Advertisement

ಮಹಿಳಾ ಸಂಘಗಳಿಗೆ ಶೂನ್ಯಬಡ್ಡಿ ದರದಲ್ಲಿ ಸಾಲ

06:15 AM Dec 17, 2017 | |

ರಾಯಚೂರು/ಕಲಬುರಗಿ: ಮಹಿಳಾ ಸಂಘಗಳಿಗೆ ನೀಡಲಾಗುತ್ತಿದ್ದ ಶೇ.4ರ ಸಾಲದ ಮೇಲಿನ ಬಡ್ಡಿಯನ್ನು ತೆಗೆದು ಹಾಕಿ ಶೂನ್ಯ ಬಡ್ಡಿ ದರದಲ್ಲಿಯೇ ಸಾಲ ವಿತರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

Advertisement

ಕಲಬುರಗಿ ಜಿಲ್ಲೆ ಅಫಜಲಪುರದಲ್ಲಿ ಶನಿವಾರ ನಡೆದ ಸಾಧನಾ ಸಂಭ್ರಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. “ಮಹಿಳಾ ಸಂಘಗಳಿಗೆ ನೀಡಲಾಗುತ್ತಿದ್ದ ಶೇ.4ರ ಸಾಲದ ಮೇಲಿನ ಬಡ್ಡಿಯನ್ನು ತೆಗೆದು ಹಾಕಿ ಶೂನ್ಯ ಬಡ್ಡಿ ದರದಲ್ಲಿಯೇ ಸಾಲ ವಿತರಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಹಿಂದುಳಿದ ವರ್ಗಗಳ ನಾಯಕ ಡಿ.ದೇವರಾಜು ಅರಸು ನಂತರ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸಂಪೂರ್ಣ ಐದು ವರ್ಷಗಳ ಕಾಲ ಪೂರ್ಣಗೊಳಿಸಿದ ಮುಖ್ಯಮಂತ್ರಿ ಯಾರಾದರೂ ಇದ್ದರೆ, ಅದು ನಾನೊಬ್ಬನೇ. ಅಷ್ಟೇ ಅಲ್ಲ, ಮುಂದಿನ ಸಲವೂ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬಂದು ನಾನೇ ಸಿಎಂ ಆಗುತ್ತೇನೆ. ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಮುಂದಿನ ಸಲ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ’ ಎಂದರು.

ಬಿಎಸ್‌ವೈಗೆ ಆರ್ಥಿಕ ಜ್ಞಾನವಿಲ್ಲ:
ಬಳಿಕ ರಾಯಚೂರು ಸಮೀಪದ ಯರಮರಸ್‌ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, “ಯಡಿಯೂರಪ್ಪಗೆ ಆರ್ಥಿಕ ಜ್ಞಾನವಿಲ್ಲ. ಫಿಸಿಕಲ್‌ ರೆಸ್ಪಾನ್ಸಿಬಲ್‌ ಆ್ಯಕ್ಟ್ ಬಗ್ಗೆ ಅವರಿಗೆ ಗೊತ್ತಾ? ಆ ಕಾಯ್ದೆಯಲ್ಲಿ ಉಲ್ಲೇಖೀಸಿದ ಮಾನದಂಡಗಳಂತೆ ನಾವು ಆರ್ಥಿಕ ಸ್ಥಿತಿ ನಿರ್ವಹಣೆ ಮಾಡಿದ್ದೇವೆ. ಜಿಡಿಪಿಯ ಶೇ.25ರೊಳಗೆ ಸಾಲ ಇರಬೇಕು. ಆದರೆ, ನಾವು ಮಾಡಿದ್ದು ಶೇ.19ರಷ್ಟು ಮಾತ್ರ ಸಾಲ. ನನಗೆ ಇನ್ನೂ ಹೆಚ್ಚು ಸಾಲ ಮಾಡುವ ಅಧಿಕಾರವಿದೆ. ಮಾಜಿ ಪ್ರಧಾನಿ, ಆರ್ಥಿಕ ತಜ್ಞರಾಗಿದ್ದ ಮನಮೋಹನ್‌ ಸಿಂಗ್‌ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಯಡಿಯೂರಪ್ಪರಿಂದ ನಾನು ಪ್ರಮಾಣ ಪತ್ರ ಪಡೆಯುವ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿದರು.

ಇದು ನನ್ನ ಕೊನೇ ಚುನಾವಣೆ:
ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್‌ ಗಾಂಧಿ ಬಗ್ಗೆ ಅಪಾರ ನಿರೀಕ್ಷೆಯಿದ್ದು, ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ದೇಶದಲ್ಲಿ ಶಕ್ತಿಯುತವಾಗಿ ಬೆಳೆಯಲಿದೆ. ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿ ಬಗ್ಗೆ ಹೇಳಿಲ್ಲ. ಅವರು ನಿವೃತ್ತಿ ಅಂಚಿನಲ್ಲಿರುವುದಾಗಿ ಹೇಳಿದ್ದಾರೆ. ನಾನು ಕೂಡ ನಿವೃತ್ತಿ ಅಂಚಿನಲ್ಲಿದ್ದೇನೆ. ಹಿಂದೆಯೇ ನಿವೃತ್ತಿ ಪಡೆಯಬೇಕೆಂದು ನಿರ್ಧರಿಸಿದ್ದೆ. ಆದರೆ, ಬಿಜೆಪಿಯವರ ಕೋಮು ಪ್ರಚೋದನೆಗೆ ಕಡಿವಾಣ ಹಾಕಲು, ಅವರನ್ನು ಅಧಿಕಾರದಿಂದ ದೂರವಿಡಬೇಕೆಂಬ ಕಾರಣಕ್ಕೆ ಪುನಃ ಸ್ಪರ್ಧಿಸುತ್ತಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆ ನಂತರ ಮತ್ತೆ ಸ್ಪರ್ಧಿಸುವುದಿಲ್ಲ. ಆದರೆ, ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ. ವರುಣಾದಲ್ಲಿ ನಿಂತರೆ ಹಿನ್ನಡೆಯಾಗುತ್ತದೆ ಎಂಬುದೆಲ್ಲ ಸುಳ್ಳು. ನಾನು ರಾಜ್ಯದ 20 ಕ್ಷೇತ್ರಗಳಲ್ಲಿ ನಿಂತು ಗೆಲ್ಲಬಲ್ಲೆ. ಇದು ನನ್ನ ಕೊನೇ ಚುನಾವಣೆ ಆಗಿದ್ದರಿಂದ ನನಗೆ ಶಕ್ತಿ ತುಂಬಿದ, ರಾಜಕೀಯವಾಗಿ ಮರುಜೀವ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದರು.

2018-19ನೇ ಸಾಲಿನ ರಾಜ್ಯದ ಮುಂಗಡ ಪತ್ರದ ಗಾತ್ರ ಮತ್ತಷ್ಟು ವಿಸ್ತರಣೆಯಾಗಲಿದ್ದು, ಮಾರ್ಚ್‌ನಲ್ಲಿ ಮಂಡನೆಯಾಗಲಿರುವ ಬಜೆಟ್‌ 2.10 ಲಕ್ಷ ಕೋಟಿ ರೂ.ಗಾತ್ರದ್ದಾಗಿರುತ್ತದೆ. ನಾನು ಮುಖ್ಯಮಂತ್ರಿಯಾಗಿ ಬಜೆಟ್‌ ಮಂಡಿಸಿದಾಗ 98 ಸಾವಿರ ಕೋಟಿ ರೂ.ಗಾತ್ರವಿತ್ತು. ಆದರೆ, ಐದು ವರ್ಷಗಳಲ್ಲಿ ಎರಡು ಪಟ್ಟು ಜಾಸ್ತಿಯಾಗಿದೆ. ಇಷ್ಟಿದ್ದರೂ ಯಡಿಯೂರಪ್ಪ ಅವರು ತಳಬುಡವಿಲ್ಲದಂತೆ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಬೊಗಳೆ ಬಿಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದರು.

Advertisement

ಸಿಎಂಗೆ ಬಂಗಾರದ ಕಿರೀಟ, ಬೆಳ್ಳಿ ಖಡ್ಗ, ಹಾರದಿಂದ ಸನ್ಮಾನ
ಅಫಜಲಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚಿನ್ನದ ಕಿರೀಟ, ಬೆಳ್ಳಿ ಖಡ್ಗ ಹಾಗೂ ಬೆಳ್ಳಿ ಹಾರ ಹಾಕಿ ಸನ್ಮಾನಿಸಿದರು. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದಕ್ಕೆ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದರು. ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಸಿದ್ದರಾಮಯ್ಯ ಅವರೇ ಕಾರಣರಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಶೀಘ್ರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ: ಸಿಎಂ
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಸೋಮವಾರ ನಡೆಯಲಿರುವ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ರಾಜ್ಯದ ಪ್ರೋತ್ಸಾಹ ಧನ ನೀಡುವ ಕುರಿತಾಗಿ ನಿರ್ಧಾರ ಕೈಗೊಂಡ ನಂತರ ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು. ಕೇಂದ್ರ ಸರ್ಕಾರ ಕ್ವಿಂಟಲ್‌ಗೆ 5,450 ರೂ.ಬೆಂಬಲ ಬೆಲೆ ನಿಗದಿ ಮಾಡಿದೆ. ಇದಕ್ಕೆ ರಾಜ್ಯದ ಪ್ರೋತ್ಸಾಹ ಧನ ನಿಗದಿ ಮಾಡಿ ಖರೀದಿಸಲಾಗುವುದು. ಕಳೆದ ವರ್ಷ ಕ್ವಿಂಟಲ್‌ಗೆ 5,050 ರೂ.ಇದ್ದ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ 450 ರೂ. ಸೇರಿಸಿ 5,500 ರೂ. ದರದಲ್ಲಿ ರಾಜ್ಯದಲ್ಲಿಯೇ ದಾಖಲೆ ಎನ್ನುವಂತೆ 32 ಲಕ್ಷ ಕ್ವಿಂಟಲ್‌ ಖರೀದಿ ಮಾಡಲಾಗಿದೆ. ಪ್ರಸಕ್ತ ವರ್ಷ ಕೇಂದ್ರ ಸರ್ಕಾರ 16.50 ಲಕ್ಷ ಕ್ವಿಂಟಲ್‌ ಖರೀದಿಗೆ ಅನುಮತಿ ನೀಡಿದೆ. ಉಳಿದಂತೆ ಇತರ ಬೆಳೆಗಳನ್ನು ಸಹ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗಲಾಗುವುದು ಎಂದರು.

ಬಿಜೆಪಿಯವರು ಕೋಮು ಗಲಭೆ ಮಾಡುವುದನ್ನೇ ದೊಡ್ಡ ಸಾಧನೆ ಎಂದು ತಿಳಿದಿದ್ದಾರೆ. ಕಲ್ಲು ಹೊಡೆಸುವುದು, ಬೆಂಕಿ ಹಚ್ಚುವುದೇ ಸಾಧನೆಯಾ? ರಾಮಲಿಂಗಾರೆಡ್ಡಿ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಆರು ಬಾರಿ ಆಯ್ಕೆಯಾಗಿದ್ದಾರೆ. ಅನಂತಕುಮಾರ್‌ ಹೆಗಡೆ ರೌಡಿಗಳಂತೆ ಮಾತನಾಡುತ್ತಾರೆ. ರೌಡಿ ರೀತಿ ನಡೆದುಕೊಳ್ಳುವವರು ರಾಜಕೀಯದಲ್ಲಿರಲು ಲಾಯಕ್ಕಾ?
– ಸಿದ್ದರಾಮಯ್ಯ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next