Advertisement

ವಾಸಿಸುವುದುಒಂದು ವಾರ್ಡ್‌ನಲ್ಲಿ;ಮತದಾನ ಪಟ್ಟಿಇನ್ನೊಂದು ವಾರ್ಡ್‌ನಲ್ಲಿ

03:46 PM Sep 01, 2018 | Team Udayavani |

ಬಾಗಲಕೋಟೆ: ನಾವು ವಾಸಿಸುವುದು ಒಂದು ವಾರ್ಡ್‌ ನಲ್ಲಿ. ನಮ್ಮ ಹೆಸರು ಇರುವುದು ಇನ್ನೊಂದು ವಾರ್ಡ್‌ನ ಮತದಾರರ ಪಟ್ಟಿಯಲ್ಲಿ. ಈ ಬಾರಿ ಹಿಂಗ್ಯಾಕ್‌ ಮಾಡ್ಯಾರ್‌…! ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ ಮತದಾನ ಮಾಡಲು ಬಂದಿದ್ದ ಬಹುತೇಕರು ಈ ರೀತಿ ಕೇಳುತ್ತಿದ್ದ ಪ್ರಸಂಗ, ಮತದಾನ ಕೇಂದ್ರಗಳ ಹೊರಗೆ ನಡೆಯುತ್ತಿತ್ತು.

Advertisement

ಮನೆ ಇಲ್ಲಿ; ಓಟ್‌ ಅಲ್ಲಿ: ಕಳೆದ ಬಾರಿ 31 ವಾರ್ಡ್‌ಗಳಿದ್ದ ಬಾಗಲಕೋಟೆ ನಗರಸಭೆಯಲ್ಲಿ ಈ ಬಾರಿ ಪುನರ್‌ವಿಂಡಗಣೆ ಬಳಿಕ 35 ವಾರ್ಡ್‌ಗಳ ರಚನೆ ಮಾಡಲಾಗಿದೆ. ಅಲ್ಲದೇ ಮೊದಲಿದ್ದ ಕ್ರಮ ಸಂಖ್ಯೆ ವಾರ್ಡ್‌ಗಳು, ಈ ಬಾರಿ ಸಂಪೂರ್ಣ ಬದಲಾಗಿವೆ. ಮೊದಲು ವಾರ್ಡ್‌ ನಂ.1 ಇದ್ದರೆ, ಈಗ ಅದು ವಾರ್ಡ್‌ ನಂ.19 ಆಗಿದೆ. ಇನ್ನು ಕಳೆದ ಬಾರಿ ವಾರ್ಡ್‌ ನಂ.10 ಇದ್ದ ಬಡಾವಣೆ, ಈಗ ವಾರ್ಡ್‌ ನಂ. 18 ಆಗಿದೆ. ವಾರ್ಡ್‌ಗಳ ಸಂಖ್ಯೆ ಬದಲಾಗಿದ್ದಷ್ಟೇ ಅಲ್ಲ, ಹಲವು ಮತದಾರರೂ ಬೇರೆ ಬೇರೆ ವಾರ್ಡ್‌ಗೆ ಹಂಚಿಕೆಯಾಗಿದ್ದಾರೆ. ಹೀಗಾಗಿ ಮತದಾನ ಮಾಡಲು ಮತದಾರ ಪ್ರಭುಗಳು ಪರದಾಡುವಂತಾಯಿತು.

ನಗರದ ವಾರ್ಡ್‌ ನಂ. 18, ಈ ಹಿಂದೆ 10ನೇ ವಾರ್ಡ್‌ ಆಗಿತ್ತು. ಆದರೆ, ಈ ವಾರ್ಡ್‌ನಲ್ಲಿ ಇರುವ ಸುಮಾರು 55ಕ್ಕೂ ಹೆಚ್ಚು ಮತದಾರರನ್ನು ವಾರ್ಡ್‌ ನಂ.17ರ ಮತದಾರರ ಪಟ್ಟಿಗೆ ವಿಂಗಡಿಸಲಾಗಿದೆ. ಹೀಗಾಗಿ 18ನೇ ವಾರ್ಡ್‌ನ ಮತಗಟ್ಟೆ ಹೋಗಿ, ತಮ್ಮ ಹೆಸರು ಅಲ್ಲಿರದೇ ಇರುವುದನ್ನು ಕಂಡು ಮರಳಿ ಹೋದರು. ಮಧ್ಯಾಹ್ನದ ಬಳಿಕ ಅವರ ಹೆಸರು ಯಾವ ವಾರ್ಡ್‌ನಲ್ಲಿದೆ ಎಂಬುದನ್ನು ಕೆಲವರು ಪತ್ತೆಮಾಡಿ, ಭಾಗ ಸಂಖ್ಯೆ, ಅನುಕ್ರಮ ಸಂಖ್ಯೆಯ ಚೀಟಿ ಒದಗಿಸಿದರು. ಆಗ ಬೇರೆ ವಾರ್ಡ್‌ನ ಮತಗಟ್ಟೆಗೆ ಮತದಾನ ಮಾಡಿ ಮರಳಿದರು.

96 ಜನ ಭವಿಷ್ಯ ನಿರ್ಧಾರ: ಬಾಗಲಕೋಟೆ ನಗರಸಭೆಯ ಒಟ್ಟು 35 ವಾರ್ಡ್‌ಗಳಲ್ಲಿ 2ನೇ ವಾರ್ಡ್‌ ಗೆ ಅವಿರೋಧ ಆಯ್ಕೆ ನಡೆದಿದ್ದು, 34 ವಾರ್ಡ್‌ಗಳಿಗೆ ಶುಕ್ರವಾರ ಮತದಾನ ನಡೆಯಿತು. 34 ವಾರ್ಡ್‌ಗಳಿಗೆ ಕಾಂಗ್ರೆಸ್‌ನಿಂದ 34, ಬಿಜೆಪಿಯಿಂದ 34, ಜೆಡಿಎಸ್‌ ನಿಂದ 13, ಪ್ರಜಾ ಪರಿವರ್ತನಾ ಪಾರ್ಟಿಯಿಂದ 2, ಎಐಎಂಐಎಂನಿಂದ 1 ಹಾಗೂ 11 ಜನ ಪಕ್ಷೇತರರು ಕಣದಲ್ಲಿದ್ದರು. ನಗರ, ನವನಗರ ಹಾಗೂ ವಿದ್ಯಾಗಿರಿ ಒಳಗೊಂಡು ಒಟ್ಟು 99,891 ಮತದಾರರಿದ್ದು, ಅದರಲ್ಲಿ ಮಧ್ಯಾಹ್ನ 3ರ ಹೊತ್ತಿಗೆ ಒಟ್ಟು ಶೇ.41.13 ಮತದಾನವಾಗಿತ್ತು.

ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ನಗರದ ವಾರ್ಡ್‌ ನಂ. 16ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು, ಕೈ ಕೈ ಮಿಸಲಾಯಿಸುವ ಹಂತಕ್ಕೂ ಹೋಗಿತ್ತು. ಮತಗಟ್ಟೆ ಎದುರು ಬಿಜೆಪಿ ಕಾರ್ಯಕರ್ತ ಶಿವು ವಡ್ಡರ ಮೇಲೆ ಕಾಂಗ್ರೆಸ್‌ನ ಪರಶುರಾಮ ಮತ್ತು ವಿಠuಲ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ವಿಷಯ ತಿಳಿದು ಬಾಗಲಕೋಟೆ ಶಾಸಕ ಡಾ| ವೀರಣ್ಣ ಚರಂತಿಮಠ ಸ್ಥಳಕ್ಕೆ ಆಗಮಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು, ಶಾಂತತೆ ಕಾಪಾಡಲು ಮನವಿ ಮಾಡಿದರು. ಕೆಲವರು ಪೊಲೀಸರೊಂದಿಗೂ ವಾಗ್ವಾದ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next