ಹುಣಸೂರು: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಲಿದ್ದು, ಅತಂತ್ರ ಫಲಿತಾಂಶ ಬಂದಿರುವುದರಿಂದ ಯಾವ ಪಕ್ಷಕ್ಕೆ ಅಧಿಕಾರ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಅತಿ ಹೆಚ್ಚು ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷವು ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. ಈ ನಡುವೆ ಜೆಡಿಎಸ್ ಪಕ್ಷವು ಬಿಜೆಪಿ, ಪಕ್ಷೇತರರ ಜೊತೆಗೆ ಎಸ್‌ಡಿಪಿಐ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದೆ.
31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್-14, ಜೆಡಿಎಸ್-7, ಬಿಜೆಪಿ-3, ಎಸ್‌ಡಿಪಿಐ-2 ಹಾಗೂ 5ಮಂದಿ ಪಕ್ಷೇತರರು ಆಯ್ಕೆಯಾಗಿದ್ದಾರೆ. ಶಾಸಕರು, ಎಂಎಲ್‌ಸಿ ಹಾಗೂ ಸಂಸದರ ತಲಾ ಒಂದು ಮತ ಸೇರಿ 34 ಮತಗಳು ಇವೆ. ಬಹುಮತಕ್ಕೆ 18 ಮತಗಳು ಅಗತ್ಯವಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಎಸ್‌ಟಿಗೆ ಮೀಸಲಾಗಿದೆ.
ಕಾಂಗ್ರೆಸ್ ಲೆಕ್ಕಾಚಾರ: ಕಾಂಗ್ರೆಸ್‌ನ-14, ಮೂವರು ಪಕ್ಷೇತರರು, ಶಾಸಕ ಮಂಜುನಾಥ್ ಅವರ ಒಂದು ಮತ ಸೇರಿದಂತೆ ಕಾಂಗ್ರೆಸ್ ಬಲ 18ಕ್ಕೆರಲಿದೆ. ಈಗಾಗಲೇ ಮೂವರು ಪಕ್ಷೇತರ ಸದಸ್ಯರಾದ 13ನೇ ವಾರ್ಡ್‌ನ ಮಾಲಿಕ್ ಪಾಷ, 20ನೇ ವಾರ್ಡ್‌ನ ಫರ್ವೀನ್ ತಾಜ್, ಜಿಟಿಡಿ ಬೆಂಬಲಿಗ ಸತೀಶ್‌ಕುಮಾರ್ ಕಾಂಗ್ರೆಸ್ ನೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ. ಇಬ್ಬರು ಎಸ್ ಡಿಪಿಐ ಸದಸ್ಯರ ಬೆಂಬಲ ಗಿಟ್ಟಿಸಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸುತ್ತಿದೆ.
ಜೆಡಿಎಸ್ ಲೆಕ್ಕಾಚಾರ: ಏಳು ಸ್ಥಾನ ಹೊಂದಿರುವ ಜೆಡಿಎಸ್ ಪಕ್ಷವು ಎಸ್‌ಡಿಪಿಐನ ಇಬ್ಬರು ಸದಸ್ಯರ ಬೆಂಬಲ ಪಡೆಯುವ ಸಲುವಾಗಿ 14ನೇ ವಾರ್ಡ್‌ನ ಜೆಡಿಎಸ್‌ನ ಶಹೀನ್ ತಾಜ್ ಅವರನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ. ಇದರೊಂದಿಗೆ ಬಿಜೆಪಿ ಹಾಗೂ ಇಬ್ಬರು ಪಕ್ಷೇತರರು ಹಾಗೂ ಸಂಸದರು, ಎಂಎಲ್‌ಸಿ ವಿಶ್ವನಾಥ್ ಮತಗಳೊಂದಿಗೆ ಅಧಿಕಾರ ಹಿಡಿಯುವ ತಂತ್ರಗಾರಿಕೆ ನಡೆಸುತ್ತಿದೆ. ಕಾಂಗ್ರೆಸ್‌ಗೆ ಟಾಂಗ್ ಕೊಡಲು ಕೆ.ಆರ್. ನಗರ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಕಾಂಗ್ರೆಸ್ ಆಕಾಂಕ್ಷಿಗಳು: ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಾದ 15ನೇ ವಾರ್ಡ್‌ನ ಸೌರಭ ಸಿದ್ದರಾಜು, 9ನೇ ವಾರ್ಡ್‌ನ ಶಮೀನಾ ಫರ್ವಿನ್, 3ನೇ ವಾರ್ಡ್ ನ ಎಸ್.ಅನುಷಾ, 24ನೇ ವಾರ್ಡ್‌ನ ಗೀತಾ ಹಾಗೂ 29ನೇ ವಾರ್ಡ್‌ನ ಪ್ರಿಯಾಂಕ ಥೋಮಸ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನವು ಎಸ್‌ಟಿಗೆ ಮೀಸಲಾಗಿದ್ದು, ಕಾಂಗ್ರೆಸ್‌ನಿಂದ 6ನೇ ವಾರ್ಡ್‌ನ ದೇವನಾಯ್ಕ ಸ್ಪರ್ಧೆ ಖಚಿತವಾಗಿದೆ. ಇನ್ನು ಜೆಡಿಎಸ್‌ನಿಂದ 1ನೇ ವಾರ್ಡ್‌ನ ದೇವರಾಜು ಅಥವಾ ಎಸ್‌ಟಿ ಮೀಸಲಿನಿಂದ ಪಕ್ಷೇತರ ಸದಸ್ಯೆ ಎಚ್.ಡಿ.ಆಶಾ ಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಯಲಿದ್ದಾರೆ.
ಒಟ್ಟಾರೆ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಶಾಸಕ ಮಂಜುನಾಥ್ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದಾರೆ. ಜೆಡಿಎಸ್ ಪಕ್ಷವು ಬಿಜೆಪಿ ಸದಸ್ಯರು, ಇಬ್ಬರು ಎಸ್‌ಡಿಪಿಐ ಸದಸ್ಯರು, ಇಬ್ಬರು ಪಕ್ಷೇತರರು ಬೆಂಬಲಿಸುವ ವಿಶ್ವಾಸದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿದೆ.