ಹೊಸದಿಲ್ಲಿ : ಹೌರಾ-ದಿಲ್ಲಿ ಪ್ರಯಾಣದ 12303 ನಂಬರ್‌ನ ಪೂರ್ವ ಎಕ್ಸ್‌ಪ್ರೆಸ್ ಟ್ರೈನ್‌ನಲ್ಲಿ ಪ್ರಯಾಣಿಕರೋರ್ವರಿಗೆ ನೀಡಲಾದ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಬಿರಿಯಾನಿಯಲ್ಲಿ ಹಲ್ಲಿಯನ್ನು ಕಾಣುತ್ತಲೇ ಸಹ ಪ್ರಯಾಣಿಕರೋರ್ವರು ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ವಿಷಯವನ್ನು ಟ್ವೀಟ್ ಮಾಡಿದ್ದಾರೆ.( “lizard found fried in biryani train no 12303,HA1,seat no 1,passenger feeling unwell ,no medical attention#indianrailways,”). ಈ ಆತಂಕಕಾರಿ ಘಟನೆ ನಿನ್ನೆ ಮಂಗಳವಾರ ನಡೆದಿದೆ.
“ಬಿರಿಯಾನಿಯಲ್ಲಿ ಹಲ್ಲಿ ಪತ್ತೆಯಾದ ಘಟನೆಯನ್ನು ಅನುಸರಿಸಿ ದಾನಾಪುರ ವಿಭಾಗದಲ್ಲಿ ತಪಾಸಣೆ ಮಾಡಲಾಗಿದೆ. ಅದನ್ನು ಸೇವಿಸಿ ಅಸ್ವಸ್ಥರಾದ ಪ್ರಯಾಣಿಕನಿಗೆ ಔಷಧಿ ನೀಡಲಾಗಿದೆ. ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ದಾನಾಪುರ ವಿಭಾಗದ ಡಿಆರ್‌ಎಂ ಕಿಶೋರ್ ಕುಂವಾ ಹೇಳಿದ್ದಾರೆ.
ಆದರೆ ಸತ್ತ ಹಲ್ಲಿ ಇದ್ದ ಬಿರಿಯಾನಿ ಸೇವಿಸಿ ಅಸ್ವಸ್ಥರಾದ ಪ್ರಯಾಣಿಕ, “ನನಗೆ ತಡವಾಗಿ ಔಷಧಿ ನೀಡಲಾಯಿತು’ ಎಂದು ದೂರಿದ್ದಾರೆ.
ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಿಗುವ ಆಹಾರವು ಸೇವನೆಗೆ ಅಯೋಗ್ಯವಾಗಿದ್ದು ಗುಣಮಟ್ಟದಲ್ಲಿ ಅತ್ಯಂತ ಕಳಪೆಯಾಗಿದೆ ಎಂದು ಇದೇ ಜು.21ರಂದು ಸಿಎಜಿ, ಸರಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಖಂಡ ತುಂಡವಾಗಿ ಹೇಳಿತ್ತು. ಆ ಬಗ್ಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು.