಡಿದ್ದ ಹೋಟೆಲ್‌ನಲ್ಲಿ ಗಂಡಸರಿಗೆ ಪಾನ ಗೋಷ್ಠಿ ಆಯೋಜಿಸಿದ್ದ ರಂತೆ, ಇದನ್ನು ಕಂಡ ಮಹಿಳೆಯೊಬ್ಬರು ನನಗೆ ಎಣ್ಣೆ ಬೇಡ, ನನ್ನ ಗಂಡ ಕುಡಿದ ಬಿಲ್‌ ಎಷ್ಟಾಗುತ್ತದೋ ಅಷ್ಟು ಹಣ ನನ್ನ ಕೈಗಿಡ ಬೇಕು ಇಲ್ಲಾಂದ್ರ ಗ್ರಹಚಾರ ಬಿಡಿಸ್ತೀನಿ ಎಂದಾಗ ಈತ ಸುಸ್ತು!

•ಈಗಾಗಲೇ ವಾರ್ಡ್‌ ಗಟ್ಟಿ ಮಾಡಿಕೊಂಡು ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿರುವ ಸ್ಪರ್ಧಿಗಳು
•ಚುನಾಯಿತ ಸದಸ್ಯರ ಅವಧಿ ಮಾರ್ಚ್‌ಗೆ ಪೂರ್ಣಗೊಳ್ಳ ಲಿರುವುದರಿಂದ ಅಷ್ಟರೊಳಗೆ ಚುನಾವಣೆ

ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next