Advertisement

ಲೋಡ್‌ ಶೆಡ್ಡಿಂಗ್‌ ಆರಂಭ: ಜನರಲ್ಲಿ ಆತಂಕ

03:14 PM May 24, 2023 | Team Udayavani |

ಕೋಲಾರ: ಜಿಲ್ಲೆಯಲ್ಲಿ ಲೋಡ್‌ಶೆಡ್ಡಿಂಗ್‌ ಸಂಕಷ್ಟ ಕಾಡಲಾರಂಭಿಸಿದ್ದು, ಬಿಸಿಲಿನ ಬೇಗೆಗೆ ತತ್ತರಿಸಿರುವ ಜನತೆಯನ್ನು ಕಂಗೆಡುವಂತೆ ಮಾಡಿದೆ. ಕೋಲಾರ ದಲ್ಲಿ ಬಿಸಿಲಿನ ತಾಪ 37 ಡಿಗ್ರಿ ದಾಟಿದ್ದು, ಮನೆಗಳಲ್ಲಿ ಫ್ಯಾನ್‌ ಇಲ್ಲದೇ ಜೀವನ ನಡೆಸುವುದು ಸಾಧ್ಯವಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ.

Advertisement

ಮಧ್ಯಾಹ್ನ ಸಮಯದಲ್ಲಿ ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ಜನರನ್ನು ತಾಪದಲ್ಲಿ ಮುಳುಗಿಸುವಂತೆ ಮಾಡುತ್ತಿದ್ದು, ಜನ ಹಿಡಿಶಾಪ ಹಾಕುವಂತಾಗಿದೆ. ಕೋಲಾರ ಜಿಲ್ಲೆ ಕುಡಿಯುವ ನೀರಿಗಾಗಿ ಸಂಪೂ ರ್ಣವಾಗಿ ಕೊಳವೆ ಬಾವಿಗಳನ್ನೇ ನಂಬಿರುವುದರಿಂದಾಗಿ ಇಲ್ಲಿ ವಿದ್ಯುತ್‌ ಕೈಕೊಟ್ಟರೆ ಕುಡಿಯುವ ನೀರಿನ ಸಮಸ್ಯೆಯೂ ಕಾಡಲಿದೆ.

ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಪಂಪ್‌ ಸೆಟ್‌ಗಳಿಗೆ ಕೆಲ ಗಂಟೆಗಳು ಮಾತ್ರವೇ ತ್ರಿಫೇಸ್‌ ಕರೆಂಟ್‌ ಸರಬರಾಜು ಮಾಡಲಾಗುತ್ತಿದೆ. ಇದೇ ಅವಧಿಯಲ್ಲಿ ಮಾತ್ರ ಗ್ರಾಮೀಣ ಪ್ರದೇಶದ ಕುಡಿಯವ ನೀರಿನ ಸರಬರಾಜು ನಡೆಯುತ್ತದೆ. ಹತ್ತಾರು ರಾಜ್ಯಗಳಿಗೆ ವಿದ್ಯುತ್‌ ವಿತರಣೆಯ ಹೊಣೆಹೊತ್ತ ಪವರ್‌ ಗ್ರಿಡ್‌ ನಗರಕ್ಕೆ ಹೊಂದಿಕೊಂಡಂತಿದ್ದರೂ, ಜಿಲ್ಲೆಗೆ ಇದರಿಂದ ಆಗಿರುವ ಪ್ರಯೋಜನ ಮಾತ್ರ ಶೂನ್ಯ.

ಪವರ್‌ ಗ್ರಿಡ್‌ನಿಂದ ಜಿಲ್ಲೆಗೆ ನಷ್ಟ: ಜಿಲ್ಲೆಗೆ ಪವರ್‌ ಗ್ರಿಡ್‌ ತಂದೆವೆಂದು ಕೆಲವು ರಾಜಕಾರಣಿಗಳು ಬೀಗಿದರೂ, ಇದರಿಂದ ಆಗಿರುವ ನಷ್ಟ ಮಾತ್ರ ಜಿಲ್ಲೆಗೆ ಸಾವಿರಾರು ಕೋಟಿ ರೂಗಳು. ಇತರೆ ಯಾವುದೇ ರಾಜ್ಯಗಳು ಇದನ್ನು ಬೇಡವೆಂದ ಮೇಲೆ ಇಲ್ಲಿಗೆ ತರಲಾಗಿದೆ. ಭೂಮಿಗೆ ಚಿನ್ನದ ಬೆಲೆ ಇರುವಾಗ, ಈ ಪವರ್‌ ಗ್ರಿಡ್‌ನ‌ ಬೃಹತ್‌ ತಂತಿಗಳು ಹಾದು ಹೋಗಿರುವ ಪ್ರದೇಶಗಳ ಕೆಳಗಿನ ಭೂಮಿ ಕೇಳುವವರೇ ಇಲ್ಲವಾಗಿದೆ. ಇಲ್ಲಿನ ರೈತರ ಭೂಮಿಯ ಬೆಲೆ ಇಳಿಕೆ, ಸೇರಿದಂತೆ ಹಲವಾರು ಸಂಕಷ್ಟಗಳಿಗೆ ಕಾರಣವಾಗಿರುವ ಈ ಪವರ್‌ ಗ್ರಿಡ್‌ ಸಂಸ್ಥೆ ಜಿಲ್ಲೆಗೆ ಸ್ವಲ್ಪ ಪ್ರಮಾಣದಲ್ಲಾದರೂ ಉಚಿತ ಇಲ್ಲವೇ ಕಡಿಮೆ ದರದಲ್ಲಿ ವಿದ್ಯುತ್‌ ನೀಡುವ ಅಗತ್ಯವಿತ್ತು ಪವರ್‌ ಗ್ರಿಡ್‌ಅನ್ನು ಜಿಲ್ಲೆಗೆ ಬಿಟ್ಟುಕೊಟ್ಟ ರಾಜ್ಯಗಳು ಯಾವುದಾದರೂ ಕೈಗಾರಿಕೆಗಳಾಗಿದ್ದಲ್ಲಿ ಮತ್ತು ಅದರಿಂದ ಲಾಭವಿದ್ದಲ್ಲಿ ನಮ್ಮ ಜಿಲ್ಲೆಗೆ ಬಿಟ್ಟಕೊಡುತ್ತಿ ದ್ದವೇ ಎಂಬುದನ್ನು ಆಲೋಚಿಸಬೇಕಾಗುತ್ತದೆ.

ಹೆಚ್ಚುವರಿ ವಿದ್ಯುತ್‌ ಒದಗಿಸುವ ಕಾಳಜಿ ತೋರಲಿ: ಈಗಿನ ವಿದ್ಯುತ್‌  ಕ್ಷಾಮದ ಪರಿಸ್ಥಿತಿಯಲ್ಲಾದರೂ, ಕುಡಿಯಲು ಅಂತರ್ಜಲದ ನೀರು ಮತ್ತು ಅದನ್ನು ಹೊರತೆಗೆಯಲು ವಿದ್ಯುತ್‌ ಅನ್ನೇ ಅವಲಂಬಿಸಿರುವ ಇಲ್ಲಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ, ಹೆಚ್ಚುವರಿ ಕರೆಂಟ್‌ ಒದಗಿಸುವ ಪ್ರಾಮಾಣಿಕ ಕಾಳಜಿಯನ್ನು ಪವರ್‌ ಗ್ರಿಡ್‌ ಮತ್ತು ಇದರ ಹೊಣೆಹೊತ್ತಿರುವ ಕೇಂದ್ರ ಸರ್ಕಾರದಲ್ಲಿನ ನಮ್ಮ ಜನಪ್ರತಿನಿಧಿಗಳು ಹೊರಬೇಕಾಗಿದೆ.

Advertisement

ಲೋಡ್‌ ಶೆಡ್ಡಿಂಗ್‌ ಮೂಲಕ ವಿದ್ಯುತ್‌ ಕಣ್ಣಾಮುಚ್ಚಾಲೆ ಆಡಲು ಆರಂಭಿಸಿದರೆ, ನಮಗೆ ಉಚಿತ ವಿದ್ಯುತ್‌ ಬೇಡ, ಸಮರ್ಪಕ ವಿದ್ಯುತ್‌ ನೀಡಿ ಸಾಕು ಎಂದು ಜನರೇ ಸರ್ಕಾರಕ್ಕೆ ದುಂಬಾಲು ಬೀಳುವ ಪರಿಸ್ಥಿತಿ ಎದುರಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next