Advertisement

Karnataka: ಅಕ್ರಮ ಚಟುವಟಿಕೆಗಳಿಗೆ ಸ್ಥಳೀಯ ಅಧಿಕಾರಿಗಳೇ ಹೊಣೆ: ಸಿಎಂ ಎಚ್ಚರಿಕೆ

11:18 PM Sep 15, 2023 | Team Udayavani |

ಬೆಂಗಳೂರು: ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲಿ ಅಕ್ರಮ ಚಟುವಟಿಕೆಗಳು, ಕಾನೂನು ಬಾಹಿರ ಸಂಘಟಿತ ಅಪರಾಧಗಳು ನಡೆಯುತ್ತಿದ್ದರೆ ಸ್ಥಳೀಯ ಡಿಸಿಪಿ, ಎಸ್‌.ಪಿ. ಮಟ್ಟದ ಅಧಿಕಾರಿಗಳೇ ಜವಾಬ್ದಾರರಾಗಲಿದ್ದು, ಅವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಪೊಲೀಸರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

Advertisement

ಬೆಂಗಳೂರಿನ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ಪೊಲೀಸ್‌ ವರಿಷ್ಠಾಧಿಕಾರಿಗಳ ವಾರ್ಷಿಕ ಸಮ್ಮೇಳನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದ ಎಸ್‌ಪಿ, ಐಜಿ, ಡಿಐಜಿ, ಎಡಿಜಿಪಿಗಳು ಹಾಗೂ ಪೊಲೀಸ್‌ ಮಹಾ ನಿರ್ದೇಶಕರು ಇವರನ್ನು ಭೇಟಿಯಾಗಿ ಸಭೆ ನಡೆಸಿದ್ದೇನೆ. ನಮ್ಮ ಸರಕಾರ ಕೇವಲ ಕೆಳ ಹಂತದ ಅಧಿಕಾರಿಗಳು, ಸಿಬಂದಿ ವಿರುದ್ಧ ಕ್ರಮ ಕೈಗೊಂಡು ಕೈ ತೊಳೆದುಕೊಳ್ಳುವುದಿಲ್ಲ. ಹಿರಿಯ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ನೀವು ಪೊಲೀಸ್‌ ಠಾಣೆಗಳಿಗೆ ಭೇಟಿ ಕೊಡಬೇಕು. ಗಸ್ತು ತಿರುಗಬೇಕು. ಡಿಸಿಪಿ, ಎಸ್‌ಪಿ ವ್ಯಾಪ್ತಿಯಲ್ಲಿ ಅಪರಾಧ ನಿಯಂತ್ರಣ ಆಗದೇ ಹೋದರೆ ನಾವು ಡಿಸಿಪಿ, ಎಸ್‌ಪಿಗಳನ್ನು ಜವಾಬ್ದಾರರಾಗಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಕರ್ತವ್ಯ ಲೋಪ ಎಸಗುವ ಅಧಿಕಾರಿಗಳನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದರು.

ಸ್ವಯಂ ಪ್ರೇರಿತ ದೂರು
ಸುಳ್ಳು ಸುದ್ದಿ, ವದಂತಿ ಮೂಲಕ ಸಮಾಜದ ಶಾಂತಿ ಕದಡುವವರ ವಿರುದ್ಧ ಸ್ವಯಂಪ್ರೇರಿತ ಎಫ್ಐಆರ್‌ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ ಪ್ರಕರಣಗಳಲ್ಲಿ ದೂರು ಕೊಡುವವರು ಬರಲಿ ಎಂದು ಕಾಯುತ್ತಾ ಕುಳಿತುಕೊಳ್ಳಬಾರದು. ಅನೈತಿಕ ಪೊಲೀಸ್‌ಗಿರಿ ವಿಚಾರದಲ್ಲಿ ಸರಕಾರ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದರು.

ಕ್ರಿಯಾಶೀಲ ಪೊಲೀಸ್‌ ಇಲಾಖೆ
ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಮಾತನಾಡಿ, ಮುಖ್ಯಮಂತ್ರಿಗಳು ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಉದ್ದೇಶಿಸಿ ಅನೇಕ ವಿಚಾರಗಳನ್ನು ಪ್ರಸ್ತಾವಿಸಿದ್ದಾರೆ. ಕರ್ನಾಟಕ ಪೊಲೀಸ್‌ ಇಡೀ ದೇಶದಲ್ಲೇ ಕ್ರಿಯಾಶೀಲವಾದ ಇಲಾಖೆ ಎಂದು ಹೆಸರು ಪಡೆದುಕೊಂಡಿದೆ. ಇತ್ತೀಚೆಗೆ ಐಟಿ ತಂತ್ರಜ್ಞಾನ ಬಳಸಿ ರಾಜ್ಯದ 1,116 ಪೊಲೀಸ್‌ ಠಾಣೆ ವ್ಯಾಪ್ತಿಗಳಲ್ಲೂ ನಿಗಾ ಇಡಲಾಗುತ್ತಿದೆ. ಜನ ಸಾಮಾನ್ಯರಿಗೆ ನ್ಯಾಯ ಕೊಡುವ ಬದ್ದತೆ ನಮ್ಮ ಸರಕಾರಕ್ಕಿದೆ ಎಂದರು.

Advertisement

ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಆಲೋಕ್‌ ಮೋಹನ್‌, ನಗರ ಪೊಲೀಸ್‌ ಆಯುಕ್ತರಾದ ದಯಾನಂದ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

ವಾಹನ ಖರೀದಿಗೆ 100 ಕೋ. ರೂ. ಮಂಜೂರು
ಪೊಲೀಸರಿಗೆ ಹೊಸ ವಾಹನ ಖರೀದಿಸಲು 100 ಕೋ. ರೂ. ಮಂಜೂರು ಮಾಡಲಾಗುತ್ತಿದೆ. ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುವುದು. ಸಿಸಿಬಿ ಪೊಲೀಸ್‌ ವಿಭಾಗಕ್ಕೆ ಬಲ ತುಂಬುವ ನಿಟ್ಟಿನಲ್ಲಿ 230 ಹೆಚ್ಚುವರಿ ಪೊಲೀಸ್‌ ಸಿಬಂದಿ ಮಂಜೂರು ಮಾಡುತ್ತಿದ್ದೇವೆ. 60 ಕೋಟಿ ರೂ. ವೆಚ್ಚದಲ್ಲಿ ಸಿಎಆರ್‌ ಪೂರ್ವ ಘಟಕ ನಿರ್ಮಿಸಲಾಗುವುದು. ಹಿಂದೆ ಇದ್ದ ಬೆಂಗಳೂರು ಪೊಲೀಸ್‌ ಆಯುಕ್ತರ ಕಚೇರಿಗೆ 148 ವರ್ಷಗಳ ಪರಂಪರೆ ಇದೆ. ಅದನ್ನು 3 ಕೋಟಿ ರೂ. ವಚ್ಚದಲ್ಲಿ ನವೀಕರಿಸಲು ಆದೇಶ ಹೊರಡಿಸಲಾಗುವುದು ಎಂದು ಸಿಎಂ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next