ರಾಯಚೂರು: ಲಾಕ್‌ಡೌನ್ ಮಾಡಿರುವುದು ಜನರಿಗೆ ಸಂಕಷ್ಟ ತಂದರೆ ವರ್ತಕರಿಗೆ ಮಾತ್ರ ಶುಕ್ರದೆಸೆ ತಿರುಗಿಸಿದೆ. ಮದ್ಯ ಮಾರಾಟ ನಿಷೇಧವಿದ್ದರೂ ಹಳ್ಳಿಗಳಲ್ಲಿ ಜನ ಮತ್ತಿನಲ್ಲೇ ತೇಲುತ್ತಿದ್ದರೆ, ದಿನಸಿ ವಸ್ತುಗಳನ್ನು ಕೂಡ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ.
ಜಿಲ್ಲೆಯಲ್ಲಿ ಜನಸಂಚಾರ ನಿಷೇಧಿಸಿ, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬಾರದು ಎಂಬ ಕಾರಣಕ್ಕೆ ಏ.14ರವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದರೆ, ತೆರೆಮರೆಯಲ್ಲಿ ಮದ್ಯ ಮಾರಾಟಕ್ಕೆ ಕಿಂಚಿತ್ತೂ ಕಡಿವಾಣ ಬಿದ್ದಂತೆ ಕಾಣುತ್ತಿಲ್ಲ. ಯರಗೇರಾ ಭಾಗದಲ್ಲಿ ಸಾಕಷ್ಟು ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎನ್ನಲಾಗುತ್ತಿದೆ. ಅಧಿಕಾರಿಗಳು ಗೊತ್ತಿದ್ದರೂ ಜಾಣಮೌನ ವಹಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಅಕ್ರಮ ಮದ್ಯ ಮಾರಾಟ ಮಾತ್ರವಲ್ಲದೇ, ದುಪ್ಪಟ್ಟು ಬೆಲೆಗೆ ಮಾರುವ ಮೂಲಕ ಜನರ ಸುಲಿಗೆ ಮಾಡಲಾಗುತ್ತಿದೆ. ಎಂಆರ್‌ಪಿಗಿಂತ ಎರಡು ಪಟ್ಟು ಹಣ ಪಡೆಯಲಾಗುತ್ತಿದೆ. ಇನ್ನೂ ಗುಟ್ಕಾ, ಸಿಗರೇಟ್ ಕೂಡ ದುಪ್ಪಟ್ಟು ಬೆಲೆ ನಿಗದಿ ಮಾಡಲಾಗಿದೆ. ಕೇಳಿದರೆ, ಮಾರುವುದಕ್ಕೆ ಪರ್ಮಿಶನ್ ಇಲ್ಲ. ಗೊತ್ತಾದರೆ ನಮಗೆ ಸಾವಿರಾರು ರೂ. ದಂಡ ಹಾಕುತ್ತಾರೆ ಎಂದು ಗ್ರಾಹಕರ ಬಾಯಿ ಮುಚ್ಚಿಸುತ್ತಿದ್ದಾರೆ ವರ್ತಕರು. ತರಕಾರಿ, ದಿನಸಿ ಕೂಡ ಎಂದಿಗಿಂತ ತುಸು ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಸದಾ ನಷ್ಟದಲ್ಲಿರುವ ತರಕಾರಿ ಬೆಳೆಗಾರರು ಈಗ ತುಸು ಲಾಭದ ರುಚಿ ನೋಡುತ್ತಿದ್ದಾರೆ. ಜಿಪಂ ಸಭಾಂಗಣದಲ್ಲಿ ಡಿಸಿ ಆರ್. ವೆಂಕಟೇಶ ಕುಮಾರ್ ಅಗತ್ಯ ಆಹಾರ ಸಾಮಗ್ರಿಗಳ ಕುರಿತು ಸಭೆ ನಡೆಸಿದರು. ಲಾಭಕ್ಕಾಗಿ ಜನರಿಗೆ ಮೋಸ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಡಿಸಿ ನಗರ ಪ್ರದಕ್ಷಿಣೆ: ಬುಧವಾರ ಡಿಸಿ ನಗರ ಪ್ರದಕ್ಷಿಣೆ ಹಾಕುವ ಮೂಲಕ ಕೋವಿಡ್ 19 ವಿಚಾರದಲ್ಲಿ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ಯುವಕರು ಅನಾವಶ್ಯಕವಾಗಿ ರಸ್ತೆ ಮೇಲೆ ಓಡಾಡುತ್ತಿದ್ದು, ಬೈಕ್ ವಶ ಪಡಿಸಿಕೊಳ್ಳುವಂತೆ ಪೊಲೀಸರಿಗೆ ತಿಳಿಸಿದರು.
ಜನರಿಗೆ ಮನೆಯಿಂದ ಹೊರ ಬರದಂತೆ ಮನವಿ ಮಾಡಿದರು. ಎಸ್‌ಪಿ ಡಾ.ಸಿ.ಬಿ.ವೇದಮೂರ್ತಿ, ಎಡಿಸಿ ದುರಗೇಶ ಇದ್ದರು.