Advertisement

ಬಾಕಿ ಸಾಲ ಮನ್ನಾ ಮೊತ್ತ : ಸೆ.30ರೊಳಗೆ ಪಾವತಿಗೆ ಕ್ರಮ

01:59 AM Sep 20, 2019 | mahesh |

ಮಂಗಳೂರು: ವಿವಿಧ ತಾಂತ್ರಿಕ ಕಾರಣಗಳಿಂದಾಗಿ ರೈತರಿಗೆ ಬಾಕಿಯಿರುವ ಸಾಲ ಮನ್ನಾ ಮೊತ್ತ ಪಾವತಿಸಲು ಸರಕಾರ ಕ್ರಮ ಕೈಗೊಂಡಿದ್ದು, ಸೆ.30ರೊಳಗೆ ಎಲ್ಲ ಅರ್ಹ ರೈತರಿಗೆ ಹಣ ಬಿಡುಗಡೆಯಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ ಸಿಂಗ್‌ ತಿಳಿಸಿದ್ದಾರೆ.

Advertisement

ಜಿಲ್ಲೆಯ ಕೆಲವು ರೈತರಿಗೆ ಇನ್ನೂ ಸಾಲ ಮನ್ನಾ ಮೊತ್ತ ಪಾವತಿ ಆಗದಿರುವ ಬಗ್ಗೆ ಮಾಹಿತಿ ನೀಡಬೇಕು ಮತ್ತು ಬಾಕಿಯಿರುವ ಎಲ್ಲ ರೈತರಿಗೆ ಸೆ.30ರೊಳಗೆ ಪಾವತಿ ಮಾಡಬೇಕು ಎಂದು ಒತ್ತಾಯಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಶಿರಾಡಿ ನೇತೃತ್ವದಲ್ಲಿ ರೈತರ ನಿಯೋಗವು ಎಸ್‌ಕೆಡಿಸಿಸಿ ಬ್ಯಾಂಕ್‌ನಲ್ಲಿ ಗುರುವಾರ ಮನವಿ ಸಲ್ಲಿಸಿತು.

ಮನವಿಗೆ ಉತ್ತರಿಸಿದ ಸಿಂಗ್‌, ತಾಂತ್ರಿಕ ಕಾರಣಗಳಿಂದಾಗಿ ಪಾವತಿ ಬಾಕಿಯಿರುವ ಎಲ್ಲ ಅರ್ಹ ರೈತರ ದಾಖಲೆಗಳನ್ನು ಸೆ.25ರೊಳಗೆ ಸರಿ ಪಡಿಸಿ, ಸೆ.30ರೊಳಗೆ ರೈತರ ಖಾತೆಗಳಿಗೆ ಹಣ ಸಂದಾಯವಾಗುವಂತೆ ಮಾಡಬೇಕು ಎಂದು ಈಗಾಗಲೇ ಸಿಎಂ ಸೂಚನೆ ನೀಡಿದ್ದಾರೆ. ಈ ಸಂಬಂಧ ಸೆ.20ರಂದು ಬೆಳಗ್ಗೆ 9.30ಕ್ಕೆ ಅವರು ಎಲ್ಲ ಜಿಲ್ಲೆಗಳಲ್ಲಿ ಸಹಕಾರ ಸಂಸ್ಥೆಗಳ ಅಧಿಕಾರಿಗಳ ಜತೆಗೆ ವೀಡಿಯೋ ಕಾನ್ಫರೆನ್ಸ್‌ ನಡೆಸಲಿದ್ದಾರೆ ಎಂದರು.

ಬಾಕಿಗೆ ಕಾರಣಗಳು
ರೈತರ ಆಧಾರ್‌ ಕಾರ್ಡ್‌, ಪಹಣಿ ಪತ್ರ ಮತ್ತು ಪಡಿತರ ಚೀಟಿ ಹೊಂದಾಣಿಕೆಯಾಗದಿದ್ದರೆ, ಅರ್ಜಿಯಲ್ಲಿ ನಮೂದಿಸಿದ ಬ್ಯಾಂಕ್‌ ಖಾತೆ ಮತ್ತು ಐಎಫ್‌ಎಸ್‌ ಕೋಡ್‌ ಸಂಖ್ಯೆಗಳಲ್ಲಿ ವ್ಯತ್ಯಾಸಗಳಿದ್ದರೆ ಅಥವಾ ಅರ್ಜಿ ದಾರ ರೈತನ ಜಮೀನು ಇಲ್ಲಿದ್ದು ಆಧಾರ್‌ ಕಾರ್ಡ್‌ ಬೇರೆ ರಾಜ್ಯದಲ್ಲಿದ್ದರೆ ಸಾಲಮನ್ನಾ ಮೊತ್ತ ಪಾವತಿ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರ ಭೂಮಿ ಸಾಫ್ಟ್‌ವೇರ್‌ ಆನ್‌ಲಾಕ್‌ ಮಾಡಿ ತಪ್ಪು ಸರಿಪಡಿಸಲು ಅವಕಾಶ ನೀಡಿದೆ. ಅದರಂತೆ ಸರಿಪಡಿಸುವ ಕಾರ್ಯ ಆರಂಭಗೊಂಡಿದೆ. ರೈತರ ಸಾಲಮನ್ನಾ ಬಾಕಿ ಹಣ ಸರಕಾರಕ್ಕೆ ವಾಪಸ್‌ ಹೋಗುವುದಿಲ್ಲ; ಅಪೆಕ್ಸ್‌ ಬ್ಯಾಂಕಿನ ಖಾತೆಯಲ್ಲಿರುತ್ತದೆ ಎಂದು ಮಂಜುನಾಥ್‌ ಸಿಂಗ್‌ ತಿಳಿಸಿದರು. ಎಸ್‌ಸಿಡಿಸಿಸಿ ಬ್ಯಾಂಕಿನ ಸಿಇಒ ಬಿ. ರವೀಂದ್ರ ಉಪಸ್ಥಿತರಿದ್ದರು. ನಿಯೋಗದಲ್ಲಿ ಕಿಶೋರ್‌ ಶಿರಾಡಿ, ದಾಮೋದರ ಗುಂಡ್ಯ, ಹೇಮಚಂದ್ರ, ಸನ್ನಿ ಕೆ.ಎಸ್‌. ಮತ್ತು ಮಾರ್ಕೊಸ್‌ ಅಡ್ಡಹೊಳೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next