ಬೆಂಗಳೂರು: “ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದರಿಂದ ವಿದ್ಯುತ್ ಅಭಾವ ಎದುರಾಗುವ ಅತಂಕವಿದೆ’ ಎಂದಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್, “ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ಅನಿವಾರ್ಯ’ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಲೋಡ್‌ಶೆಡ್ಡಿಂಗ್ ಮುನ್ಸೂಚನೆ ನೀಡಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಕಲ್ಲಿದ್ದಲು ಸಂಗ್ರಹ ಇಲ್ಲ. ಉಷ್ಣ ವಿದ್ಯುತ್ ಸ್ಥಾವರಗಳಿಗೆ ಆಯಾ ದಿನಕ್ಕೆ ಅಗತ್ಯವಿರುವ ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿದೆ. ಪೂರೈಕೆಯಲ್ಲಿ ಒಂದು ದಿನ ವ್ಯತ್ಯಯವಾದರೂ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳಲಿದೆ. ಇದರಿಂದ ವಿದ್ಯುತ್ ಅಭಾವ ಎದುರಾಗುವ ಆತಂಕ ಕಾಣಿಸಿಕೊಂಡಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಇಂಧನ ಇಲಾಖೆಗೆ ಸಂಬಂಧಿಸಿದ ಉನ್ನತ ಮಟ್ಟದ ಸಭೆ ಬಳಿಕ ಮಾತನಾಡಿದ ಅವರು, ವಿದ್ಯುತ್ ಅಭಾವ ಎದುರಾಗದಂತೆ ನೋಡಿಕೊಳ್ಳಲು ಕಲ್ಲಿದ್ದಲು ಸಮಸ್ಯೆ ಬಗೆಹರಿಸಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸಮಸ್ಯೆ ಏನು?: ಪ್ರಸ್ತುತ ರಾಜ್ಯದಲ್ಲಿ ಕಲ್ಲಿದ್ದಲು ಆಯಾ ದಿನಕ್ಕೆ ಬೇಕಾಗುವಷ್ಟು ಇದೆಯೇ ಹೊರತು ಸಂಗ್ರಹ ಇಲ್ಲ. ಹೀಗಾಗಿ ಸಂಗ್ರಹಕ್ಕಾಗಿ ಹೆಚ್ಚುವರಿ ಕಲ್ಲಿದ್ದಲು ಪೂರೈಸುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ. ಆದರೆ, ರೈಲ್ವೆ ಹೊರತುಪಡಿಸಿ ಬೇರೆ ಮಾರ್ಗಗಳಿಂದ ಕಲ್ಲಿದ್ದಲು ಕಳುಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹಠಕ್ಕೆ ಬಿದ್ದಿದೆ. ಹೀಗಾಗಿ ಹೆಚ್ಚುವರಿ ಕಲ್ಲಿದ್ದಲು ತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಇದಲ್ಲದೆ, ಕಲ್ಲಿದ್ದಲು ಗಣಿಗಾರಿಕೆ ಸಂಬಂಧ ಕೆಲವು ಕಾನೂನು ವ್ಯಾಜ್ಯಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರಕ್ಕೆ ಶೋಕಾಸ್ ನೋಟಿಸ್ ಕೂಡ ಬಂದಿದೆ. ಈ ಪ್ರಕರಣಗಳ ವಿಚಾರಣೆ ವೇಳೆ, ಸರದಿ ಪ್ರಕಾರವೇ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ಹೇಳಿದೆ. ಆದರೆ, ಬೇಸಿಗೆ ಸಮೀಪಿಸುತ್ತಿರುವುದರಿಂದ ವ್ಯಾಜ್ಯಗಳ ತ್ವರಿತ ವಿಚಾರಣೆಯಾಗಬೇಕು. ಆದ್ದರಿಂದ ನ್ಯಾಯಾಲಯಕ್ಕೆ ಪರಿಸ್ಥಿತಿಯ ಮನವರಿಕೆ ಮಾಡುವ ಪ್ರಯತ್ನವೂ ನಡೆಯುತ್ತಿದೆ ಎಂದರು.
ಲೋಡ್‌ಶೆಡ್ಡಿಂಗ್‌ಗೆ ಅವಕಾಶ:
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮುಂದಿನ ಬೇಸಿಗೆಯಲ್ಲೇ ವಿಧಾನಸಭೆ ಚುನಾವಣೆ ಬರಲಿದೆ. ಆಗ ಲೋಡ್‌ಶೆಡ್ಡಿಂಗ್ ಮಾಡಿದರೆ ಜನ ಸರ್ಕಾರದ ವಿರುದ್ಧ ತಿರುಗಿ ಬೀಳಬಹುದು. ಆದ್ದರಿಂದ ಕಲ್ಲಿದ್ದಲು ಸಮಸ್ಯೆ ಕಾರಣದಿಂದ ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್ ಜಾರಿಯಾಗದಂತೆ ನೋಡಿಕೊಳ್ಳಬೇಕು ಎಂದು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ, ಸಮಸ್ಯೆ ಬಗೆಹರಿಯದಿದ್ದರೆ ಲೋಡ್‌ಶೆಡ್ಡಿಂಗ್ ಅನಿವಾರ್ಯತೆ ಎದುರಾಗಬಹುದು ಎಂದು ಅಧಿಕಾರಿಗಳು ಆತಂಕ ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಚ್‌ನಿಂದ ಮೇ ಅಂತ್ಯದವರೆಗೆ ವಿದ್ಯುತ್ ಅಭಾವ ಉಂಟಾಗದಂತೆ ನೋಡಿಕೊಳ್ಳಲು ಹೊರ ರಾಜ್ಯಗಳಿಂದ ಅಗತ್ಯ ವಿದ್ಯುತ್ ಖರೀದಿಗೂ ಸಿದ್ಧತೆ ಮಾಡಿಕೊಳ್ಳಬೇಕು ಎಂದೂ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ ಕಲ್ಲಿದ್ದಲು ಸಮಸ್ಯೆ ಬಗೆಹರಿಸಿಕೊಳ್ಳಲು ಅಗತ್ಯ ಸಹಕಾರ ನೀಡುವಂತೆ ಕೇಂದ್ರ ಕಲ್ಲಿದ್ದಲು ಸಚಿವರಿಗೆ ಪತ್ರ ಬರೆಯಲು ಇಂಧನ ಸಚಿವರು ಸಭೆಯಲ್ಲಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ ಎಂದೂ ಹೇಳಲಾಗಿದೆ.