ಬೆಂಗಳೂರು: ಪತಿಯನ್ನು ಬಿಟ್ಟು ಲಿವಿಂಗ್ ಟುಗೆದರ್‌ನಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿನಿ ಹಾಗೂ ಆಕೆಯ ಪ್ರಿಯಕರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಸೌಮಿನಿದಾಸ್ (20) ಮತ್ತು ಕೇರಳ ಮೂಲದ ಅಭಿಲ್ ಅಬ್ರಹಾಂ(29) ಮೃತರು. ನ.5ರಂದು ಕೊತ್ತನೂರಿನ ದೊಡ್ಡಗುಬ್ಬಿ ಗ್ರಾಮದ ಅಪಾರ್ಟ್‌ಮೆಂಟ್ ನಲ್ಲಿ ಘಟನೆ ನಡೆದಿದೆ.
ಸೌಮಿನಿದಾಸ್ ಈಗಾಗಲೇ ಮದುವೆಯಾಗಿದ್ದು, ಪತಿ ಪಶ್ಚಿಮ ಬಂಗಾಳ ದಲ್ಲಿದ್ದಾನೆ. ನರ್ಸಿಂಗ್ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದು, ದೊಡ್ಡಗುಬ್ಬಿ ಗ್ರಾಮದ ಖಾಸಗಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದಳು. ಇದೇ ವೇಳೆ ಕೇರಳ ಮೂಲದ ಅಭಿಲ್ ಅಬ್ರಾಹಂ ಹೋಂ ನರ್ಸಿಂಗ್‌ನಲ್ಲಿ ಸಮಾಲೋಚಕನಾಗಿದ್ದ. ಈ ವೇಳೆ ಪರಸ್ಪರ ಇಬ್ಬರಿಗೆ ಪರಿಚಯವಾಗಿದ್ದು, ಆತ್ಮೀಯತೆ ಬೆಳೆದು ಪರಸ್ಪರ ಪ್ರೀತಿಸುತ್ತಿದ್ದು, ಪ್ರಿಯಕರನನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆತಂದು ಆತನೊಂದಿಗೆ ಸಹಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ಈ ನಡುವೆ ಮೂರು ತಿಂಗಳ ಹಿಂದೆ ಪಶ್ಚಿಮ ಬಂಗಾಳಕ್ಕೆ ಹೋಗಿದ್ದ ಸೌಮಿನಿದಾಸ್ ಗೆ ಬೇರೊಬ್ಬನ ಜತೆ ಆತ್ಮೀಯವಾಗಿರುವ ವಿಚಾರ ತಿಳಿದ ಪತಿ ಎಚ್ಚರಿಕೆ ನೀಡಿ ಕಳುಹಿಸಿದ್ದ. ಅದರಿಂದ ನೊಂದಿದ್ದ ಸೌಮಿನಿ ದಾಸ್, ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು. ನ.5ರಂದು ಬೆಳಗ್ಗೆ ಪತಿಗೆ ಕರೆ ಮಾಡಿ, ‘ನಿನ್ನ ಜತೆ ನಾನಿರುವುದಿಲ್ಲ. ನೀನು ನನಗೆ ಸ್ವತಂತ್ರವಾಗಿರಲು ಬಿಡಲ್ಲ. ನಾನು ನನ್ನ ಸ್ನೇಹಿತನ ಜತೆಯೇ ಇರುತ್ತೇನೆ’ ಎಂದಿದ್ದಾಳೆ. ಅದಕ್ಕೆ ಪತಿ ನಿಂದಿಸಿದ್ದಾನೆ. ಅದರಿಂದ ಬೇಸರಗೊಂಡ ಸೌಮಿನಿದಾಸ್, ಭಾನುವಾರ ಮಧ್ಯಾಹ್ನ 12.45ಕ್ಕೆ ಪ್ರಿಯಕರ ಅಭಿಲ್ ಅಬ್ರಾಹಾಂನನ್ನು ಮನೆಗೆ ಕರೆಸಿಕೊಂಡು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಕೊತ್ತನೂರು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.