ಕಲಬುರಗಿ: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ ಎಂದು
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಹಂತವಾಗಿ ಸಾವಿರ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವ ಚಿಂತನೆ ಹೊಂದಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದರು.
ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಹಾಗೂ ವಿಲೀನ ಮಾಡುವುದಿಲ್ಲ. ಕಡಿಮೆ ವಿದ್ಯಾರ್ಥಿಗಳಿದ್ದರೂ ಆ ಶಾಲೆಗಳು ಮುಂದುವರಿಯಲಿವೆ. ಇಡೀ ಇಲಾಖೆ ವಿದ್ಯಾರ್ಥಿ ಕೇಂದ್ರೀಕೃತವಾಗಬೇಕು. ಗುಣಮಟ್ಟದ ಶಿಕ್ಷಣ ಹಾಗೂ ಕ್ರಿಯಾತ್ಮಕ ಮತ್ತು ಕೌಶಲ್ಯದಾಯಕ ಶಿಕ್ಷಣ ಸಿಗುವ ವ್ಯವಸ್ಥೆ ಆಗಬೇಕು. ಇದಾದಲ್ಲಿ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಬದಲಾವಣೆ ತರಬಹುದು.
ಜಾಗತಿಕ ಯುಗದಲ್ಲಿ ಖಾಸಗಿ ವಲಯ ವಿಸ್ತಾರವಾಗುತ್ತಿದೆ. ಇದಕ್ಕೆ ಪೂರಕವಾದ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಇಲಾಖೆಯಿಂದ ಮಾಡುತ್ತಿದ್ದೇವೆ ಎಂದರು.