Advertisement

ಶೌಚಾಲಯದಲ್ಲೇ ಬಿಹಾರ ಮೂಲದ ಕುಟುಂಬದ ವಾಸ!

11:21 AM Aug 26, 2018 | |

ಬೆಳ್ತಂಗಡಿ: ಇಲ್ಲೊಂದು ಕುಟುಂಬ ಸಾರ್ವಜನಿಕ ಶೌಚಾಲಯದಲ್ಲೇ ಅಡುಗೆ ಮಾಡಿ, ಅಲ್ಲೇ ಊಟ ಮಾಡುತ್ತಿದೆ. ಒಟ್ಟಿನಲ್ಲಿ ಶೌಚಾಲಯವೇ ಅವರ ವಾಸದ ಮನೆಯಾಗಿದೆ. ಬೆಳ್ತಂಗಡಿ ನಗರ ಪಂ. ವ್ಯಾಪ್ತಿಯ ಸಂತೆಕಟ್ಟೆಯ ಸಾರ್ವಜನಿಕ ಶೌಚಾಲಯದಲ್ಲಿ ಶುಲ್ಕ ಸಂಗ್ರಹ ಹಾಗೂ ಶುಚಿತ್ವದ ಕರ್ತವ್ಯ ನಿರ್ವಹಿಸುವ ಬಿಹಾರ ಮೂಲದ ಕುಟುಂಬ ಕಳೆದ 2 ವರ್ಷಗಳಿಂದ ಅಲ್ಲೇ ವಾಸ ಮಾಡುತ್ತಿದೆ. ಶೌಚಾಲಯಕ್ಕೆ ತೆರಳುವವರು ನೀಡುವ ಹಣ, ಕೊಂಚ ನ.ಪಂ.ನಿಂದ ಹಣ ನೀಡಲಾಗುತ್ತಿದ್ದು, ಅದೇ ಈ ಕುಟುಂಬಕ್ಕೆ ಜೀವನಾಧಾರವಾಗಿದೆ.

Advertisement

ಬಿಹಾರದ ಮಧುವನ್‌ ಗ್ರಾಮದ ನಿವಾಸಿ ಬೋಲಾ ಮೆಹ್ತಾ, ಪತ್ನಿ ರಾಧಾದೇವಿ ಹಾಗೂ 7ರ ಹರೆಯದ ಪುತ್ರಿ ನೀಹಾ ಶೌಚಾಲಯದ ಒಳಗಡೆ ಇರುವ ಒಂದು ಸಣ್ಣ ಕೊಠಡಿಯಲ್ಲಿ ವಾಸ ಮಾಡುತ್ತಿದ್ದಾರೆ. ನಿದ್ದೆ, ಅಡುಗೆ ಎಲ್ಲವೂ ಅದೇ ಸಣ್ಣ ಕೊಠಡಿಯಲ್ಲಿ ಮಾಡಬೇಕಿದೆ. ಈ ಕುರಿತು ಬೋಲಾ ಮೆಹ್ತಾ ನ.ಪಂ. ಅಧ್ಯಕ್ಷರು, ಅಧಿಕಾರಿಗಳಿಗೆ ದೂರು ನೀಡಿದರೂ ಇನ್ನೂ ಈ ಕುಟುಂಬಕ್ಕೆ ಮನೆಯ ವ್ಯವಸ್ಥೆಯಾಗಿಲ್ಲ.

ಏಲಂ ಕೂಡಾ ಮಾಡಿಲ್ಲ
ನಗರ ಭಾಗಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಶುಲ್ಕ ಸಂಗ್ರಹ ಮಾಡುವುದು ಸಾಮಾನ್ಯ. ಆದರೆ ಇಲ್ಲಿ ಶುಲ್ಕ ಸಂಗ್ರಹಿಸುವ ಕುಟುಂಬಕ್ಕೂ ಒಂದು ವ್ಯವಸ್ಥೆ ಮಾಡಬೇಕಾಗುತ್ತದೆ. ಆದರೆ ಇದ್ಯಾವುದನ್ನೂ ಮಾಡದ ನ.ಪಂ. ಶೌಚಾಲಯ ತೆರೆದು ಸುಮ್ಮನೆ ಕುಳಿತಿದೆ. ಹೀಗಾಗಿ ಅಲ್ಲಿ ಶುಲ್ಕ ಸಂಗ್ರಹಿಸುವವರಿಗೆ ಅದೇ ಶೌಚಾಲಯ ಮನೆಯಂತಾಗಿದೆ.

ಹಾಲಿ-ಮಾಜಿಗಳ ಸಮಾಗಮ
ಸಂತೆಕಟ್ಟೆ ಶೌಚಾಲಯದ ಸ್ಥಳಕ್ಕೆ ಏಕಕಾಲದಲ್ಲಿ ಹಾಲಿ ಶಾಸಕ ಹರೀಶ್‌ ಪೂಂಜ ಹಾಗೂ ಮಾಜಿ ಶಾಸಕ ವಸಂತ ಬಂಗೇರ ಆಗಮಿಸಿದರು. ಶೌಚಾಲಯವನ್ನು ನೋಡಿಕೊಳ್ಳುವ ವ್ಯಕ್ತಿಯನ್ನು ಅಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟದ್ದಕ್ಕೆ ನ.ಪಂ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅವರು ಇಲ್ಲಿ ವಾಸಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಪರ್ಯಾಸ ಎಂದು ಮಾಜಿ ಶಾಸಕರು ತಿಳಿಸಿದರು.

ಅವರಿಗೆ ತತ್‌ಕ್ಷಣ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ಜತೆಗೆ ಮುಂದಿನ ದಿನಗಳಲ್ಲಿ ಎಲ್ಲಿ ಅವಕಾಶ ನೀಡಬೇಕು ಎಂಬುದರ ಕುರಿತು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಮಾರುಕಟ್ಟೆಯಲ್ಲಿ ನೀರು ಹರಿಯುವುದಕ್ಕೂ ವ್ಯವಸ್ಥೆ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ತಿಳಿಸಿದರು. ನ.ಪಂ. ಮುಖ್ಯಾಧಿಕಾರಿ ಸುಧಾಕರ್‌, ಎಂಜಿನಿಯರ್‌ ಜತೆಗಿದ್ದರು.

Advertisement

ಪರ್ಯಾಯ ವ್ಯವಸ್ಥೆಗೆ ಕ್ರಮ
ಅವರು ಶೌಚಾಲಯದಲ್ಲೇ ವಾಸಿಸುತ್ತಿದ್ದಾರೆ ಎಂಬ ವಿಚಾರ ಇತ್ತೀಚೆಗಷ್ಟೇ ನನ್ನ ಗಮನಕ್ಕೆ ಬಂದಿದೆ. ಅವರಿಗೆ ಪಂ. ವೇತನ ನೀಡುತ್ತಿದೆಯಾದರೂ ಅವರು ನಮ್ಮ ಸಿಬಂದಿಗಳಲ್ಲ. ಹೀಗಾಗಿ ಅವರ ವಾಸ್ತವ್ಯದ ಕುರಿತು ಗಮನ ಹರಿಸಿಲ್ಲ. ಪ್ರಸ್ತುತ ಅವರಿಗೆ ವಾಸಕ್ಕೆ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತದೆ.
– ಸುಧಾಕರ್‌
ಮುಖ್ಯಾಧಿಕಾರಿ, ನ.ಪಂ

Advertisement

Udayavani is now on Telegram. Click here to join our channel and stay updated with the latest news.

Next