ಹೊಸದಿಲ್ಲಿ : ಹಿರಿಯ ಬಿಜೆಪಿ ನಾಯಕ ಎಲ್ ಕೆ ಆಡ್ವಾಣಿ ಅವರು ದೇಶದ ಮುಂದಿನ ರಾಷ್ಟ್ರಪತಿಯಾಗಲಿದ್ದಾರೆ ಎಂದು ಝೀ ನ್ಯೂಸ್ ಮೂಲಗಳು ವರದಿ ಮಾಡಿವೆ.
ದೇಶದ ಮುಂದಿನ ರಾಷ್ಟ್ರಪತಿ ಪದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ಆಡ್ವಾಣಿ ಅವರ ಹೆಸರನ್ನು ಪ್ರಸ್ತಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್‌ನ ಸೋಮನಾಥ್‌ನಲ್ಲಿ ನಡೆದಿದ್ದ ಬಿಜೆಪಿ ವರಿಷ್ಠರ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಆಡ್ವಾಣಿ ಅವರ ಹೆಸರನ್ನು ಮುಂದಿನ ರಾಷ್ಟ್ರಪತಿ ಪದಕ್ಕೆ ಸೂಚಿಸಿದ್ದರು ಎಂದು ಝೀ ನ್ಯೂಸ್ ವರದಿ ತಿಳಿಸಿದೆ.
‘ಹಿರಿಯ ಬಿಜೆಪಿ ನಾಯಕ ಎಲ್ ಕೆ ಆಡ್ವಾಣಿ ಅವರಿಗೆ ರಾಷ್ಟ್ರಪತಿ ಹುದ್ದೆಯು ಗುರುದಕ್ಷಿಣೆಯಾಗಿ ಸಲ್ಲಲಿದೆ’ ಎಂದು ಮೋದಿ ಹೇಳಿರುವುದಾಗಿ ವರದಿಯಾಗಿದೆ.
ಸೋಮನಾಥದಲ್ಲಿ ನಡೆದಿದ್ದ ಬಿಜೆಪಿ ವರಿಷ್ಠರ ಸಭೆಯಲ್ಲಿ ಅಮಿತ್ ಶಾ, ಕೇಶುಭಾಯಿ ಪಟೇಲ್ ಮತ್ತು ಎಲ್ ಕೆ ಆಡ್ವಾಣಿ ಅವರು ಉಪಸ್ಥಿತರಿದ್ದರು.
ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರಚಂಡ ವಿಜಯ ಗಳಿಸಿರುವ ಬಿಜೆಪಿಗೆ, ತನ್ನ ಆಯ್ಕೆಯ ಅಭ್ಯರ್ಥಿಯನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ಮಾಡುವ ಅವಕಾಶ ಒದಗಿದೆ.
ಈ ವರ್ಷ ಜುಲೈ ತಿಂಗಳಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯಲಿದೆ.