Advertisement

57 ಸಾವಿರ ರೈತರಿಗೆ “ಮನ್ನಾ ಭಾಗ್ಯ”

12:15 AM Dec 17, 2020 | mahesh |

ಬೆಂಗಳೂರು: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರ ಘೋಷಿಸಿದ್ದ ಸಾಲ ಮನ್ನಾ ಅರ್ಹತೆಗಾಗಿ ಕಾದು ಕುಳಿತಿರುವ 57 ಸಾವಿರ ರೈತರಿಗೆ ಕೊನೆಗೂ ಈಗ “ಮನ್ನಾ ಭಾಗ್ಯ’ ದೊರೆತಿದೆ. 2 ವರ್ಷಗಳಲ್ಲಿ 3 ಬಾರಿ ದಾಖಲಾತಿ ಪರಿಶೀಲನೆಯ ಅನಂತರ ಅವರು ಸಾಲ ಮನ್ನಾಕ್ಕೆ ಅರ್ಹರಾಗಿದ್ದು, ಸಹಕಾರ ಸಂಘಗಳಿಂದ ಪಡೆದಿದ್ದ ಸಾಲ ಮನ್ನಾ ಆಗಲಿದೆ.

Advertisement

ಇನ್ನೂ 60 ಸಾವಿರ ರೈತರು ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದು ದಾಖಲೆ ಪರಿಶೀಲನೆ ನಡೆಯುತ್ತಿದೆ. 40 ಸಾವಿರ ರೈತರ ಸಾಲ ಮನ್ನಾ ಆಗಬಹುದು. ಉಳಿದವರು ಮನ್ನಾ ವ್ಯಾಪ್ತಿಗೆ ಬರು ವುದು ಅನುಮಾನ ಎಂದು ಅಂದಾಜಿಸಲಾಗಿದೆ. ಜನವರಿ ವೇಳೆಗೆ ಅಂತಿಮ ಪಟ್ಟಿ ಸಿದ್ಧಪಡಿಸಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಹಕಾರ ಇಲಾಖೆ ಸಿದ್ಧತೆ ನಡೆಸಿದೆ.

16.49 ಲಕ್ಷ ರೈತರಿಗೆ ನೆರವು
ಸಹಕಾರ ಸಂಘಗಳಿಂದ ಒಂದು ಲಕ್ಷ ರೂ. ವರೆಗೆ ಸಾಲ ಪಡೆದ ರೈತರಿಗೆ ಮನ್ನಾ ಯೋಜನೆ ಘೋಷಿಸಲಾಗಿತ್ತು. 17.06 ಲಕ್ಷ ರೈತರನ್ನು ಗುರುತಿಸಿ ಅದಕ್ಕೆ 7,987.47 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸ‌ಲಾಗಿತ್ತು. ಆ ಪೈಕಿ ಇದು ವರೆಗೆ 16.49 ಲಕ್ಷ ರೈತರಿಗೆ ಸಾಲ ಮನ್ನಾ ನೆರವು ದೊರೆತಿದ್ದು, 76,962.32 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಸರಕಾರಿ ನೌಕರರಾಗಿರುವವರಿಗೆ ಹಾಗೂ ಆದಾಯ ತೆರಿಗೆ ಪಾವತಿಸುವವರಿಗೆ ಸಾಲ ಮನ್ನಾ ಅನ್ವಯವಾಗದು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅನ್ವಯ ಎಂದು ಷರತ್ತು ವಿಧಿಸಿದ್ದರಿಂದ 42 ಸಾವಿರ ಅರ್ಜಿಗಳು ತಿರಸ್ಕೃತಗೊಂಡಿದ್ದವು. 10 ಸಾವಿರದಷ್ಟು ರೈತರು 3 ಲಕ್ಷ ರೂ. ವರೆಗೆ ಸಾಲ ಪಡೆದು 1 ಲಕ್ಷ ರೂ. ಸಾಲ ಮನ್ನಾ ಬಿಟ್ಟು ಉಳಿದ ಮೊತ್ತ ಪಾವತಿ ಮಾಡದಿದ್ದ ಕಾರಣಕ್ಕೆ ಸಾಲಮನ್ನಾ ನೆರವು ಪಡೆಯಲು ಸಾಧ್ಯವಾಗಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಶೇ. 75ರಷ್ಟು   ಸಾಲ ಹಂಚಿಕೆ
ಕೊರೊನಾ, ಪ್ರವಾಹ ಸೇರಿ ರೈತರು ಸಂಕಷ್ಟ ಎದುರಿಸುತ್ತಿರುವುದರಿಂದ ಪ್ರಸಕ್ತ ಸಾಲಿನಲ್ಲಿ 24 ಲಕ್ಷ ರೈತರಿಗೆ 15,300 ಕೋಟಿ ರೂ. ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಗುರಿ ಹೊಂದಲಾಗಿತ್ತು. ಇದುವರೆಗೆ 16.45 ಲಕ್ಷ ರೈತರಿಗೆ 10,539 ಕೋಟಿ ರೂ. ಹೊಸ ಸಾಲ ವಿತರಿಸಲಾಗಿದೆ. ಆ ಮೂಲಕ ಶೇ. 75ರಷ್ಟು ಸಾಲ ಹಂಚಿಕೆಯಾಗಿದೆ. ಮಧ್ಯಮಾವಧಿ ಸಾಲ 16 ಸಾವಿರ ರೈತರಿಗೆ 390 ಕೋಟಿ ರೂ., ದೀರ್ಘಾವಧಿ ಸಾಲ 15 ಸಾವಿರ ರೈತರಿಗೆ 131 ಕೋಟಿ ರೂ. ವಿತರಿಸಲಾಗಿದೆ.

Advertisement

57 ಸಾವಿರ ರೈತರಿಗೆ ಸಾಲ ಮನ್ನಾ ಯೋಜನೆಯ ಲಾಭ ಸಿಕ್ಕಿರಲಿಲ್ಲ. ಮೂರು ಹಂತಗಳಲ್ಲಿ ದಾಖಲಾತಿ ಪರಿಶೀಲನೆ ನಡೆಸಿದ ಅನಂತರ ಅವರೆಲ್ಲರೂ ಸಾಲ ಮನ್ನಾಕ್ಕೆ ಅರ್ಹತೆ ಪಡೆದಿ ದ್ದಾರೆ. 295.15 ಕೋಟಿ ರೂ. ಬಿಡುಗಡೆಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆಯಲಾಗಿದೆ.
– ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next