ಬೇತಮಂಗಲ: ಪ್ರತಿಯೊಬ್ಬರು ಸ್ವಂತ ಸೂರು ಒಂದಬೇಕು, ಯಾರೂ ಕುಡಿಸಲಿನಲ್ಲಿ ವಾಸ ಮಾಡಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಮೂಲಕ ವಸತಿ ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತಿದೆ. ಆದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೋ ಏನೋ ಹಲವು ಬಡ ಕುಟುಂಬಗಳು ಇನ್ನೂ ಗುಡಿಸಲಿನಲ್ಲೇ ವಾಸಿಸುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.
ಗ್ರಾಮ ಸಮೀಪದ ಹುಲ್ಕೂರು ಗ್ರಾಪಂ ವ್ಯಾಪ್ತಿಗೆ ಒಳಪಡುವ ಕೋಡಿಹಳ್ಳಿ ಗ್ರಾಮದಿಂದ 100 ಮೀಟರ್ ದೂರದಲ್ಲಿ 15 ವರ್ಷಗಳಿಂದ 10 ಕುಟುಂಬಗಳು ಮನೆ ನಿರ್ಮಿಸಿಕೊಳ್ಳಲು ಸ್ವಂತ ನಿವೇಶನ ಮತ್ತು ಹಣವಿಲ್ಲದೆ ಗುಡಿಸಿಲಿನಲ್ಲೇ ವಾಸ ಮಾಡುತ್ತಿವೆ. ಆದರೂ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ವಲಸೆ ಬಂದಿದ್ದರು: ಗುಡಿಸಲಿನಲ್ಲಿ ವಾಸ ಮಾಡುತ್ತಿರುವ ಕುಟುಂಬಗಳು, 15 ವರ್ಷಗಳ ಹಿಂದೆ ಉದ್ಯೋಗವನ್ನರಿಸಿ ಉತ್ತರ ಪ್ರದೇಶದಿಂದ ಇಲ್ಲಿಗೆ ವಲಸೆ ಬಂದು, ಒಂದೇ ಸ್ಥಳದಲ್ಲೇ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿವೆ. ಅಂದು ಕೇವಲ 10 ಮಂದಿ ವಲಸೆ ಬಂದಿದ್ದು, ಇದೀಗ 50ಕ್ಕೆ ಏರಿಕೆಯಾಗಿದೆ. ವಿಭಜನೆಯಾಗಿ 10 ಕುಟುಂಬಗಳು ಜೀವನ ನಡೆಸುತ್ತಿದ್ದಾರೆ.
ಮಕ್ಕಳಿಗಾಗಿ ಸ್ವಂತ ಸೂರು ಬೇಕು: ಉತ್ತರ ಪ್ರದೇಶದಿಂದ ಉದ್ಯೋಗ ಅರಿಸಿ ಬಂದಾಗ ಬೇತಮಂಗಲ ನಿವಾಸಿಯೊಬ್ಬರು ತಮ್ಮ ಸ್ವಂತ ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಳ್ಳಲು ಸ್ಥಳಾವಕಾಶ ಕಲ್ಪಿಸಿದ್ದರು. ಇದುವರೆಗೂ ಅಲ್ಲೇ ಇದ್ದಾರೆ. 25 ಮಕ್ಕಳು ಗ್ರಾಮ ಹಾಗೂ ಬೇತಮಂಗಲ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಭವಿಷ್ಯಕ್ಕಾಗಿ ನಮಗೆ ಶಾಶ್ವತ ಮನೆ ಅವಶ್ಯಕವಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇಲ್ಲಿ ವಾಸ ಮಾಡುತ್ತಿರುವ ಪ್ರತಿಯೊಬ್ಬ ಪ್ರಜೆ, ಮಗುವಿಗೂ ನಮ್ಮ ರಾಜ್ಯದ ಸೌಲಭ್ಯಗಳು ದೊರೆಯುತ್ತಿವೆ. ಆದರೂ ಶಾಶ್ವತ ಪರಿಹಾರ ಮಾತ್ರ ದೊರೆಯುತ್ತಿಲ್ಲವೆಂಬ ಕೊರಗು ಇವರಲ್ಲಿ ಕಾಡುತ್ತಿದೆ. ಆಧಾರ್, ಪಡಿತರ ಚೀಟಿ, ಮತದಾನದ ಗುರುತಿನ ಚೀಟಿ ಸೇರಿ ಎಲ್ಲಾ ದಾಖಲೆಗಳನ್ನು ಹೊಂದಿದ್ದಾರೆ. ಪ್ರತಿ ತಿಂಗಳು ಪಡಿತರ ಹಾಗೂ ಇತರೆ ಸೌಲಭ್ಯವೂ ದೊರಕುತ್ತಿದೆ. ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದ್ದು, ವಿದ್ಯುತ್ ಬಿಲ್ ಸಹ ಪಾವತಿ ಮಾಡುತ್ತಿದ್ದಾರೆ. ಕೇವಲ ಚುನಾವಣೆ ದಿನಗಳಲ್ಲಿ ಜನಪ್ರತಿನಿಧಿಗಳು ಬಂದು ನಮಗೆ ಮತ ನೀಡಿ, ಮನೆ ನಿರ್ಮಿಸುವ ಜವಾಬ್ದಾರಿ ನಮ್ಮದೆಂದು ಹೇಳಿ ಹೋದವರು ಮತ್ತೆ ಇತ್ತ ತಿರುಗಿಯೂ ನೋಡಲ್ಲ ಎಂದು ಗುಡಿಸಲು ನಿವಾಸಿ ಅವಲ್ದಾರ್ ಹೇಳಿದರು.
ಸರ್ಕಾರದ ಗೋಮಾಳ ಮತ್ತು ಇತರೆ ಭೂಮಿಯಲ್ಲಿ ನಮಗೆ ಮನೆ ನಿರ್ಮಿಸಿಕೊಳ್ಳುವಷ್ಟು ಸ್ಥಳಾವಕಾಶ ಕೊಟ್ಟು, ಸರ್ಕಾರದಿಂದ ಆಶ್ರಯ ಯೋಜನೆ ಅಡಿ ಮನೆ ನಿರ್ಮಿಸಿಕೊಟ್ಟರೆ ನಮ್ಮ ಬದುಕು ಹಸನಾಗುತ್ತದೆ ಎಂದು ಮತ್ತೂಬ್ಬ ನಿವಾಸಿ ನಾಜೀಮ್ ಹೇಳುತ್ತಾರೆ.
ಕೂಲಿ ಮಾಡಿದರೆ ಮಾತ್ರ ಜೀವನ: ಪ್ರತಿದಿನ ರೈತರ ತೋಟ, ವೇ ಬ್ರೀಡ್ಜ್, ಇತರೆ ಕ್ಷೇತ್ರದಲ್ಲಿ ದಿನಗೂಲಿ ಮಾಡಿ ಜೀವನ ನಡೆಸುತ್ತಿದ್ದು, ಅಂದಿನ ಜೀವನಕ್ಕೂ ಸಂಪಾದನೆ ಸಾಕಾಗುತ್ತಿಲ್ಲ. ಮಕ್ಕಳಿಗೆ ಮದುವೆ, ಸ್ವಂತ ಮನೆಗೆ ನಿವೇಶನ, ಮನೆ ನಿರ್ಮಾಣಕ್ಕೆ ಹಣ ಎಲ್ಲಿಂದ ಬರುತ್ತದೆ ಎಂದು ಸಿತ್ತಾರ್ ತಿಳಿಸಿದರು.
ಗುಡಿಸಲು ನಿವಾಸಿಗಳಾದ ಇವರ ಮನೆಯ ಕೊಳಚೆ ನೀರು ಹರಿಯಲು ಚರಂಡಿ ವ್ಯವಸ್ಥೆಯಿಲ್ಲ, ಗ್ರಾಪಂನಿಂದ ಕೇವಲ ಶೌಚಾಲಯ ನಿರ್ಮಿಸಿ ಕೊಡಲಾಗಿದೆ. ಈ ಬಗ್ಗೆ ಈ 10 ಕುಟುಂಬಗಳ ನಿವಾಸಿಗಳು 2-3 ಬಾರಿ ಶಾಸಕಿ ರೂಪಕಲಾಗೆ ಮನವಿ ಮಾಡಿದ್ದರೂ ಕೇವಲ ಭೇಟಿ ನೀಡಿ ಮನೆ ನಿರ್ಮಾಣಕ್ಕೆ ನಿವೇಶನ ಒದಗಿಸುವ ಭರವಸೆ ಕೊಟ್ಟರೂ ಇದುವರೆಗೂ ಈಡೇರಿಲ್ಲ ಎಂದು ಇಫ್ತಾರ್, ಚಾನ್ ದೂರಿದ್ದಾರೆ.
● ಆರ್.ಪುರುಷೋತ್ತಮ್ ರೆಡ್ಡಿ