Advertisement

ಸಾಲ ಪಡೆದು ಸತಾಯಿಸುವಂತಿಲ್ಲ!

01:23 AM Mar 21, 2021 | Team Udayavani |

ಸಾಲ ವಸೂಲಾತಿ ಮಾಡಲು ಮತ್ತು ಈ ಪ್ರಕ್ರಿಯೆಯನ್ನು ಚುರುಕು ಗೊಳಿಸಲು ಸರಕಾರವು, ವಸೂಲಾತಿ ನ್ಯಾಯ ಮಂಡಳಿ(debt recovery tribunal-DRT))ಯನ್ನು  ಸ್ಥಾಪಿಸಿದೆ. 1993ರ Recovery of Debts Bankruptcy Act ಅಡಿಯಲ್ಲಿ ರಚನೆಯಾದ ಈ ನ್ಯಾಯಮಂಡಳಿ, ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಗೆ ಬರಬೇಕಾದ ಸಾಲವನ್ನು ತ್ವರಿತವಾಗಿ ವಸೂಲು ಮಾಡಲು ನಿಯಮಗಳನ್ನು ರೂಪಿಸುತ್ತದೆ.

Advertisement

ಈ ನ್ಯಾಯಮಂಡಳಿಯ ಕಾರ್ಯವೈಖರಿ ಸಾಮಾನ್ಯ ನ್ಯಾಯಾಲಯಗಳಿಗಿಂತ ಭಿನ್ನವಾ ಗಿದ್ದು, ಪ್ರಕರಣಗಳ ವಿಚಾರಣೆ ಬೇಗ ಮುಗಿಯುತ್ತದೆ. ಸಾಲ ಬಾಕಿ 20 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಾಗಿದ್ದರೆ ಮಾತ್ರ ಪ್ರಕರಣಗಳನ್ನು ಇಲ್ಲಿ ದಾಖಲಿಸಬಹುದು. ಪ್ರಕರಣಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡಲು ನ್ಯಾಯಮಂಡಳಿಗೆ 180 ದಿನಗಳ ಗರಿಷ್ಠ ಕಾಲಾವಕಾಶವಿರುತ್ತದೆ.

ಸದ್ಯ ದೇಶದಲ್ಲಿ 43 ಬ್ಯಾಂಕ್‌ ಸಾಲ ವಸೂಲಾತಿ ಮಂಡಳಿಗಳು ಮತ್ತು 5 ಬ್ಯಾಂಕ್‌ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿಗಳು ಇವೆ. ಸಾಲ ಮರುಪಾವತಿಯನ್ನು ಮುಂದೂಡಲು ಯಾವುದಾದರೂ ನೆಪ ಹುಡುಕುವ ಸಾಲಗಾರರು, ನಾಯಮಂಡಳಿಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಿದ್ದರು. ಆಗ ಸಾಲ ವಸೂಲಾತಿ ಪ್ರಕ್ರಿಯೆ ವಿಳಂಬವಾಗಿ, ನ್ಯಾಯಮಂಡಳಿ ಸ್ಥಾಪನೆಯ ಉದ್ದೇಶ ಈಡೇರುತ್ತಿರಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸುಪ್ರೀಂ ಕೋರ್ಟ್‌, ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯನ್ನು ನಿಯಂತ್ರಿಸುವಂಥ ಮಹತ್ವದ ತೀರ್ಪೊಂದನ್ನು ನೀಡಿದೆ.

ಇತ್ತೀಚಿನ ಒಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಸಾಲಗಾರರು ಮೇಲ್ಮನವಿ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸುವ ಮೊದಲು ಬಾಕಿ ಇರುವ ಸಾಲದ ಮೊತ್ತವನ್ನು ಠೇವಣಿ ಇಡಬೇಕು ಮತ್ತು ಈ ಷರತ್ತನ್ನು ಕೈಬಿಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ಈ ತೀರ್ಪು, ಸಾಲ ಮರುಪಾವತಿಸದೇ ಬ್ಯಾಂಕ್‌ಗಳನ್ನು ಸತಾಯಿಸುವ ಮತ್ತು ವೃಥಾ ಕಾಲಹರಣ ಮಾಡುವ ಸಾಲಗಾರರ ಕುಟಿಲತನಕ್ಕೆ ಬ್ರೇಕ್‌ ಹಾಕಿದೆ. ಸಾಲಗಾರರು ಈಗ ಸಾಲ ಮರುಪಾವತಿಸಬೇಕು ಅಥವಾ ಆ ಮೊತ್ತವನ್ನು ಠೇವಣಿ ಇಟ್ಟು ಮೇಲ್ಮನವಿ ಸಲ್ಲಿಸಬೇಕು. ಬಹುತೇಕ ಸಂದರ್ಭದಲ್ಲಿ ಅವರು ಮೇಲ್ಮನವಿ ಸಲ್ಲಿಸದೇ ಸಾಲ ಮರುಪಾವತಿಸುವ ಸಾಧ್ಯತೆಯೇ ಹೆಚ್ಚು.

ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ನಿಟ್ಟುಸಿರು ಬಿಡುವಂತಾಗಿದೆ. ಇಂದು ಸಾಲ ವಸೂಲಾತಿ ಬಲುದೊಡ್ಡ ಸವಾಲಾಗಿ ಪರಿಣಮಿಸಿರುವ ಸಂದರ್ಭದಲ್ಲಿ  ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಗೆ ನಿರಾಳತೆಯ ಭಾವ ಮೂಡಿಸಿದೆ. ಈ ತೀರ್ಪಿನಿಂದಾಗಿ ಬ್ಯಾಂಕ್‌ಗಳ ಅನುತ್ಪಾದಕ ಸೊತ್ತಿನ ಪ್ರಮಾಣ ಬಹಳಷ್ಟು ಕಡಿಮೆಯಾಗುವ ನಿರೀಕ್ಷೆ ಇದ್ದು ಬ್ಯಾಂಕ್‌ನ ಠೇವಣಿದಾರರ ಹಣಕ್ಕೆ ಭದ್ರತೆಯೂ ಲಭಿಸಿದಂತಾಗಿದೆ. ಆದರೆ ಇದೇ ವೇಳೆ ಈ ತೀರ್ಪು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಒಟ್ಟಾರೆ ವ್ಯವಹಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next