ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ದೇಗುಲದ ವ್ಯಾಪ್ತಿಯ ಸಂಪರ್ಕ ರಸ್ತೆ ಹಾಗೂ ಬೈಪಾಸ್ ರಸ್ತೆಗಳ ಬದಿ ಚರಂಡಿ ತೆಗೆಯುವ ಕಾರ್ಯಕ್ಕೆ ಬುಧವಾರ ನಗರದಲ್ಲಿ ಚಾಲನೆ ದೊರಕಿದೆ. ದೇಗುಲ ಹಾಗೂ ಗ್ರಾ.ಪಂ. ವತಿಯಿಂದ ನಗರದ ಪ್ರಮುಖ ರಸ್ತೆ ಹಾಗೂ ಬೈಪಾಸ್ ರಸ್ತೆಗಳ ಬದಿ ಚರಂಡಿ ತೆಗೆಯುವ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ.
ದೇಗುಲದ ಕಡೆಯಿಂದ ಕುಮಾರ ಧಾರಾ – ಕಾಶಿಕಟ್ಟೆ ಪ್ರಮುಖ ರಸ್ತೆಯ ಬದಿಯಲ್ಲಿ ಇರುವ ಚರಂಡಿಯ ಹೂಳೆತ್ತುವ ಕಾರ್ಯ ಜೆಸಿಬಿ ಮೂಲಕ ನಡೆಯುತ್ತಿದೆ. ಈ ಮಾರ್ಗದ ಎರಡೂ ಬದಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಮೇಲೆಯೇ ಹರಿದು ದೊಡ್ಡ ರಾದ್ಧಾಂತವಾಗುತ್ತಿತ್ತು. ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ, ಶಾಲಾ ಮಕ್ಕಳು ತೊಂದರೆಗೆ ಒಳಗಾಗುತ್ತಿದ್ದರು.
ಕುಮಾರಧಾರಾ ಪ್ರವೇಶ ದ್ವಾರ, ಪೆಟ್ರೋಲ್ ಪಂಪ್ ಬಳಿ, ಜೂನಿಯರ್ ಕಾಲೇಜು ಬಳಿ, ಕೆಎಸ್‌ಎಸ್ ಕಾಲೇಜು, ಬಿಲದ್ವಾರ, ಕಾಶಿಕಟ್ಟೆ, ಕೆಎಸ್‌ಆರ್‌ಟಿಸಿ ನಿಲ್ದಾಣ ಮುಖ್ಯ ರಸ್ತೆಗೆ ಸಂಪರ್ಕಿಸುವಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ದೇಗುಲದ ಕಾಶಿಕಟ್ಟೆ-ಹನುಮನ ಗುಡಿ ಬೈಪಾಸ್ ರಸ್ತೆಯಲ್ಲೂ ನೀರು ನುಗ್ಗುತ್ತಿತ್ತು. ಕೆಎಸ್ ಆರ್‌ಟಿಸಿ ಬಳಿಯಿಂದ ಆದಿಸುಬ್ರಹ್ಮಣ್ಯ ಹಾಗೂ ಸರ್ಪಸಂಸ್ಕಾರ ಯಾಗ ಶಾಲೆಗೆ ತೆರಳುವ ರಸ್ತೆ, ಆದಿಸುಬ್ರಹ್ಮಣ್ಯ ಮುಂತಾದ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ರಲಿಲ್ಲ. ಇದನ್ನು ಗಮನಿಸಿದ ದೇಗುಲದ ಆಡಳಿತ ಮಂಡಳಿ ಇದೀಗ ಚರಂಡಿ ನಿರ್ಮಾಣ ಮತ್ತು ಚರಂಡಿಯ ಹೂಳೆತ್ತಿ ಸೂಕ್ತ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ. ಗ್ರಾ.ಪಂ. ವತಿಯಿಂದಲೂ ಚರಂಡಿಯ ಹೂಳೆತ್ತುವ ಕಾರ್ಯ ಕೈಗೆತ್ತಿಕೊಂಡಿದ್ದು, ಬಿಲದ್ವಾರ-ವಿದ್ಯಾನಗರ, ದೇವರಗದ್ದೆ, ಆದಿಸುಬ್ರಹ್ಮಣ್ಯ ಮುಂತಾದ ಕಡೆಗೆ ತೆರಳುವ ಕಡೆಗಳಲ್ಲಿ ಹೂಳೆತ್ತುವ ಕೆಲಸ ನಡೆಯುತ್ತಿದೆ.
ಸುದಿನ ವರದಿ
ನಗರದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗೆ ಉಂಟಾಗುವ ಸಮಸ್ಯೆ ಕುರಿತು ಉದಯವಾಣಿ ಸುದಿನ ಜೂ. 11ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಗ್ರಾ.ಪಂ. ವತಿಯಿಂದ ಚರಂಡಿ ವ್ಯವಸ್ಥೆ ಕುರಿತು ದೇಗುಲಕ್ಕೆ ಮನವಿ ಸಲ್ಲಿಸಲಾಗಿತ್ತು. ಇದೆಲ್ಲದರ ಫಲಶ್ರುತಿ ಎಂಬಂತೆ ಚರಂಡಿ ನಿರ್ಮಾಣ ಮತ್ತು ಹೂಳೆತ್ತುವ ಕಾರ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಭರದಿಂದ ನಡೆಯುತ್ತಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ನಗರ ತೆರೆದುಕೊಳ್ಳುತ್ತಿದೆ.