ಗಂಗಾವತಿ: ಕೋವಿಡ್ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯಸರಕಾರ ಘೋಷಿಸಿರುವ ಟಫ್ ರೂಲ್ಸ್ ಗೆ ಗಂಗಾವತಿ ಜನತೆ ಕ್ಯಾರೇ ಎನ್ನುತ್ತಿಲ್ಲ. ನಗರದಲ್ಲಿ ಎಲ್ಲಾ ವಾಣಿಜ್ಯ ಅಂಗಡಿ ಮುಂಗಟ್ಟಯಗಳು ಬಂದ್ ಆಗಿದ್ದರೂ ಬೈಕ್ ಕಾರು ಸವಾರರು ಮತ್ತು ಜನತೆ ಅನಗತ್ಯವಾಗಿ ನಗರದಲ್ಲಿ ಸಂಚಾರ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿ ಮಹಾವೀರ ಗಣೇಶ ಶ್ರೀ ಕೃಷ್ಣದೇವರಾಯ ವೃತ್ತಗಳಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದು ನಗರದೆಲ್ಲೆಡೆ ಜನರು ಸುತ್ತಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಇಸ್ಲಾಂಪೂರ,ಅಂಬೇಡ್ಕರ್ ನಗರದ ಕ್ರಾಸ್ ವಿರೂಪಾಪೂರ ತಾಂಟ ಹಾಗೂ ಕರ್ನೂಲ್ ಬಾಬಾ ದರ್ಗಾ ಹಿಂದೆ ಬಹಿರಂಗವಾಗಿ ಮಾಂಸ ಮಾರಾಟ ಮಾಡುವ ಅಂಗಡಿಗಳು ಕಂಡು ಬಂದವು. ಖಾಸಗಿ ಆಸ್ಪತ್ರೆಯ ಮುಂದೆ ಜನಜಂಗುಳಿ ಇದ್ದರೂ ಆಸ್ಪತ್ರೆಯವರು ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡದಿರುವುದು ಕಂಡು ಬಂತು.
ಕೇಂದ್ರ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಕೋರ್ಟ್ ಕಲಾಪ ನಡದರೂ ಪೊಲೀಸರು ವಕೀಲರು ಮತ್ತು ಆರೋಪಿತರನ್ನು ಹೊರತುಪಡಿಸಿ ಇತರರಿಗೆ ಪ್ರವೇಶವಿರಲಿಲ್ಲ.
ಲಾಠಿ ಹಿಡಿದು ಜನರನ್ನು ಮನೆಗೆ ಕಳುಹಿಸಿದ ತಹಸೀಲ್ದಾರ್:ನಗರದ ವಿವಿಧೆಡೆ ಮಾಂಸದಂಗಡಿಗಳ ಮುಂದೆ ಜನರನ್ನು ಸೇರಿಸಿ ಮಾಂಸ ಮಾರಾಟ ಮಾಡುತ್ತಿದ್ದ ಜನರನ್ನು ಹಾಗು ಅನಗತ್ಯವಾಗಿ ಪುಟ ಪಾತ್ ಗಳ ಮೇಲೆ ಮಾಸ್ಕ್ ಧರಿಸದೇಕುಳಿತ್ತಿದ್ದವರಿಗೆ ತಹಸೀಲ್ದಾರ್ ಯು.ನಾಗರಾಜ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಯವರು ಲಾಠಿ ರುಚಿ ತೋರಿಸಿ ಮನೆಗೆ ಕಳಿಸಿದರು.
ಪಿಐ ಸೇರಿ 16 ಜನ ಪೊಲೀಸರಿಗೆ ಸೋಂಕು: ಒರ್ವ ಪಿಐ ಸೇರಿ ನಗರ ಗ್ರಾಮೀಣ ಪೊಲೀಸ್ ಠಾಣೆಯ ೧೬ ಜನ ಪೊಲೀಸರಿಗೆ ಕೋರೊನಾ ಸೋಂಕು ಕಂಡು ಬಂದಿದೆ. 7 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನಲ್ಲಿದ್ದು ಚಿಕಿತ್ಸೆ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆಂದು ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ ಉದಯವಾಣಿ ಗೆ ತಿಳಿಸಿದ್ದಾರೆ.