Advertisement

ಪುರಸಭೆ ಗಾದಿಗಾಗಿ ತುರುಸಿನ ಪೈಪೋಟಿ

08:06 PM Nov 08, 2020 | Suhan S |

ಶಿಕಾರಿಪುರ: ಭಾರೀ ಕುತೂಹಲಕ್ಕೆ ಕಾರಣವಾಗಿರುವ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನ. 9 ರಂದು ನಡೆಯುತ್ತಿದೆ. ಬಿಜೆಪಿ ಅಧಿಕಾರಹಿಡಿಯುವು ನಿಶ್ಚಿತವಾಗಿದ್ದು ಈಗಾಗಲೇ ಎಲ್ಲಾ ರೀತಿಯ ತಯಾರಿಯನ್ನು ಬಿಜೆಪಿ ಮಾಡಿಕೊಂಡಿದೆ.

Advertisement

ಈ ಬಾರಿ ಚುನಾವಣೆಯಲ್ಲಿ ಪಕ್ಷಗಳ ಬಲಾಬಲ: ಶಿಕಾರಿಪುರ ಪುರಸಭೆ ಒಟ್ಟು 23 ಸ್ಥಾನಗಳನ್ನು ಹೊಂದಿದ್ದು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ 12 ಸ್ಥಾನ ಪಡೆದಿದ್ದು ಬಿಜೆಪಿ 8 ಸ್ಥಾನ ಪಡೆದುಕೊಂಡಿತ್ತು. ಪಕ್ಷೇತರರು 3 ಸ್ಥಾನ ಪಡೆದಿದ್ದರು

ಇನ್ನೇನು ಕಾಂಗ್ರೆಸ್‌ ಅಧಿಕಾರ ಹಿಡಿಯುತ್ತದೆ ಎನ್ನುವಷ್ಟರಲ್ಲಿ ಇಬ್ಬರು ಕಾಂಗ್ರೆಸ್‌ ಸದಸ್ಯರು ಪುರಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದರು. 9 ನೇ ವಾರ್ಡ್‌ನ ರಮೇಶ್‌, 20 ನೇ ವಾರ್ಡ್‌ನ ಉಮಾವತಿ ರಾಜೀನಾಮೆ ನೀಡಿದ್ದರು. ಇದರ ಜೊತೆಗೆ 3 ಜನ ಪಕ್ಷೇತರರು ಬಿಜೆಪಿ ಸೇರಿದರು. ವಾರದ ಹಿಂದೆ ಮತ್ತೂಬ್ಬ ಪುರಸಭಾ ಕಾಂಗ್ರೆಸ್‌ ಸದಸ್ಯೆ 5 ನೇ ವಾರ್ಡ್‌ನ ಜ್ಯೋತಿ ಸಿದ್ದಲಿಂಗೇಶ್‌ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.

ಇದರಿಂದ ಬಿಜೆಪಿ 8 ಸ್ಥಾನ, 3 ಪಕ್ಷೇತರರು ಸೇರಿ 11 ಸದಸ್ಯ ಬಲವಿದ್ದು ಶಾಸಕರು ಮತ್ತು ಸಂಸದರು ಕೂಡ ಮತ ಹಾಕಬಹುದಾಗಿದೆ. ಕಾಂಗ್ರೆಸ್‌ನಲ್ಲಿ ಇದ 12 ಜನ ಸದಸ್ಯರಲ್ಲಿ ಈಗ 9 ಕ್ಕೆ ಇಳಿದಿದೆ. ಇನ್ನೂ ಇಬ್ಬರು ಸದಸ್ಯರು ಬಿಜೆಪಿ ಸೇರುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪುರಸಭೆ ಅಧಿಕಾರ ಹಿಡಿಯಲು ಮುಂದಾಗಿದ್ದ ಕಾಂಗ್ರೆಸ್‌ಗೆ ಭಾರೀ ನಿರಾಸೆಯಾಗಿದ್ದು ಬಿಜೆಪಿ ಪುರಸಭೆ ಆಡಳಿತ ನಡೆಸಲು ಸಿದ್ಧವಾಗಿದೆ .

ಯಾರಾಗ್ತಾರೆ ಪುರಸಭೆ ಅಧ್ಯಕ್ಷರು?: ಶಿಕಾರಿಪುರ ಪುರಸಭೆಯ ಅಧ್ಯಕ್ಷ ಸ್ಥಾನ ಈ ಬಾರಿಯ ಮೀಸಲಾತಿಯ ಬಿಸಿಎಂ “ಎ ಮಹಿಳೆಗೆ ನೀಡಿದ್ದು ಈ ಮೀಸಲಾತಿಗೆ ಬಿಜೆಪಿಯಲ್ಲಿ ಪ್ರಸ್ತುತ 3 ಜನ ಸದಸ್ಯರು ಇದ್ದಾರೆ. 16 ನೇ ವಾರ್ಡ್‌ನ ಪುರಸಭಾ ಸದಸ್ಯರಾದ ರೇಖಾಬಾಯಿ ಮಂಜುಸಿಂಗ್‌ ಪಕ್ಷೇತರಾಗಿ ಜಯಗಳಿಸಿ ಮರುದಿನವೇ ಬಿಜೆಪಿ ಸೇರಿದ್ದರು. ಅವರ ಮಾವ ಕೃಷ್ಣಸಿಂಗ್‌ ಪುರಸಭಾ ಮಾಜಿ ಅಧ್ಯಕ್ಷರಾಗಿದ್ದು ಹಾಗೂ ಬಿಜೆಪಿ ಕಟ್ಟಾಳು ಎನ್ನಲಾಗಿದೆ. ಇನ್ನು 2 ನೇ ವಾರ್ಡ್‌ ಲಕ್ಷ್ಮೀ ಮಹಾಲಿಂಗಪ್ಪ ಬಿಜೆಪಿಯಿಂದ ಜಯ ಗಳಿಸಿದ್ದು ಬಿಜೆಪಿಯಲ್ಲಿ ಮಹಾಲಿಂಗಪ್ಪ ಅವರ ಸಹೋದರ ಶಾಂತಕುಮಾರ್‌ (ಶಾಂತಣ್ಣ) ಕ್ರೀಯಶೀಲ ಕಾರ್ಯಕರ್ತರಾಗಿದ್ದರು.

Advertisement

ಪ್ರಸ್ತುತ ಅವರು ಮರಣ ಹೊಂದಿದ್ದು ಅವರ ಜನಪರವಾದ ಕಾಳಜಿ ಇಂದಿಗೂ ಜನರ ಮನಸ್ಸಿನಲ್ಲಿ ಇದ್ದು ಲಕ್ಷ್ಮೀ ಮಹಾಲಿಂಗ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. 7 ನೇ ವಾರ್ಡ್‌ನ ರೂಪಾ ಮಂಜುನಾಥ್‌ ಕೂಡ ಪೈಪೋಟಿಯಲ್ಲಿದ್ದಾರೆ. ಕಳೆದ 20 ವರ್ಷದಿಂದಲೂ ಈ ವಾರ್ಡ್‌ನಲ್ಲಿ ಕಾಂಗ್ರೆಸ್‌ ಪಕ್ಷವೇ ಜಯಗಳಿಸುತ್ತಿದ್ದು ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಈ ವಾರ್ಡ್‌ನಲ್ಲಿ ಗೆದ್ದಿದೆ. ಬಿಜೆಪಿ ಹೊಸಬರಿಗೆ, ಯುವಕರಿಗೆ ಇತ್ತೀಚೆಗೆ ಹೆಚ್ಚಿನ ಒಲವು ತೋರುತ್ತಿದ್ದು ಇವರಿಗೆ ಅಧ್ಯಕ್ಷ ಸ್ಥಾನ ನೀಡಬಹುದಾ ಕಾದು ನೋಡಬೇಕಾಗಿದೆ. ಈ ಮೂರು ಸದಸ್ಯರು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದು ಪಕ್ಷದ ನಿರ್ಧಾರವೇ ಅಂತಿಮ. ಪಕ್ಷದ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ ಎಂದಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಪೈಪೋಟಿ: ಶಿಕಾರಿಪುರ ಪುರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಪೊಪೋಟಿ ಎದುರಾಗಿದೆ. ಏಕೆಂದರೆ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಘೋಷಣೆಯಾಗಿದ್ದು ಪಕ್ಷೇತರರಿಗೆ ನೀಡುತ್ತದೆಯೇ ಅಥವಾ ಪಕ್ಷದಲ್ಲಿಯೇ ಇರುವವರನ್ನು ಗುರುತಿಸಿ ಸ್ಥಾನ ನೀಡುತ್ತದಯೇ ಎಂಬುದು ಸಾಕಷ್ಟು ಗೊಂದಲವಾಗಿದ್ದು ಸೋಮವಾರ ಚುನಾವಣೆ ನಂತರ ಯಾರು ಉಪಾಧ್ಯಕ್ಷರಾಗುತ್ತಾರೆ ಎನ್ನುವುದು ತಿಳಿಯುತ್ತದೆ. ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಕುರಿತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಣಿ ಮಾಲತೇಶ್‌ ಮಾತನಾಡಿ, ಶಿಕಾರಿಪುರದ ಜನತೆ ಬಿಜೆಪಿ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್‌ಗೆ ಬಹುಮತ ನೀಡಿದ್ದರು. ಆದರೆ ಕೆಲ ಪಕ್ಷದ್ರೋಹಿಗಳು ಕಾಂಗ್ರೆಸ್‌ಗೆ, ಪುರಸಭೆಗೆ ರಾಜೀನಾಮೆ ನೀಡಿ ಬಿಜೆಪಿಯವರ ಆಮಿಷಕ್ಕೆ ಒಳಗಾಗಿದ್ದಾರೆ.

ಬಿಜೆಪಿಯವರು ಅಧಿಕಾರಕ್ಕಾಗಿ ರಾಜ್ಯದಲ್ಲಿ ಹೇಗೆ ಎಂಎಲ್‌ಎಗಳನ್ನು ರಾಜೀನಾಮೆ ಕೊಡಿಸಿ  ಪಕ್ಷಕ್ಕೆ ಸೇರಿಸಿಕೊಂಡರೋ ಅದೇ ರೀತಿಯಲ್ಲಿ ಶಿಕಾರಿಪುರದಲ್ಲೂ ನಡೆದಿದೆ. ಇದು ಅವರಿಗೆ ಹೊಸದೇನಲ್ಲ ನಾವು ಪ್ರಬಲ ವಿರೋಧ ಪಕ್ಷವಾಗಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು. ಒಟ್ಟಿನಲ್ಲಿ ಶಿಕಾರಿಪುರ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಈ ಬಾರಿ ಅತ್ಯಂತ ಕುತೂಹಲಕ್ಕೆ ಸಾಕ್ಷಿಯಾಗಿದೆ. ಸೋಮವಾರ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯ ನಂತರ ಇದಕ್ಕೆಲ್ಲ ತೆರೆ ಬೀಳಲಿದೆ. ರಾಜೀನಾಮೆ ನೀಡಿದ ಸ್ಥಾನಗಳಿಗೆ ಮರು ಚುನಾವಣೆ ನಡೆಯಲಿದೆ.

 

-ರಘು ಶಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next