Advertisement
ಮೀಸಲಾತಿಗೆ ಸದಸ್ಯೆ ಆಕ್ಷೇಪ: ಕೀಲುಕೋಟೆ ವಾರ್ಡ್ ನ ನಗರಸಭಾ ಸದಸ್ಯೆ ಎನ್.ಎಂ.ಭಾಗ್ಯಮ್ಮ ಜಯರಾಂ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿರುವ ಮೀಸಲಾತಿ ಕುರಿತು ಆಕ್ಷೇಪಣೆ ಸಲ್ಲಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇವರ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ಕೋಲಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸಲು ವೇಳಾಪಟ್ಟಿಯ ಪ್ರಕಾರ ಅವಕಾಶ ಕಲ್ಪಿಸಿದ್ದು, ನ್ಯಾಯಾಲಯದ ಮುಂದಿನ ಆದೇಶ ಪ್ರಕಟವಾಗುವವರೆಗೂ ಫಲಿತಾಂಶ ಪ್ರಕಟಣೆಗೆ ತಡೆಯಾಜ್ಞೆ ವಿಧಿಸಿದೆ. ಇದು ಚುನಾವಣೆ ಗೆದ್ದು ಫಲಿತಾಂಶ ಘೋಷಿಸಿ ಅಂದೇ ಅಧಿಕಾರ ಸ್ವೀಕರಿಸಬೇಕೆಂಬ ಉತ್ಸಾಹದಲ್ಲಿದ್ದವರಿಗೆ ತಣ್ಣೀರು ಎರಚಿದಂತಾಗಿದೆ.
Related Articles
Advertisement
ಕಾಂಗ್ರೆಸ್ ಅಧ್ಯಕ್ಷರಿಂದ ಸದಸ್ಯರಿಗೆ ವಿಪ್ ಜಾರಿ: ಅಧಿಕಾರ ಹಿಡಿಯಲು ಕೊನೆ ದಿನಗಳಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಚಂದ್ರಾರೆಡ್ಡಿ ಮೂಲಕ ಕೋಲಾರ, ಕೆಜಿಎಫ್ ಹಾಗೂಮುಳಬಾಗಿಲಿನ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿಸಿದೆ. ವಿಪ್ ಉಲ್ಲಂ ಸಿದಲ್ಲಿ ಸದಸ್ಯತ್ವ ಅನರ್ಹಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಆದರೂ ಪಕ್ಷದಿಂದ ಹೊರಕ್ಕೆ ಕಾಲಿಟ್ಟವರು ವಿಪ್‌ಗೆ ಹೆದರುತ್ತಿಲ್ಲ. ಮುಖಂಡರ ಸಂಪರ್ಕಕ್ಕೂ ಸಿಗುತ್ತಿಲ್ಲ. ತೋರಿಕೆಗಾಗಿ ಪ್ರತಿಷ್ಠೆ: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯನ್ನು ನಸೀರ್ ಅಹ್ಮದ್ ಕೊನೆ ಕ್ಷಣದಲ್ಲಿ ತೋರಿಕೆಗಾಗಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸಹ ಅಷ್ಟೇತೋರಿಕೆಗೆ ಪಕ್ಷವನ್ನು ಕೋಲಾರ ನಗರಸಭೆಯಲ್ಲಿ ಅಧಿಕಾರಕ್ಕೆ ತರಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಕಾದು ನೋಡುವ ತಂತ್ರ: ಅಧ್ಯಕ್ಷ,ಉಪಾಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ತೀರ್ಮಾನ ಕಾಂಗ್ರೆಸ್ ಬಿಜೆಪಿಯಲ್ಲಿ ಆಗಿಲ್ಲ. ಜೆಡಿಎಸ್ ಈ ವಿಚಾರದಲ್ಲಿ ಸ್ಪಷ್ಟವಾಗಿದೆ. ಅಧ್ಯಕ್ಷ ಸ್ಥಾನವನ್ನು ತಾನಿಟ್ಟುಕೊಂಡು ತನ್ನನ್ನು ಬೆಂಬಲಿಸುವ ಎಸ್‌ಡಿಪಿಐಡಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಿದ್ಧವಿದೆ. ಕೊನೆ ಘಳಿಗೆ ವರೆಗೂ ಕಾದು ನೋಡುವ ತಂತ್ರಕ್ಕೆ ಒಳಗಾಗಿದ್ದಾರೆ. ಕನ್ನಡ ರಾಜ್ಯೋತ್ಸವ ಯಾರಿಗೆ ಕೋಲಾರ ನಗರಸಭೆ ಗಾದಿಯ ಅದೃಷ್ಟ ತರುವುದೋ ಕಾದು ನೋಡಬೇಕಷೆ.
ಎಸ್‌ಡಿಪಿಐ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣು : ಜೆಡಿಎಸ್‌ಗೆ ಬೆಂಬಲ ಸೂಚಿಸಿರುವ ಎಸ್‌ಡಿಪಿಐ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಹೇಗಾದರೂ ಮಾಡಿ ಉಪಾಧ್ಯಕ್ಷ ಸ್ಥಾನವನ್ನಾದರೂ ಉಳಿಸಿಕೊಂಡು ಆಡಳಿತಾರೂಢ ಪಕ್ಷದ ಸಾಮರ್ಥ್ಯ ತೋರಿಸಬೇಕೆಂದು ಬಿಜೆಪಿ ಹವಣಿಸುತ್ತಿದೆ. ಕಾಂಗ್ರೆಸ್‌ನ ಮಂಜುನಾಥ್ ಇತರರು ಉಪಾಧ್ಯಕ್ಷ ಸ್ಥಾನಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಎದ್ದು ಕಾಣಿಸುತ್ತಿದೆ. ಘಟಾನುಘಟಿ ನಾಯಕರು ಸದಸ್ಯರನ್ನು ಆಟವಾಡಲು ಬಿಟ್ಟು ತಮಾಷೆ ನೋಡುತ್ತಿದ್ದಾರೆ.
ಕುರುಬ, ಅಲ್ಪಸಂಖ್ಯಾತರಿಗೆ ಅವಕಾಶ ನೀಡಲು ಚರ್ಚೆ : ಕೋಲಾರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತ ಅಥವಾ ಕುರುಬ ಸಮುದಾಯಕ್ಕೆ ಅವಕಾಶ ಮಾಡಿಕೊಡಲು ಚರ್ಚೆ ನಡೆಯುತ್ತಿದೆ. ಈ ಎರಡು ಸ್ಥಾನದಲ್ಲಿ ಕುರುಬ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರರಾಗಿ ಗೆದ್ದಿರುವ ಕುರುಬ ಸಮುದಾಯದ ಸದಸ್ಯರು ಒಗ್ಗೂಡಿ ಬೆಂಬಲಿಸುವ ಸಾಧ್ಯತೆ ಕುರಿತಂತೆ ಶುಕ್ರವಾರ ಇಡೀ ದಿನ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ, ನಿರೀಕ್ಷಿತ ಸೂಚನೆಗಳು ಸಂಜೆಯವರೆಗೂ ಕಂಡು ಬಂದಿಲ್ಲ.
–ಕೆ.ಎಸ್.ಗಣೇಶ್