Advertisement

ಜನಶಕ್ತಿಗೆ ಮನ್ನಣೆಯೋ..ಗಣಿ ಲಾಬಿಗೆ ಮಣೆಯೋ?

03:45 AM Feb 20, 2017 | Harsha Rao |

ಹುಬ್ಬಳ್ಳಿ: ಸಂರಕ್ಷಿತ ಅರಣ್ಯ ಸ್ಥಾನ ಪಡೆದು 11 ತಿಂಗಳಲ್ಲಿಯೇ ಪಟ್ಟ ಕಳೆದುಕೊಂಡು, ಗಣಿಗಾರಿಕೆ ಭೀತಿಗೆ ಒಳಗಾಗಿರುವ ಕಪ್ಪತಗುಡ್ಡ , ಇದೀಗ ಮತ್ತೂಮ್ಮೆ ಸಂರಕ್ಷಿತ ಸ್ಥಾನಕ್ಕಾಗಿ ಸರ್ಕಾರದ ಕಡೆ ಆಸೆಕಂಗಳನ್ನು ನೆಟ್ಟಿದೆ. ಮಠಾಧೀಶರು, ಪರಿಸರ ಪ್ರೇಮಿಗಳು, ರೈತರು ಇದೇ ಆಶಯ ಹೊಂದಿದ್ದು, ಸರ್ಕಾರ ಜನಶಕ್ತಿಗೆ ಮನ್ನಣೆ ನೀಡುವುದೋ, ಗಣಿಲಾಬಿಗೆ ಮಣಿಯುವುದೋ ಎಂಬ ಕುತೂಹಲ ಹೆಚ್ಚಿದೆ.

Advertisement

ಕಪ್ಪತಗುಡ್ಡವನ್ನು ಗಣಿಗಾರಿಕೆಗೆ ನೀಡಬಾರದೆಂದು ಒತ್ತಾಯಿಸಿ ಕಪ್ಪತಗುಡ್ಡದ ಸುತ್ತಮುತ್ತಲ 33 ಗ್ರಾಮಗಳ ಜನತೆ, ಗ್ರಾಮ ಪಂಚಾಯತ್‌ಗಳು ನಿರ್ಣಯ ಕೈಗೊಂಡಿದ್ದು, ಸರಕಾರ ನಡೆಸಿದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ 217 ಅರ್ಜಿಗಳು ಸಂರಕ್ಷಿತ ಪರವಾಗಿ, 32 ವಿರುದ್ಧವಾಗಿ ಸಲ್ಲಿಕೆಯಾಗಿವೆ. ಮಠಾಧೀಶರು, ನಾಡಿನ, ದೇಶದ
ಪರಿಸರ ಪ್ರೇಮಿಗಳು, ವಿವಿಧ ಸಂಘಟನೆಗಳವರು ಇದೇ ನಿಲುವಿಗೆ ಒತ್ತಾಯಿಸಿದ್ದಾರೆ. ಇನ್ನೊಂದಡೆ ಗಣಿ ಕಂಪನಿಗಳು ತಮ್ಮದೇ ಒತ್ತಡ ತಂತ್ರ, ಹುನ್ನಾರ, ನಾಟಕಗಳನ್ನು ಮುಂದುವರಿಸಿವೆ. ಗದುಗಿನ ತೋಂಟದಾರ್ಯ ಮಠದ ಡಾ|
ಸಿದ್ದಲಿಂಗ ತೋಂಟದಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಆರಂಭವಾಗಿದ್ದು, ಗದುಗಿನಲ್ಲಿ ಫೆ. 13-15ರವರೆಗೆ ಅಹೋರಾತ್ರಿ ಧರಣಿ, ಉಪವಾಸ ಮೂಲಕ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರ ಫೆ. 20ರಂದು ವನ್ಯಜೀವಿ ಮಂಡಳಿ ಸಭೆ ಕರೆದಿದ್ದು, ಮಹತ್ವದ ತೀರ್ಮಾನದ ನಿರೀಕ್ಷೆ ಹೊಂದಲಾಗಿದೆ.

ಸಿಎಂ ಸೇರಿ 11 ಜನ ಭಾಗಿ: ಕಪ್ಪತಗುಡ್ಡಕ್ಕೆ ಸಂರಕ್ಷಿತ ಸ್ಥಾನ ನೀಡಿ ಗಣಿಗಾರಿಕೆ ಹುನ್ನಾರಕ್ಕೆ ಬ್ರೇಕ್‌ ಹಾಕಬೇಕಾಗಿದ್ದು, ಈ ನಿಟ್ಟಿನಲ್ಲಿ ಫೆ. 20ರಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ವನ್ಯಜೀವಿ ಮಂಡಳಿ ಸಭೆ ಕರೆಯಲಾಗಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅರಣ್ಯ ಮತ್ತು ಪರಿಸರ ಖಾತೆ ಸಚಿವರು,
ಶಾಸಕರಾದ ಅಶೋಕ ಪಟ್ಟಣ, ಜೆ.ಆರ್‌. ಲೋಬೋ, ಎಸ್‌. ಜಯಣ್ಣ, ವಿವಿಧ ಸಂಘ-ಸಂಸ್ಥೆಗಳ ಹಾಗೂ ತಜ್ಞರ ರೂಪದಲ್ಲಿ ಮಂಡಳಿಗೆ ಸದಸ್ಯರಾಗಿರುವ ಜಿ. ಮಲ್ಲೇಶಪ್ಪ, ನೀರಜ್‌ ನಿರ್ಮಲ, ಡಾ| ಎಂ.ಡಿ. ಮಧುಸೂದನ, ಅಜಯ ದೇಸಾಯಿ, ಸಂಜಯ ಗುಬ್ಬಿ ಹಾಗೂ ಎಂ.ಕೆ. ಭಾಸ್ಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕಪ್ಪತಗುಡ್ಡದ ಮಹತ್ವ ವನ್ಯಜೀವಿ ಮಂಡಳಿಯ ಬಹುತೇಕ ಸದಸ್ಯರಿಗೆ ಗೊತ್ತಿದೆ. ಮಠಾಧೀಶರು, ಪರಿಸರ ಪ್ರೇಮಿಗಳು, ರೈತರು ಸಂರಕ್ಷಿತ ಸ್ಥಾನಕ್ಕೆ ಪ್ರಬಲ ಒತ್ತಾಯ ಹೇರಿದ್ದಾರೆ. ಈ ಎಲ್ಲ ಲೆಕ್ಕಾಚಾರಗಳಡಿ ನೋಡಿದರೆ ಯಾವುದೇ ಕಾರಣ ನೀಡದೆ ಸರ್ಕಾರ ಸಂರಕ್ಷಿತ ಅರಣ್ಯ ಸ್ಥಾನ ನೀಡಲೇಬೇಕಾಗಿದೆ.

ಎಲ್ಲ ರೀತಿ ಹುನ್ನಾರಕ್ಕೂ ಯತ್ನ: ಕಪ್ಪತಗುಡ್ಡವನ್ನು ಉಳಿಸಿಕೊಳ್ಳಬೇಕೆಂದು ನಾಡಿನ ಅನೇಕ ಹೃದಯಗಳು ಮಿಡಿಯುತ್ತಿದ್ದರೆ, ಹೇಗಾದರೂ ಮಾಡಿ ಕಬಳಿಸಬೇಕೆಂಬ ಪ್ರಬಲ ಲಾಬಿ ತನ್ನದೇ ಯತ್ನದಲ್ಲಿ ತೊಡಗಿದೆ. ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ತಕ್ಕ ಪ್ರಚಾರ ಕೈಗೊಂಡಿಲ್ಲ, ಸಾರ್ವಜನಿಕ ಸ್ಥಳದಲ್ಲಿ ಸಭೆ ನಡೆಸಿಲ್ಲ, ತೋಂಟದಾರ್ಯ ಸ್ವಾಮೀಜಿ ಇದ್ದಿದ್ದರಿಂದ ಜನ ಹೆದರಿ ಪರವಾಗಿ ಅರ್ಜಿಸಲ್ಲಿಕೆ ಮಾಡಿದ್ದಾರೆಂಬ ಕೊಂಕು, ಇಲ್ಲಸಲ್ಲದ ಕ್ಯಾತೆಗೆ ಗಣಿ
ಕಂಪನಿ ಮುಂದಾಗಿದೆ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರವನ್ನು ಆ ಪಕ್ಷದ ಹೈಕಮಾಂಡ್‌ ಹುಕುಂನಿಂದ ಮಣಿಸುವ ತೀವ್ರತರ ಯತ್ನವೂ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

Advertisement

ಸರಕಾರ ಜನಶಕ್ತಿಗೆ ಮನ್ನಣೆ ನೀಡಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡದೆ, ಗಣಿ ಲಾಬಿಗೆ ಮಣಿದರೆ ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಹೋರಾಟ ತೀವ್ರಗೊಳಿಸುವ ಹಾಗೂ ಕಾನೂನು ಸಮರಕ್ಕೆ ಮುಂದಾಗುವ ಯತ್ನಕ್ಕೆ ಹಲವರು
ಈಗಾಗಲೇ ಸಿದ್ಧಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next