Advertisement

ಮರ್ಯಾದೆಯಿಂದ ಬದುಕುವುದೇ ದೊಡ್ಡದು

11:39 AM Sep 02, 2019 | Team Udayavani |

ಕಲಬುರಗಿ: ಜೀವನದಲ್ಲಿ ಮರ್ಯಾದೆಯಿಂದ ಬದುಕಿದರೆ ಅದಕ್ಕಿಂತ ದೊಡ್ಡದು ಮತ್ತೂಂದಿಲ್ಲ. ಜೀವನದಲ್ಲಿ ಏನೆಲ್ಲ ಗಳಿಸಬಹುದು. ಎಲ್ಲ ಸ್ಥಾನಮಾನ ಪಡೆಯಬಹುದು. ಆದರೆ ಮರ್ಯಾದೆ ಇರದಿದ್ದರೆ ಅದಕ್ಕೆ ಅರ್ಥ ಬರುವುದಿಲ್ಲ. ಆಚಾರ-ವಿಚಾರ ಒಂದಿರಬೇಕು. ತಾವಂತೂ ತಾಯಿ ಪ್ರೀತಿ, ತಂದೆ ಆಸೆಯಂತೆ ಹಾಗೂ ಸಾಧಿಸಬೇಕೆಂಬ ಛಲದಿಂದ ಕೈಲಾದ ಮಟ್ಟಿಗೆ ಸೇವೆ ಸಲ್ಲಿಸಿದ್ದೇವೆ.

Advertisement

ಹೀಗೆಂದು ಹೇಳಿದವರು ಬಿಸಿಲು ನಾಡಿನ ಕಲಬುರಗಿ ನಗರದ ಬಡ ಕುಟುಂಬದಲ್ಲಿ ಜನಿಸಿ ಖ್ಯಾತ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ನಿರ್ದೇಶಕಿಯಾಗಿ ಸಾವಿರಾರು ರೋಗಿಗಳ ಸೇವೆ ಸಲ್ಲಿಸಿ, ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಕ್ಯಾನ್ಸರ್‌ ತಜ್ಞೆ ಡಾ| ವಿಜಯಲಕ್ಷ್ಮೀ ದೇಶಮಾನೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ‘ಮನದಾಳದ ಮಾತು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನುಭವಗಳನ್ನು ಹಂಚಿಕೊಂಡ ಅವರು, ಬಾಲ್ಯದಲ್ಲಿ ಬಡತನದ ನಡುವೆ ತಾಯಿ ತೋರಿದ ಪ್ರೀತಿ, ತಂದೆ ಆಸೆಗನುಗುಣವಾಗಿ ಛಲದಿಂದ ವೈದ್ಯಕೀಯ ಕೋರ್ಸ್‌ ಓದಿ, ಪ್ರಾಧ್ಯಾಪಕಳಾಗಿ, ಕಿದ್ವಾಯಿ ಆಸ್ಪತ್ರೆ ನಿರ್ದೇಶಕರಾಗಿ ಸಂಸಾರದ ಜಂಜಾಟದೊಳಗೆ ಬೀಳದೇ ಸಮಾಜಕ್ಕಾಗಿ ಅವಿರತವಾಗಿ ಶ್ರಮಿಸಲಾಗಿದೆ ಎಂದು ವಿವರಿಸಿದರು.

ಐದನೇ ತರಗತಿ ಇದ್ದಾಗಲೇ ತಂದೆ ‘ನೀನು ವೈದ್ಯನಾಗಬೇಕು’ ಎಂದಿದ್ದರು. ಅದರಂತೆ ಛಲ ರೂಪಿಸಿಕೊಂಡೆ. ಮನಸ್ಸು ಭಾರವಾದಾಗ ಭಗವದ್ಗೀತೆ ಓದುತ್ತಿದ್ದೆ. ಅದರಿಂದ ಏಳು, ಏದ್ದೇಳು ಎನ್ನುವಂತೆ ಪ್ರೇರೆಪಣೆ ದೊರೆಯುತ್ತಿತ್ತು. 12 ಗಂಟೆ ಸತತ ಕೆಲಸ ಮಾಡುತ್ತಾ ನಿಲ್ಲುತ್ತಿದ್ದೆ. ಇದು ಸ್ವತಃ ಅನುಭವಕ್ಕೆ ಬಂದಿದೆ ಎಂದು ಹೇಳಿದ ಅವರು ಪೂಜೆ ಮಾಡಬೇಕು. ಅದು ನಿಯಮ ಕಲಿಸುತ್ತದೆ ಎಂದರು.

ಸಹೋದರನ ಅಗಲುವಿಕೆ, 2005ರಲ್ಲಿ ಕ್ಯಾನ್ಸರ್‌ದಿಂದ ತಾಯಿ ಅಗಲಿರುವುದು ತನಗೆ 2016ರಲ್ಲಿ ಹೃದಯಾಘಾತಕ್ಕೆ ಒಳಗಾಗಿರುವುದು ಸ್ವಲ್ಪ ಮನಸ್ಸಿಗೆ ನೋವುಂಟು ಮಾಡಿದ ಪ್ರಸಂಗಗಳಾಗಿವೆ ಎಂದು ದುಃಖೀಸಿದ ಅವರು, ಕಾಯಿಪಲ್ಯೆ ಮಾರಿ ಬಂದ ಹಣದಿಂದ ಹಾಗೂ ವೈದ್ಯಕೀಯ ಕೋರ್ಸ್‌ನ ಶುಲ್ಕಕ್ಕಾಗಿ ಮಂಗಳಸೂತ್ರ ಅಡವಿಟ್ಟು ಕಷ್ಟದಿಂದ ವಿದ್ಯಾಭ್ಯಾಸ ಕೈಗೊಂಡಿರುವುದು ಈ ಎಲ್ಲ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಿತು. ಚಿಕ್ಕದಾದ ಮನೆಯಲ್ಲಿ ದೊಡ್ಡ-ದೊಡ್ಡ ಹಾವುಗಳು ಬರುತ್ತಿದ್ದವು. ಹೀಗಾಗಿ ತಮ್ಮ ಸಹೋದರಿಗೆ ನಾಗರತ್ನ ಎಂದು ಹೆಸರನ್ನಿಡಲಾಯಿತು. ನಂತರ ಹಾವುಗಳು ಬರುವುದು ಕಡಿಮೆಯಾಯಿತು ಎಂದು ತಿಳಿಸಿದರು.ಬೆಂಗಳೂರಿಗೆ ವೈದ್ಯಕೀಯ ಕೋರ್ಸ್‌ ಸಂದರ್ಶನಕ್ಕಾಗಿ 15 ಕಿ.ಮೀ ನಡೆದುಕೊಂಡೇ ಹೋಗಿದ್ದೆ. ತಮ್ಮನ್ನು ಹಳ್ಳಿಯವಳೆಂದೇ ಕೆಲವರು ಹೀಯಾಳಿಸುತ್ತಿದ್ದರು. ಆದರೆ ಛಲದಿಂದ ಅವರಿಗಿಂತ ಮುಂದೆ ಹೋದೆ. ಕಿದ್ವಾಯಿ ಆಸ್ಪತ್ರೆ ನಿರ್ದೇಶಕರಾಗಿದ್ದಾಗಲೂ ರೋಗಿಗಳಿಗೆ ಬೆಡ್‌ ನೀಡಲು ತಾವೇ ಕೆಲವೊಮ್ಮೆ ಕೌಂಟರ್‌ ಬಳಿ ತೆರಳುತ್ತಿದ್ದೆವು. ಇದನ್ನೆಲ್ಲ ಗಟ್ಟಿ ನೆಲದ ಕಲಬುರಗಿ ಭೂಮಿ ಕಲಿಸಿತು. ಇದಕ್ಕೆಲ್ಲ ಈ ಭಾಗದ ನಾಯಕರೆಲ್ಲರೂ ಬೆನ್ನು ಚಪ್ಪರಿಸಿ ಪ್ರೋತ್ಸಾಹಿಸಿದರೆಂದು ಮಾಜಿ ಸಿಎಂಗಳಾದ ವಿರೇಂದ್ರ ಪಾಟೀಲ, ಧರ್ಮಸಿಂಗ್‌ ಹಾಗೂ ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರರ ಹೆಸರುಗಳನ್ನು ಸ್ಮರಿಸಿಕೊಂಡರು.

Advertisement

ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಾಗ ಗಂಗಾಂಬಿಕಾ ನಿಷ್ಠಿ ಅವರು ಶರಣ ಸಂಸ್ಥಾನದಲ್ಲಿ ತಮ್ಮ ಜತೆ ಇಟ್ಟುಕೊಂಡು ಸಹಾಯ ಮಾಡಿದರು. ಹಿಟ್ಟಿನ ಗಿರಣಿ ಹಾಕಲು ಶರಣ ಸಂಸ್ಥಾನವೇ ಸಹಾಯ ಮಾಡಿತು ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಬಡತನದ ನಡುವೆ ವೈದ್ಯಕೀಯ ಪದವಿ ಪಡೆದು ಸಮಾಜ ಸೇವೆಗೆಂದು ಸಂಸಾರಿಯಾಗದೇ ವೈದ್ಯೆ, ಸನ್ಯಾಸಿನಿಯಾಗಿ ದೊಡ್ಡ ಕೊಡುಗೆ ನೀಡಿದ್ದಾರೆ. ಅದರಲ್ಲೂ ನಮ್ಮ ಭಾಗಕ್ಕೆ ಕೀರ್ತಿ ತಂದಿದ್ದಾರೆ ಎಂದರು.

ಶಾಸಕ ಎಂ.ವೈ. ಪಾಟೀಲ, ಡಾ| ವಿಜಯ ಲಕ್ಷಿ ್ಮೕ ದೇಶಮಾನೆ ಅವರ ತಂದೆ ಬಾಬುರಾವ್‌ ದೇಶಮಾನೆ, ಸಹೋದರಿ ನಾಗರತ್ನ ದೇಶಮಾನೆ, ಹಿರಿಯ ಸಾಹಿತಿಗಳಾದ ಪ್ರೊ| ವಸಂತ ಕುಷ್ಟಗಿ, ಭೀಮರಾವ್‌ ಅರಕೇರಿ, ನರಸಿಂಗ್‌ ಹೇಮನೂರು, ಶಿವಶರಣಪ್ಪ ಸೀರಿ, ಹಿರಿಯ ಪತ್ರಕರ್ತ ಶ್ರೀನಿವಾಸ ಸಿರಸನೂರಕರ್‌ ಹಾಗೂ ಮುಂತಾದವರು ಇದ್ದರು.

‘ತರಂಗ’ ಹೆಸರನ್ನು ರಾಜ್ಯವ್ಯಾಪಿಗೊಳಿಸಿತು:

ವೈದ್ಯೆ ಪದವಿ ಪಡೆದ ನಂತರ ದಿನಗಳಲ್ಲಿ ಹಿರಿಯ ಪತ್ರಕರ್ತ ಡಾ| ಶ್ರೀನಿವಾಸ ಸಿರನೂರಕರ್‌ ಅವರು ಪತ್ರಿಕೆಯಲ್ಲಿ ಬರೆದ ಲೇಖನ ಸಂಚಲನ ಮೂಡಿಸಿದ್ದರೆ, ‘ತರಂಗ’ದಲ್ಲಿ ತಮ್ಮ ಬಾಲ್ಯ, ಕುಟುಂಬ, ಪಡೆದ ಶಿಕ್ಷಣ ಕುರಿತು ಪ್ರಕಟಗೊಂಡ ವಿಶೇಷ ಲೇಖನ ತಮ್ಮ ಹೆಸರನ್ನು ರಾಜ್ಯವ್ಯಾಪಿಗೊಳಿಸಿತು. ತಾವು ಕಲಿತ ವೈದ್ಯಕೀಯ ಕಾಲೇಜಲ್ಲದೇ ವಿವಿ ಸೇರಿದಂತೆ ಇತರೆಡೆ ಘಟಿಕೋತ್ಸವ ಭಾಷಣ ಮಾಡಿದೆ. ಒಟ್ಟಾರೆ ಈ ಭಾಗದ ಸಮಾಜ, ಮಾಧ್ಯಮ ಕ್ಷೇತ್ರ ತಮ್ಮ ಸೇವೆ ಗುರುತಿಸಿ ಪ್ರೋತ್ಸಾಹಿಸಿದೆ ಎಂದು ಡಾ| ದೇಶಮಾನೆ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next