ಮಾಲ್ಗುಡಿಯಂತಹದ್ದೇ ಹಳ್ಳಿ. ಹಾಲೆ¤ನೆ ಕೊರಳ ತೂಗುತ ಹಕ್ಕಿಹಾಡುವ ಹಸಿರುಗದ್ದೆಯ ನಡುವೆ ಕಂಬಗಳ ಚೌಕಿಮನೆ. ಚಾವಡಿಯಲ್ಲಿ ಮರದ ಫ್ರೆಮಿನೊಳಗೆ ಲಕ್ಷ್ಮಿಯೆಡೆ ಪ್ರೇಮನೋಟ ಬೀರುತ್ತಿರುವ ಶೇಷಶಯನನ ಪಟದ ಹಿಂದೆ ಹುಲ್ಲಗೂಡಿನಲಿ ಚಿಲಿಪಿಲಿಗುಟ್ಟುವ ಗುಬ್ಬಚ್ಚಿಗಳನ್ನೇ ತೊಲೆಯುಯ್ನಾಲೆಗಳಲ್ಲಿ ತೂಗುತ್ತ ಮೌನದಲೆ ನೋಡುವ ಸೌತೆ, ಸೋರೆ, ಬೂದುಕುಂಬಳಕಾಯಿ; ಪಡಸಾಲೆಯಲ್ಲಿ ಮುದಿಜೀವದ ಜೋಗುಳ ಕೆಜೋಲಿಯನ್ನು ಓರೆಮಾಡಿ ಗಾಳಿಗೆ ಮುಚ್ಚಿಹೋಗುತ್ತಿರುವ ರೆಪ್ಪೆಯೆಸಳನ್ನು ಅರಳಿಸಲು ಯತ್ನಿಸುತ್ತ ಆಊ ರಾಗವೆಳೆಯುವ ಬೆಣ್ಣೆಮಗು; ಅಡುಗೆಮನೆಯಲ್ಲಿ ಮಣ್ಣಮಡಕೆಯಲ್ಲಿ ಘಮ್ಮೆಂದು ಕುದಿಯುವ ಕುಚ್ಚಲಕ್ಕಿಗಂಜಿ; ಪಡಸಾಲೆಯ ಕಲೆಂಬಿಯಲ್ಲಿ ಅಡ್ಡವಾದ ಅಜ್ಜನ ಕಾಲಬದಿಯಲ್ಲೇ ಕುರುಕುರು ರಾಗವೆಳೆಯುತ್ತ ಬೆಚ್ಚಗೆ ಕೂತಿರುವ ಬೆಕ್ಕು; ಅಂಗಳದಲ್ಲಿ ರೆಕ್ಕೆ ಕಟ್ಟಿಕೊಂಡು ಆಟವಾಡುತ್ತಿರುವ ಉದ್ದಲಂಗದ ಹೆಣ್ಣುಮಕ್ಕಳು.
“”ಹಂಡೆ ಇಟ್ಟೆ, ನೀರುತುಂಬಿದೆ, ಭತ್ತ ಸುರಿದೆ, ಬೆಂಕಿ ಮಾಡಿದೆ, ಬೆಂದ್ತಾ ನೋಡಿದೆ” ಎಂದು ಬಾಯಿಗೆಸೆದು ಗದ್ದಕ್ಕೊಂದು ಗುದ್ದಿ ಟಕ್ಕ ಸದ್ದಾದೊಡನೆ “”ಹಾ ಬೆಂದಿತು” ಎನ್ನುತ್ತ; “”ಚರ್‌ಚುರ್‌ಚರ್‌ಚುರ್ ಭತ್ತ ಒಣಗಿಸಿದೆ”, “”ಡಂಕೂಡುಂಕೂಡಂಕೂಡುಂಕೂ ಭತ್ತಕುಟ್ಟಿದೆ”, “”ತಬುಡ್ಕೂತಬುಡ್ಕೂತಬುಡ್ಕೂ ತಬಡಬುಡ್ಕೂಭತ್ತಕೇರಿದೆ” ರಾಗವೆಳೆಯುತ್ತ ಇಷ್ಟೂ ಕ್ರಿಯೆಗಳನ್ನು ಒಲೆ, ಹಂಡೆ, ಭತ್ತ, ಒನಕೆ ಯಾವ ಸಾಧನವೂ ಇಲ್ಲದೆಯೇ ಬರೇ ಮಾತು, ಶಬ್ದ, ನಟನೆಯಲ್ಲೇ ಕಣ್ಮುಂದೆ ಕಟ್ಟುತ್ತಾರೆ ಈ ಹೆಣ್ಣುಮಕ್ಕಳು. ಇದಾದಮೇಲೆ “”ಊಟ ಮಾಡುವನ?” ಎನ್ನುತ್ತ ಮೂರುಕಲ್ಲಿಟ್ಟು ಒಲೆಹೂಡಿ, ತೆಂಗಿನಕರಟವಿಟ್ಟು, ವಾಂಟೆಯಲ್ಲಿ ಫೂವೆಂದು ಒಲೆಯೂದಿ, ಮಾವಿನೆಲೆ ಗೊಂಚಲನ್ನು ನೇತಾಡಿಸುತ್ತ “”ಬಂಗುಡೆ ತಂದೆ” ಎಂದು ಕತ್ತರಿಸಿ ಕರಟದಲ್ಲಿ ತುಂಬಿಸಿ, ಸೊಪ್ಪುಕಸಕಲ್ಲಲ್ಲಿ ಗುದ್ದಿ ಬೆರೆಸಿ ಸಾಲಲ್ಲಿ ಕುಳಿತು ಊಟ ಬಡಿಸಿ ತಿಂದಂತೆ ಮಾಡಿ “”ಕತ್ತಲಾಯ್ತು ಇನ್ನು ಮಲಗುವಾ” ಎಂದು ಎಲ್ರೂ ಒಟ್ಟಿಗೆ ಬಿದ್ದುಕೊಂಡು ಕೋಳಿನಿದ್ದೆ. ಇದು ಹಳ್ಳಿಯಲ್ಲಿ ಹೆಣ್ಣುಮಕ್ಕಳು ಅನುಕರಿಸುತ್ತಿದ್ದ ಬದುಕಿನ ಆಟ, ರಂಗದಲ್ಲಾದರೆ ಬದುಕಿನ ನಾಟಕ. ಬೆಳೆದ ಮೇಲೆ ಇದೇತಾನೇ ಮಣ್ಣಿನಮಕ್ಕಳ ಜೀವನಕ್ರಮ?
“ರತ್ತೋರತ್ತೋರಾಯನ ಮಗಳೇ, ಕಣ್ಣಾಮುಚ್ಚೇಕಾಡೇಗೂಡೇ, ಅಟ್ಟಮುಟ್ಟ ತನ್ನದೇವಿಯೆಂದು’ ಮಕ್ಕಳ ಆಟಕ್ಕಾಗಿ ಇಲ್ಲಿ ಹುಟ್ಟಿರುವ ಪದಗಳೆಷ್ಟೋ! ಜುಬಿಲಿ, ಪೊಕ್ಕು, ಕುಂಟೆಬಿಲ್ಲೆ, ಪಗಡೆ, ಚೆನ್ನೆಮಣೆಯಂತಹ ಆಟಗಳೆಷ್ಟೋ! ತಾಳೆಗರಿಯದೇ ವಾಚು, ಉಂಗುರ, ಹಾವು, ಹಕ್ಕಿ; ಎರಡು ಕುಂಟಲದೆಲೆಗಳ ನಡುವೆ ತೂತುಮಾಡಿ ಕಣ್ಣರೆಪ್ಪೆಗಳ ಮೇಲೆ ಚರ್ಮಕ್ಕೆ ಸಿಕ್ಕಿಸಿಕೊಂಡರದೇ ಕನ್ನಡಕ; ಎರಡು ತಾಳೆಕಾಯಿಗಳಿಗೆ ತೂತು ಕೊರೆದು ಅಡ್ಡಕ್ಕೆ ಕೋಲು ಸಿಕ್ಕಿಸಿ ಹಗ್ಗಕಟ್ಟಿ ಎಳೆದರದೇ ಬಂಡಿ; ತಾಳೆಗರಿಯಲ್ಲಿ ಕೂರಿಸಿ ಎಳೆದೊಯ್ದರದೇ ಗಾಡಿಸವಾರಿ; ಎರಡು ಗೋಟು ತೆಂಗಿನಕಾಯಿಗಳಿಗೆ ತೂತುಮಾಡಿ ಅಡ್ಡಕ್ಕೆ ಕೋಲು ಸಿಕ್ಕಿಸಿ ಕೆರೆಗೊಯ್ದು ಅದರ ಮೇಲೆ ಅಂಗಾತ ಬಿದ್ದು ಕೆರೆಯಲ್ಲಿ ಕೈಕಾಲು ಬಡಿದರದೇ ಈಜು. ಭೂತಕೋಲ ನೋಡಿ ಬಂದು, “”ಟಕ್ ಡುಮ್ಮು ಪ್ಯಾಪೇ ಕಂಡನಿಲ್ಲಗ್(ಗಂಡನಮನೆಗೆ) ಪೋಪೇ (ಹೋಗುವೇ), ತೌಡ್ ಮುಕ್‌ತಕ್‌ಡಿನ್ನ, ಉಪ್ಪಡ್ನಕ್ (ಉಪ್ಪಿನಕಾಯಿ ನೆಕ್ಕು) ಗುಂಡದಿಂಗ್ (ಕಡುಬು ನುಂಗು) ಎಂದೆಲ್ಲ ವಾದನಗಳ ಧ್ವನಿಯನ್ನು ಲಯಬದ್ಧವಾಗಿ ಪದಗಳಲ್ಲಿ ಅನುಕರಿಸುತ್ತ ಕ್ರಿಯಾಶೀಲರಾಗಿ ಬೆಳೆಯುವ ಸೃಜನಶೀಲ ಹಳ್ಳಿಮಕ್ಕಳ ಬದುಕಿನಲ್ಲೊಂದು ಚಲನಶೀಲಗುಣವಿತ್ತು.
ಏನೂ ಇಲ್ಲದಿದ್ದಲ್ಲಿಯೂ ಜಗತ್ತನ್ನೇ ನೋಡುವ ಕಲ್ಪನಾಶಕ್ತಿ ಮಕ್ಕಳಿಗಿರುತ್ತದೆ. ಅವರು ಬರೆವ ಮೋಡಗಳಿಗೂ ಕಣ್ಣುಕಿವಿ ಜೀವ. ಟಿಕೇಟು ಬೇಡ ರೈಲು ಬೇಡ, ಎಣಿಸಿದ ಕೂಡಲೆ ಕುಳಿತಲ್ಲೇ ದಿಲ್ಲಿ! ನಿಂತಲ್ಲೇ ಡಾಕ್ಟರ್, ಟೀಚರ್, ಕಂಡಕ್ಟರ್, ಪೈಲೆಟ್! ಕಲ್ಪನೆಯ ರೆಕ್ಕೆಕಟ್ಟಿಕೊಂಡು ಹಾರುತ್ತಲೇ ಇರುತ್ತಾರೆ. ನಾವೋ ಶಾಶ್ವತವಾಗಿ ನೆಲಕ್ಕೇ ಅಂಟಿಕೊಂಡಿರುತ್ತೇವೆ. ಮಕ್ಕಳು ಕಡಲತೀರದಲ್ಲಿ ಮಳಲಮನೆ ಕಟ್ಟುತ್ತವೆ, ತೆರೆಗಳಲ್ಲಿ ಕೊಚ್ಚಿಕೊಂಡು ಹೋದರೂ ಮತ್ತೆಮತ್ತೆ ಕಟ್ಟುವ ಲಾಲಿತ್ಯವಿದೆ. ನಾವೋ ನಮ್ಮ ಮಕ್ಕಳು, ಮೊಮ್ಮಕ್ಕಳು ಮರಿಮಕ್ಕಳಿಗಾಗಿ ಶಾಶ್ವತವಾದ ಮನೆಯನ್ನೇ ಬಯಸುತ್ತೇವೆ. ನಮ್ಮಂತೆ ಮಕ್ಕಳಿಗೆ ತ್ರಿಕಾಲ ಬೇಕಾಗಿಲ್ಲ. ಅವು ಸದಾ ವರ್ತಮಾನದಲ್ಲೇ ಇರುವುದರಿಂದ ಭೂತ-ಭವಿಷ್ಯತ್ತುಗಳ ಭಯವಿಲ್ಲ. ಇದರಿಂದ ಎಲ್ಲವೂ ಧನಾತ್ಮಕವಾಗಿದ್ದು, ಅವರ ಸೃಜನಶೀಲಶಕ್ತಿಯು ಉತ್ಕೃಷ್ಟವಾಗಿರುತ್ತದೆ. ಬದುಕಿನ ಅನುಭವಗಳಿಂದ ಪೆಟ್ಟುತಿಂದು ತಿಂದು ನಾವು ಮುಂದೆ ಕಾಲಿಡುವಾಗ ನೋಡಿಕೊಂಡು ಇಡುತ್ತೇವೆ, ಬಿದ್ದುಹೋಗುವ ಭಯದಿಂದ. ಆದರೆ ಮಕ್ಕಳು ಹಾಗಲ್ಲ. ಸ್ಪೈಡರ್‌ಮ್ಯಾನ್ ನೋಡಿ ಅವನಂತೆ ಹಾರಲು ಹೋಗಿ ಜೀವ ಕಳಕೊಂಡದ್ದನ್ನು, ಬ್ಲೂವೇಲಿನ ಭಯಂಕರ ಪರಿಣಾಮಗಳನ್ನು ವಾರ್ತೆಗಳಲ್ಲಿ ಓದಿದ್ದೇವೆ.
ಧರ್ಮರಾಯ ಕುಂತಿಯನ್ನು ತಲೆಯಲ್ಲಿ ಹೊತ್ತು ಭೂಪ್ರದಕ್ಷಿಣೆ ಮಾಡಿದವನೇ, “”ಅಮ್ಮಾ ನಿನ್ನ ಋಣ ಸಂದಾಯ ಮಾಡಿದೆನಾ?” ಎಂದನಂತೆ. “”ಇಕಾ, ನೀನು ನನ್ನ ಕಿಬ್ಬೊಟ್ಟೆ ಅಳ್ಳೆಯಲ್ಲಿರುವಾಗ ನಾನು ಸೊಂಟದಲ್ಲಿ ಒಂದು ಕೊಡಪಾನ ನೀರು ಹೊತ್ತುತಂದೆ. ಆ ಋಣವೇ ಇನ್ನೂ ಸಂದಾಯವಾಗಿಲ್ಲ” ಎಂದಳಂತೆ ಕುಂತಿ. ಒಂದು ಮಗುವನ್ನು ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ಕಾಯುವುದೇ ಭಂಗ, ಕೈಗೊಂದು ಕಾಲಿಗೊಂದು ಯಂತ್ರಕಟ್ಟಿಕೊಂಡಿರುವ ಈ ನಾಜೂಕಿನ ಸುಖಗಾಲದಲ್ಲಿ! ಅಂತದ್ದರಲ್ಲಿ ಕೂತಲ್ಲಿ ಕೂರದ ನಿಂತಲ್ಲಿ ನಿಲ್ಲದ ವಿಪರೀತ ತಂಟೆಯ ಹತ್ತು-ಹನ್ನೆರಡು ಮಕ್ಕಳನ್ನು ದೊಡ್ಡದು ಮಾಡಬೇಕಾದರೆ ಎಷ್ಟು ಕಷ್ಟಪಟ್ಟಿರಬೇಕು ಅಂದಿನ ತಾಯಿಯಂದಿರು!
“”ಹಾರುವ ಎತ್ತಿನಬಾಲ ಎಷ್ಟೂಂತ ಹಿಡಿಲಿಕ್ಕಾಗುತ್ತದೆ ಹೇಳು? ಒಂದು ಮಗುವನ್ನು ದೊಡ್ಡದು ಮಾಡಬೇಕಾದರೆ ಏಳು ಕೆರೆಯ ನೀರು ಕುಡಿದಿದ್ದೇನೆ. ಈಗ ಅವುಗಳಿಗೆ ಕಣ್ಣಲ್ಲಿ ನೆತ್ತರುಂಟ? ಹಾರಲು ರೆಕ್ಕೆಬಂತು, ಕೋಕಾಯಿ ಕುಟುಕಲು ಕೊಕ್ಕು ಬಂತು. ಇನ್ನು ನನ್ನ ಹಂಗು ಬೇಡ ಅವಕ್ಕೆ! ನಿಮ್ಮನ್ನು ಸಾಕಿ ದೊಡ್ಡ ಮಾಡಲು ಎಷ್ಟು ಭಂಗ ಬಂದೆ ಗೊತ್ತುಂಟ ನಿಮಗೆ? ಗಾಳಿಯಲ್ಲಿ ಬೆಳೀಲಿಲ್ಲ ನೀವು!” ಎಂದರೆ, “”ಯಾಕೆ ಬೆಳೆಸಿದ್ರಿ? ನಾನೇನು ನಿಮ್ಮಲ್ಲಿ ಹೇಳಿದೆನ ಬೆಳೆಸಿ ಅಂತ?” ಎಂದು ಉತ್ತರ ಕೊಡ್ತವೆ ಎಂದು ಬಿಕ್ಕಳಿಸಿದರು ಮೊನ್ನೆ ಮೊನ್ನೆ ಹೊಸಪೇಟೆಯ ಸಂತೆಯಲ್ಲಿ ಸಿಕ್ಕಿದ ಯಮುನಮ್ಮ.
“ಹತ್ತಾಗುವುದು ನಿನ್ನಿಂದ ಮುತ್ತಾಗುವುದು ನನ್ನಿಂದ’ ಎನ್ನುತ್ತದಂತೆ ಕುರುಡುಕಾಂಚಾಣ. ಒಮ್ಮೆ ಹತ್ತು ರೂಪಾಯಿ ಕೂಡಿಟ್ಟೆವಾ ಅಲ್ಲಿಗೆ ಶುರು. ಹತ್ತು ಹತ್ತು ಹತ್ತೆಂದು ಸೇರಿಸುವ ದುಶ್ಚಟ ಬೆಳೆಯುತ್ತ ಸಾವಿರವಾಗಿ, ಸಾವಿರ ಸಾವಿರ ಲಕ್ಷವಾಗಿ ಕೋಟಿಯಾಗಿ ದುರಾಸೆಗೆ ಮಿತಿಯೆಲ್ಲಿ? ಹೊಸಗಾಲದ ಬಹುಪಾಲು ಮಕ್ಕಳಿಗೆ ಗಾಂಧಿಅಂಬೇಡ್ಕರ್‌ಗೊತ್ತಿಲ್ಲದಿದ್ದರೂ ಐಟಿಬಿಟಿ ಕಂಪೆನಿಗಳ ಹೆಸರು ಹುಟ್ಟುತ್ತಲೇ ಬಾಯಿಪಾಠವಾಗಿರುತ್ತವೆ. ಈ ಯಂತ್ರಯುಗದಲ್ಲಿ ಮಗುವಿಗೆ ಆಡಿಕುಣಿಯಲು ಇನ್ನೊಂದು ಜೀವ ಬೇಡ. ಆಟಿಕೆಗನ್ನಲ್ಲಿ ಗುಂಡು ಹೊಡೆಯುತ್ತ, ಲೋಹದ ಆಟಿಕೆಗಳಲ್ಲಿ ಮೊಬೈಲ್‌ಗೇಮ್ಸ್‌ಗಳಲ್ಲಿ ಮುಳುಗಿ ನೀರಲ್ಲಿ ಬಿದ್ದ ಹೇನಿನಂತಾಗುತ್ತಿದೆ. ಮಕ್ಕಳನ್ನು ರ್‍ಯಾಂಕ್‌ಬ್ಯಾಂಕ್ ಎನ್ನುತ್ತ ನಿಸರ್ಗದಿಂದ ಮುಗ್ಧತೆಯಿಂದ ದೂರವಾಗಿಸಿ ಹರೆಯ ಬರುವ ಮುನ್ನವೇ ಪ್ರಬುದ್ಧರನ್ನಾಗಿಸುವುದು ಸರಿಯೇ ಎಂದು ಯೋಚಿಸಬೇಕಿದೆ.
– ಕಾತ್ಯಾಯಿನಿ ಕುಂಜಿಬೆಟ್ಟು