ವಿಜಯಪುರ: ನಗರ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆಯಲ್ಲಿ ಸೇವೆ ಸಲ್ಲಿಸುವ ಚಾಲಕ-ಕಾರ್ಮಿಕರ ಸೇವೆ ಕಾಯಂಗೆ ಆಗ್ರಹಿಸಿ ವಿಜಯಪುರ ಮಹಾನಗರ ಪಾಲಿಕೆ, ವಾಹನ ಚಾಲಕರ ಮತ್ತು ನಿರ್ವಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಶಂಕರ ಚಲವಾದಿ ಮಾತನಾಡಿ, ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಪಂನಲ್ಲಿ ಕಳೆದ ಹಲವು ವರ್ಷಗಳಿಂದ ರಾಜ್ಯಾದ್ಯಂತ 8000 ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಸೇವೆಯಲ್ಲಿ ತೊಡಗಿದ್ದಾರೆ. ಆ ಮೂಲಕ ನಗರ ಪಟ್ಟಣಗಳ ಸ್ವತ್ಛತೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಸೇವಾನಿರತ ಸಾವಿರಾರು ವಾಹನ ಚಾಲಕರಿಗೆ ಕನಿಷ್ಟ ಕೂಲಿಯಾಗಲಿ, ನ್ಯಾಯೋಜಿತ ಸಂವಿಧಾನ ಬದ್ಧ ಕನಿಷ್ಟ ಸೌಕರ್ಯಗಳಾಗಲಿ ಇದುವರೆಗೂ ದೊರೆಯುತ್ತಿಲ್ಲ. ಇದರಿಂದ ಅವರ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ದೂರಿದರು.
ರಾಜ್ಯಾದ್ಯಂತ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಸಮಸ್ಯೆ, ಸಂಕಷ್ಟ, ವೇತನ ಗುತ್ತಿಗೆ ಪದ್ಧತಿಯಿಂದ ಆಗುತ್ತಿರುವ ಅನ್ಯಾಯ ಆಹಾರ, ವಸತಿ ಹಾಗೂ ಆರೋಗ್ಯ ಸೌಕರ್ಯ ಪಡೆಯಲು ಹಾಗೂ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಷ್ಟೆಲ್ಲ ಕಷ್ಟ ಸಹಿಸಿಕೊಂಡು ನಿತ್ಯ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ನಗರ ಪಟ್ಟಣಗಳ ಸ್ವತ್ಛತೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕಾದ ಸರ್ಕಾರ ಅನ್ಯಾಯ ಮಾಡುತ್ತಿದೆ. ಇದರಿಂದ ಶ್ರಮಕ್ಕೆ ಸರಿಯಾದ ವೇತನ ದೊರೆಯದೇ ಇರುವುದರಿಂದ ವಾಹನ ಚಾಲಕರ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದರು. ಸದ್ಯ ಅಗತ್ಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಆರೋಗ್ಯ ಚಿಕಿತ್ಸೆ ಪಡೆಯುವುದು ದುಸ್ತರವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಯಾವುದೇ ಸೌಲಭ್ಯ ದೊರೆಯದಿರುವುದು ದುರ್ದೈವ ಎಂದರು.
ಮಹಾನಗರ ಪಾಲಿಕೆ ಚಾಲಕರಾದ ಸತೀಶ ಚಲವಾದಿ ಮಾತನಾಡಿ, ಸರ್ಕಾರ ಕಡಿಮೆ ವೇತನಕ್ಕೆ ದುಡಿಸಿಕೊಳ್ಳುವ ಮೂಲಕ ಚಾಲಕರಿಗೆ ನ್ಯಾಯಯುವಾಗಿ ದೊರೆಯಬೇಕಾದ ಹಕ್ಕು ಹಾಗೂ ಸೌಕರ್ಯ ನೀಡದೇ ಸರ್ಕಾರ ವಂಚಿಸುತ್ತಿದೆ. ನೌಕರರಿಗೆ ಸರ್ಕಾರ ನ್ಯಾಯಸಮ್ಮತ ಸೌಲಭ್ಯ ಒದಗಿಸಿಕೊಡಬೇಕು ಎಂದರು. ಪ್ರತಿಯೊಬ್ಬ ಚಾಲಕರು, ಕಾರ್ಮಿಕರು ಮನೆ-ಮನೆಯಿಂದ ತ್ಯಾಜ್ಯ ಸಾಗಾಣಿಕೆ ಮಾಡಿ ಜನರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸಿದ ಶ್ರಮ ಸರ್ಕಾರ ಮರೆಯಬಾರದು. ಆದ್ದರಿಂದ ಸರ್ಕಾರ ಪ್ರತಿಯೊಬ್ಬ ನೌಕರರಿಗೆ 8 ಗಂಟೆಗಳ ಕಾಲ ಕಾಲಮಿತಿ ಸೀಮಿತಗೊಳಿಸಬೇಕು.
18ರಿಂದ 20 ಸಾವಿರವರೆಗೆ ವೇತನ ಹೆಚ್ಚು ಮಾಡಬೇಕು. ಚಾಲಕರಿಗೆ 5 ಲಕ್ಷ ರೂ. ವಿಮೆ ಪಾಲಿಸಿ ಮಾಡಿಸಬೇಕು. ಕರ್ತವ್ಯ ನಿರತ ಚಾಲಕರ ಮರಣ ಹೊಂದಿದ್ದಲ್ಲಿ ಆತನಿಗೆ ಸರ್ಕಾರ 10 ಲಕ್ಷ ರೂ. ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.