Advertisement

ಇತರರಿಗೆ ಕೇಡು ಬಯಸದೆ ಬದುಕುವುದೇ ಸಾಧನೆ

06:04 PM Nov 08, 2021 | Team Udayavani |

ಹುಬ್ಬಳ್ಳಿ: ಸ್ವಾರ್ಥಕ್ಕಾಗಿ ಎಲ್ಲರೂ ಬದುಕುತ್ತಾರೆ. ಆದರೆ ಅದು ಜೀವನವಲ್ಲ. ಪರರಿಗಾಗಿ ಬದುಕುವುದು, ತಮ್ಮೊಂದಿಗೆ ಸುತ್ತಮುತ್ತಲಿನವರು ಚೆನ್ನಾಗಿ ಇರಬೇಕೆನ್ನುವ ವಿಶಾಲ ಹೃದಯ ಹೊಂದುವ ಮೂಲಕ ಪರೋಪಕಾರಿ ಜೀವನ ಸಾಗಿಸುವುದೇ ನಿಜವಾದ ಬದುಕು ಎಂದು ಮೈಸೂರಿನ ಶ್ರೀ ದತ್ತವಿಜಯಾನಂದತೀರ್ಥ ಸ್ವಾಮೀಜಿ ಹೇಳಿದರು.

Advertisement

ಕುಸುಗಲ್ಲ ರಸ್ತೆಯ ಶ್ರೀನಿವಾಸ ಗಾರ್ಡನ್‌ದಲ್ಲಿ ಅವಧೂತ ದತ್ತಪೀಠಾಧಿಪತಿ ಜಗದ್ಗುರು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕೃಪಾಶೀರ್ವಾದದಿಂದ ಹಮ್ಮಿಕೊಂಡಿದ್ದ ಗಣಹೋಮ, ನಾಮ ಸಂಕೀರ್ತನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪರರಿಗಾಗಿ ಬದುಕುವುದು, ತಮ್ಮ ಹಿತದಂತೆ ಇನ್ನೊಬ್ಬರ ಏಳ್ಗೆ ಬಯಸುವುದು, ಇತರರಿಗೆ ಕೇಡನ್ನು ಬಯಸದೆ ಬದುಕುವುದೆ ಸಾಧನೆ. ಇದು ಸಾಧಿಸಿದವರು ನಿಜವಾದ ಗುರುಗಳು. ಗುರು ಸ್ಥಾನ ಎನ್ನುವುದು ವಿಶಿಷ್ಟವಾಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಗುರುವಿನ ರೂಪದಲ್ಲಿ ಭಗವಂತ ಕಾಪಾಡುತ್ತಿದ್ದಾನೆ.

ಭಯ ಪಡುವ ಅಗತ್ಯವಿಲ್ಲ. ಅಗತ್ಯ ಕ್ರಮಗಳನ್ನು ಕೈಗೊಂಡು ಇದನ್ನು ಗೆಲ್ಲಬೇಕು. ಈ ಸಂದರ್ಭದಲ್ಲಿ ಆರೋಗ್ಯ, ಸಂಬಂಧ, ಸಂಸ್ಕೃತಿ ಪಾಠ ಕಲಿಸಿದೆ. ಗುರುಕೃಪೆ ಹಾಗೂ ಗುರು ಅನುಗ್ರಹದಿಂದ ಕೊರೊನಾ ಕಡಿಮೆಯಾಗುತ್ತದೆ. ವಿದೇಶ ವ್ಯಾಮೋಹ ಕಡಿಮೆಯಾಗಿ ಭಾರತೀಯ ಸಂಸ್ಕೃತಿ ಮುನ್ನೆಲೆಗೆ ಬಂದಿದೆ. ಕೈ ಕುಲುಕುವ ಬದಲು ನಮಸ್ಕಾರ ಎನ್ನುವ ಋಷಿಮುನಿ ಸಂಸ್ಕೃತಿ ಮರುಕಳಿಸಿದೆ. ಬದುಕು ಯಾವ ರೀತಿ ಬದಲಿಸಿಕೊಳ್ಳಬೇಕು ಎಂಬುವುದನ್ನು ತೋರಿಸಿದೆ ಎಂದರು.

ಎಲ್ಲಾ ದೇವತೆಗಳು ಕಾರ್ತಿಕ ಮಾಸದಲ್ಲಿ ನೆಲೆಸಿರುತ್ತಾರೆ. ಮೊದಲು ದೀಪಾರಾಧನೆ ಮಾಡಿ ಮನಸ್ಸಿನಲ್ಲಿ, ಹೃದಯದಲ್ಲಿ ಗುರು ದೀಪ ಬೆಳಗಿಸಿದಾಗ ಭಗವಂತನ ದರ್ಶನವಾಗುತ್ತದೆ ಎನ್ನುವ ಸಂದೇಶ ಕಾರ್ತಿಕ ಮಾಸವಾಗಿದೆ. ನಮ್ಮ ಮನಸ್ಸು, ಹೃದಯದಲ್ಲಿ ಗುರು ದೀಪ ಬೆಳಗಿಸಿಕೊಂಡಾಗ ಭಗವಂತನ ದರ್ಶನವಾಗುತ್ತದೆ. ತಿರುಪತಿ ಬಳಿಯ ಕಾಳಹಸ್ತಿಯಲ್ಲಿ ನಡೆದ ಗೋವು ಸಮ್ಮೇಳನ ನಡೆದ ಸಂದರ್ಭದಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಲಕ್ಷ ಸಹಿ ಮೂಲಕ ಕೇಂದ್ರ ಸರಕಾರ ಗಮನ ಸೆಳೆಯುವ ಕೆಲಸ ಮಾಡಲಾಗಿದೆ. ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.

ವೈಭವ ಕೆಮಿಕಲ್ಸ್‌ನ ಪಾಲುದಾರ ಎಚ್‌.ಎನ್‌. ನಂದಕುಮಾರ ಮಾತನಾಡಿ, ಅವಧೂತ ಪೀಠವು ಕಳೆದ ಆರು ದಶಕಗಳಿಂದ ನಮ್ಮ ವೇದ ಪರಂಪರೆ,ಸಂಸ್ಕೃತಿ, ಪುರಾತನ ವಿದ್ಯೆಗಳಿಗೆ ಹೊಳಪನ್ನು ನೀಡಿದೆ. ಹರಿದ್ವಾರದಿಂದ ಮೈಸೂರುವರೆಗೂ ಸಂಸ್ಥೆಯ ಕಾರ್ಯ ವಿಸ್ತರಿಸಿ ಅನೇಕ ಆಸಕ್ತರಿಗೆ ದೈನಂದಿನ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ಭಗವತ್‌ ಸಾಧನೆಯಲ್ಲಿ ನಡೆಯುವಂತಹ ಮೆಡಿಟೇಶನ್‌ ಮ್ಯೂಸಿಕ್‌ ಆವಿಷ್ಕರಿಸಿ ಪ್ರಪಂಚದಾದ್ಯಂತ ಪಸರಿಸಿದ ಕೀರ್ತಿ ಗುರುಗಳಿಗೆ ಸಲ್ಲುತ್ತದೆ ಎಂದರು.

Advertisement

ಪೂರ್ಣಚಂದ್ರ ಘಂಟಸಾಲಿ, ಶ್ರೀನಿವಾಸ ಘಂಟಸಾಲಿ, ಎ.ಸಿ. ಗೋಪಾಲ, ವಿನಾಯಕ ಆಕಳವಾಡಿ, ಭಾರತಿ ನಂದಕುಮಾರ, ಮೋಹನ ಸವಣೂರು, ಸುನೀಲ ಗುಮಾಸ್ತೆ, ಮನೋಹರ ಪರ್ವತಿ, ಅಶೋಕ ಹರಪನಹಳ್ಳಿ, ಶಾರದಾ ವಿಶ್ವನಾಥ ಇದ್ದರು. ಶೋಭಾ ಕಂಪ್ಲಿ ನಿರೂಪಿಸಿದರು. ನವೀನ ಭಟ್ಟ ಪೌರೋಹಿತ್ಯದಲ್ಲಿ ಗಣಹೋಮ ನೆರವೇರಿತು. ವಾಸವಿ ಮಹಿಳಾ ಮಂಡಳಿ, ವಾಸವಿ ಯುವತಿಯರ
ಸಂಘ, ವಾಸವಿ ಯೋಜನೆ ಸಂಘ, ನಗರೇಶ್ವರ ಟ್ರಸ್ಟ್‌ ಕಮಿಟಿ ಸೇರಿದಂತೆ ವಿವಿಧ ಭಜನಾ ಮಂಡಳಿಯವರು ಗಣಹೋಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next