Advertisement

ಜಿಲ್ಲೆಯಲ್ಲಿ ಜಾನುವಾರು ಸಮೀಕ್ಷೆ ಶೇ. 97.99 ಪೂರ್ಣ

10:17 PM Jan 08, 2021 | Team Udayavani |

ಬೆಳ್ತಂಗಡಿ, ಜ.  8: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರದ ಬೆನ್ನಲ್ಲೇ ಜಾನುವಾರು ರೋಗಗಳ ನಿಯಂತ್ರಣ ಯೋಜನೆ ಯಡಿ ರಾಜ್ಯದ ಎಲ್ಲ 33 ವಿಜ್ಞಾನ ಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದ ಸಮೀಕ್ಷೆ ಯಶಸ್ವಿಯಾಗಿದೆ.

Advertisement

2025ಕ್ಕೆ ಕಾಲುಬಾಯಿ ರೋಗವನ್ನು ಲಸಿಕೆ ಹಾಕುವ ಮೂಲಕ ನಿಯಂತ್ರಿಸಿ 2030ಕ್ಕೆ ರೋಗ ಸಂಪೂರ್ಣ ನಿರ್ಮೂಲನೆಗೊಳಿಸುವ ಸಲುವಾಗಿ ಕೇಂದ್ರ ಸರಕಾರ ಯೋಜನೆಗೆ ಚಾಲನೆ ನೀಡಿತ್ತು. ಹೀಗಾಗಿ ವರ್ಷಕ್ಕೆ ಎರಡು ಬಾರಿ ವ್ಯಾಕ್ಸಿನೇಶನ್‌ ಹಮ್ಮಿಕೊಳ್ಳುತ್ತ ಬಂದಿದೆ. 2020, ಸೆ. 11ರಂದು ರಾಜ್ಯದಲ್ಲಿ ಯೋಜನೆ ಆರಂಭಗೊಂಡಿದ್ದು, ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಂಡಿದೆ.

ದ.ಕ. ಜಿಲ್ಲೆಯಲ್ಲಿ 2,49,944 ಲಕ್ಷ ರಾಸುಗಳ ಸಮೀಕ್ಷೆ ಗುರಿ ಹೊಂದಲಾಗಿತ್ತು. ಈ ಪೈಕಿ 2,31,075 ರಾಸುಗಳಿಗೆ ವ್ಯಾಕ್ಸಿನೇಶನ್‌ ನಡೆಸಿ ಶೇ. 92.45 ಗುರಿ ಸಾಧಿಸಲಾಗಿದೆ. ಅದೇ ರೀತಿ ಜಾನುವಾರುಗಳ ಪೂರ್ಣ ವಿವರ ನೀಡುವ ತಂತ್ರಾಂಶವಾದ ಯು.ಐ.ಡಿ. (Unique Identification Tags ) ಟ್ಯಾಗ್‌ ಅಳವಡಿಸುವ ಕಾರ್ಯವೂ ಶೇ.97.99 ಯಶಸ್ವಿಯಾಗಿದ್ದು ಜಿಲ್ಲೆಯಲ್ಲಿ 2,44,918 ಲಕ್ಷ ಜಾನುವಾರುಗಳಿಗೆ ಟ್ಯಾಗ್‌ ಅಳವಡಿಸಲಾಗಿದೆ.

ವರ್ಷದಲ್ಲಿ ಎರಡು ಬಾರಿ ಲಸಿಕೆ :

ಎಂಟು ವರ್ಷಗಳಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಯೋಜನೆಯಡಿ ವರ್ಷದಲ್ಲಿ 2 ಬಾರಿ(ಆರು ತಿಂಗಳಿಗೊಮ್ಮೆ ಲಸಿಕೆ ನೀಡುತ್ತಾ ಬರಲಾಗಿದೆ. ಪ್ರತೀ 5 ವರ್ಷಕ್ಕೊಮ್ಮೆ ನಡೆಸ ಲಾಗುವ ಜಾನುವಾರು ಗಣತಿ ಆಧಾರದಲ್ಲಿ ಕುರಿ ಮೇಕೆ ಹೊರತುಪಡಿಸಿ ದನ, ಹಂದಿ, ಎಮ್ಮೆ (ಸೀಳು ಗೊರಸಿನ)3 ತಿಂಗಳಿಂದ ಮೇಲ್ಪಟ್ಟ ಜಾನು ವಾರುಗಳಿಗೆ ಚುಚ್ಚುಮದ್ದು ಕಡ್ಡಾಯ.

Advertisement

5 ತಂಡಗಳ ರಚನೆ :

ತಾಲೂಕು ಪಶುಸಂಗೋಪನ ಇಲಾಖೆ, ದ.ಕ. ಹಾಲು ಒಕ್ಕೂಟ ನಿಯಮಿತ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆದಿದೆ. ಜಿಲ್ಲೆಯ 300ಕ್ಕೂ ಅಧಿಕ ಇಲಾಖೆ ಸಿಬಂದಿ, ಕೃತಕ ಗರ್ಭಧಾರಣೆ ಕಾರ್ಯ ಕರ್ತರ ಸಹಕಾರದಿಂದ ವ್ಯಾಕ್ಸಿನೇಶನ್‌ ಹಾಗೂ ಕಿವಿಯೋಲೆ ಅಳವಡಿಸುವ ಯಶಸ್ವಿಯಾಗಿದೆ.

ಗೋ ಕಳವು ತಡೆಗೆ ಸಹಕಾರಿ :

ಕರಾವಳಿ ಭಾಗದಲ್ಲಿ ಗೋ ಕಳವು ಹಾಗೂ ಗೋಹತ್ಯೆ ಪ್ರಕರಣಗಳು ಹೆಚ್ಚು ಸಂಭವಿಸುತ್ತಿರುವುದರಿಂದ ಜಾನುವಾರುಗಳ ಗುರುತು ಪತ್ತೆಗೆ ಯುಐಡಿ ಟ್ಯಾಗ್‌ ಸಹಾಯಕವಾಗಲಿದೆ. ಐಎನ್‌ಎಎಚ್‌ (ಇನ್ಫಾರ್ಮೇಶನ್‌ ನೆಟ್‌ವರ್ಕ್‌ ಫಾರ್‌ ಅನಿಮಲ್‌ ಪ್ರೊಡಕ್ಟಿವಿಟಿ ಆ್ಯಂಡ್‌ ಹೆಲ್ತ್‌) ಜಾನುವಾರು ತಳಿ, ಅಭಿವೃದ್ಧಿ ಹಾಗೂ ಜಾನುವಾರು ಆರೋಗ್ಯದ ಪೂರ್ಣ ವಿವರಗಳನ್ನು ನೀಡುವ ಒಂದು ತಂತ್ರಾಂಶ. ಇದನ್ನು ನ್ಯಾಷನಲ್‌ ಡೈರಿ ಡೆವಲಪ್‌ಮೆಂಟ್‌ ಬೋರ್ಡ್‌

(ಎನ್‌ಡಿಡಿಬಿ)ಅಭಿವೃದ್ಧಿಪಡಿಸಿದೆ. ಇದರಲ್ಲಿ ಜಾನುವಾರುಗಳ ನೋಂದಣಿ, ಜಾನುವಾರು ಮತ್ತು ಮಾಲಕರ ಪೂರ್ಣ ವಿವರ, ಆರೋಗ್ಯ, ಹಾಲಿನ ಉತ್ಪಾದನೆ ಮಾಹಿತಿ ಲಭ್ಯವಾಗುತ್ತದೆ. ಜಾನುವಾರು ಸಾಗಾಟಕ್ಕೂ ಟ್ಯಾಗ್‌ ಕಡ್ಡಾಯ. ಯುಐಡಿ ಟ್ಯಾಗ್‌ 12 ಸಂಖ್ಯೆಗಳನ್ನು ಹೊಂದಿರುವ ಕಿವಿಯೋಲೆಯಾಗಿದೆ. ಇದಕ್ಕೆ ಮಾಲಕರ ಆಧಾರ್‌ ಹಾಗೂ ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡುವ ಮೂಲಕ ಸಂಪೂರ್ಣ ವಿವರ ಲಭ್ಯವಾಗಲಿದೆ.

ಜಿಲ್ಲೆಯಾದ್ಯಂತ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಹಾಲು ಒಕ್ಕೂಟಗಳ ಆಡಳಿತ ವರ್ಗದ ಸಹಕಾರದಿಂದ ಜಿಲ್ಲೆಯಲ್ಲಿ ಯೋಜನೆ ಯಶಸ್ವಿಯಾಗಿದೆ. ಶೇ.97.99 ಯುಐಡಿ ಟ್ಯಾಗ್‌ ಅಳವಡಿಸುವ ಮೂಲಕ ಜಾನುವಾರುಗಳ ಸಂಪೂರ್ಣ ದಾಖಲೀಕರಣ ಲಭ್ಯವಾಗಲಿದೆ. ಡಾ| ಪ್ರಸನ್ನ ಕುಮಾರ್‌, ಉಪನಿರ್ದೇಶಕರು, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ (ಆಡಳಿತ) ದ.ಕ.

 

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next