Advertisement
ವಾತಾವರಣದಲ್ಲಿ ಉಷ್ಣತೆ ಹೆಚ್ಚಾದಂತೆ ಜಾನುವಾರುಗಳು ಮೇವು ತಿನ್ನುವ ಪ್ರಮಾಣ ಕಡಿಮೆ ಮಾಡುತ್ತವೆ. ಇದರಿಂದ ಹಾಲಿನ ಇಳುವರಿ ಕುಸಿತಗೊಂಡು ಅವುಗಳ ಆರೋಗ್ಯವೂ ಹದಗೆಡುತ್ತದೆ. ಆದ್ದರಿಂದ ಬೇಸಗೆಯಲ್ಲಿ ಇದರ ನಿರ್ವಹಣೆ ಮಾಡುವುದು ರೈತರಿಗೆ ಸವಾಲಿನ ಕೆಲಸ.
-ಬೆವರಿನ ಮೂಲಕ ಹೆಚ್ಚಿನ ತಾಪಮಾನ ಹೊರಹಾಕುವುದು.
– ಹೆಚ್ಚು ನೀರು ಕುಡಿಯುವುದು.
– ಆಹಾರ ಸೇವನೆ ಕಡಿಮೆ ಮಾಡುವುದು.
– ನಾಲಿಗೆ ಹೊರಚಾಚಿ ಉಸಿರಾಡುವುದು, ತೇಕುವುದು.
– ನೆರಳಿನಲ್ಲಿ ಇರಲು ಇಷ್ಟಪಡುವುದು.
– ಕಡಿಮೆ ಹಾಲು ನೀಡುವುದು.
-ಜಾನುವಾರುಗಳ ಬೆದೆಯಲ್ಲಿ ಏರುಪೇರು ಉಂಟಾಗುವುದು.
-ಎಮ್ಮೆಗಳಲ್ಲಿ ಅವುಗಳ ಕಾಲು ಹಾಗೂ ಹೊಟ್ಟೆಯ ಕೆಳಭಾಗದ ಚರ್ಮ ಕೆಂಪಾಗುತ್ತದೆ. ಆರೋಗ್ಯ ನಿರ್ವಹಣೆ
ಬೇಸಗೆಯಲ್ಲಿ ಜಾನುವಾರುಗಳ ಶಾರೀರಿಕ ಪ್ರಕ್ರಿಯೆಯಲ್ಲಿ ಏರುಪೇರು ಉಂಟಾಗಿ ಒತ್ತಡದಿಂದ ಅವುಗಳ ರೋಗ ನಿರೋಧಕ ಶಕ್ತಿ ಕುಗ್ಗುವ ಸಾಧ್ಯತೆಗಳಿರುತ್ತವೆ. ಅನಂತರ ರಸವಾಹಕ (ಹಾರ್ಮೋನ್) ಗಳಲ್ಲಿ ವ್ಯತ್ಯಾಸಗೊಂಡು ಸಂತಾನೋತ್ಪತ್ತಿಯಲ್ಲಿ ಏರುಪೇರು ಉಂಟಾಗಿ ಜಾನುವಾರುಗಳು ಬೆದೆಗೆ ಬರುವುದು ಕಡಿಮೆಯಾಗುತ್ತದೆ. ಎಮ್ಮೆಗಳಲ್ಲಿ “ಮೂಕಬೆದೆ’ಯ ಲಕ್ಷಣಗಳು ಕಂಡುಬರಬಹುದು. ಬೇಸಗೆಯಲ್ಲಿ ಗರ್ಭ ಧರಿಸಿದ ಜಾನುವಾರುಗಳು ಮತ್ತು ಕರುಗಳ ಪಾಲನೆಗೆ ತುಂಬಾ ಗಮನಹರಿಸುವುದು ಅಗತ್ಯ.
Related Articles
1.ಎತ್ತರವಾದ ಛಾವಣಿ ಇರುವ ಒಳ್ಳೆಯ
ಕೊಟ್ಟಿಗೆ ಇರಬೇಕು. ಗಾಳಿಯಾಡುವಂತಹ ವ್ಯವಸ್ಥೆ ಇರಬೇಕು. ಕೊಟ್ಟಿಗೆಯ ಸೂರಿಗೆ ಹಸಿ ತೆಂಗಿನಗರಿ ಅಥವಾ ಹುಲ್ಲು ಹೊದೆಸಬೇಕು. ಛಾವಣಿ ಸಿಮೆಂಟ್ ಆಗಿದ್ದರೆ ಅದಕ್ಕೆ ಬಿಳಿಯ ಬಣ್ಣ, ಅಥವಾ ಸುಣ್ಣ ಹೊಡೆಯಬಹುದು.
2.ಸೂರ್ಯನ ಕಿರಣಗಳು ನೇರವಾಗಿ ದನಗಳ ಕೊಟ್ಟಿಗೆಯಲ್ಲಿ ಬೀಳುವುದನ್ನು ತಪ್ಪಿಸಲು ದನಗಳ ಕೊಟ್ಟಿಗೆ ಪೂರ್ವ-ಪಶ್ಚಿಮ ದಿಕ್ಕಿಗೆ ಇರಬೇಕು.
3.ಕೊಟ್ಟಿಗೆಯಲ್ಲಿ ಫ್ಯಾನ್‌ಗಳನ್ನು ಅಳವಡಿಸಿದರೆ ಉತ್ತಮ. ಇಲ್ಲದಿದ್ದರೆ ಕಿಟಕಿಗಳಿಗೆ ಗೋಣಿಚೀಲ ಕಟ್ಟಿ ತಂಪಾದ ನೀರನ್ನು ಸಿಂಪಡಿಸುತ್ತಿರಬೇಕು.
4.ಮುಖ್ಯವಾಗಿ ಎಮ್ಮೆಗಳ ಮೇಲೆ ಸದಾ ನೀರನ್ನು ಸಿಂಪಡಿಸುತ್ತಾ ಇರಬೇಕು. ಕೊಟ್ಟಿಗೆ ಹತ್ತಿರ ನೀರಿನ ಹೊಂಡವಿದ್ದರೆ ಉತ್ತಮ.
Advertisement
ಆಹಾರ ನಿರ್ವಹಣೆ ವಿಧಾನ-ಸಾಕಷ್ಟು ತಂಪಾದ, ಶುದ್ಧವಾದ ನೀರನ್ನು ಒದಗಿಸಬೇಕು. 10 ಡಿಗ್ರಿ ಸೆಂಟಿಗ್ರೇಡ್‌ನಿಂದ 15 ಡಿಗ್ರಿ ಸೆಂಟಿಗ್ರೇಡ್‌ವರೆಗೆ ನೀರಿನ ತಾಪಮಾನ ಕಡಿಮೆಗೊಳಿಸಿ ಅದನ್ನು ಪೂರೈಸಬಹುದು -ಸಾಧ್ಯವಾದಷ್ಟು ಬೆಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಮೇಯಲು ಬಿಡಬೇಕು. -ತಂಪಾದ ಸಮಯದಲ್ಲಿ ಮೇವು, ಹಿಂಡಿ, ನೀಡಬೇಕು. -ದನಗಳಿಗೆ ಹೆಚ್ಚಾಗಿ ಹಸುರು ಮೇವನ್ನು ನೀಡಬೇಕು -ಹೆಚ್ಚು ಹಾಲು ನೀಡುವ ದನ, ಎಮ್ಮೆಗಳಿಗೆ ಹೆಚ್ಚು ಸಸಾರಜನಕ ಇರುವ ಆಹಾರವನ್ನು ನೀಡಬೇಕು. ಇಂತಹ ಆಹಾರಗಳೆಂದರೆ ದ್ವಿದಳ ಧಾನ್ಯಗಳ ಹೊಟ್ಟು (ಶೇಂಗಾ ಹೊಟ್ಟು, ಉದ್ದಿನ ಹೊಟ್ಟು, ಅಲಸಂಡೆ ಮೇವು), ಎಣ್ಣೆಕಾಳುಗಳ ಹಿಂಡಿ, ಬೇಳೆಕಾಳುಗಳು. ಸಿದ್ಧ ಆಹಾರವನ್ನು ಆಕಳುಗಳ ದೇಹ ತೂಕಕ್ಕೆ ತಕ್ಕಂತೆ ದಿನಕ್ಕೆ ಎರಡು ಕೆ.ಜಿ.ಯಷ್ಟು ನೀಡಬೇಕು. ಹಾಲು ಕರೆಯುವ ಹಸುವಿಗೆ ಅದು ನೀಡುವ ಹಾಲಿನ ಇಳುವರಿಯ ಪ್ರಮಾಣಕ್ಕೆ ಅನುಗುಣವಾಗಿ ಅಂದರೆ ಪ್ರತಿ ಮೂರು ಲೀಟರ್‌ಗೆ 1 ಕೆ.ಜಿ.ಯಂತೆ ಪಶು ಆಹಾರ ನೀಡಬೇಕು. ಹಾಲು ಉತ್ಪಾದನೆ ಹೆಚ್ಚಿದಂತೆ ಪೂರೈಸುವ ಆಹಾರವನ್ನೂ ಹೆಚ್ಚಿಸಬೇಕು. – ಜೀವಸತ್ವಗಳನ್ನು (ವಿಟಮಿನ್ ಸಿ ಮತ್ತು ಬಿ ಕಾಂಪ್ಲೆಕ್ಸ್) ದನಗಳಿಗೆ ತಿನ್ನಿಸುವುದರಿಂದ ಹಾಲಿನ ಇಳುವರಿಯಲ್ಲಿ ಹೆಚ್ಚಳವಾಗುತ್ತದೆ.
– ಒಣ ಮೇವನ್ನು ಸುಮಾರು ಒಂದು ಇಂಚು ಉದ್ದಕ್ಕೆ ತುಂಡರಿಸಿ ಪ್ರತಿ ಜಾನುವಾರುಗಳಿಗೆ ನಿತ್ಯ 7ರಿಂದ 8 ಕೆ.ಜಿ.ಯಷ್ಟು ನೀಡಬೇಕು. ಅದಕ್ಕೂ ಮುನ್ನ ಮೇವಿಗೆ ಉಪ್ಪು ಅಥವಾ ಬೆಲ್ಲದ ದ್ರಾವಣ ಸಿಂಪಡಿಸಬೇಕು. ದಿನಕ್ಕೆ 100 ಗ್ರಾಂ ಲವಣಾಂಶ ಮಿಶ್ರಣ ಬಳಸಬಹುದು. – ಈ ರೀತಿ ಬೇಸಗೆಯಲ್ಲಿ ಜಾಗರೂಕತೆಯಿಂದ ಜಾನುವಾರುಗಳ ನಿರ್ವಹಣೆ ಮಾಡಿದರೆ ಹಾಲಿನ ಇಳುವರಿ, ಪಶುಗಳ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. - ಜಯಾನಂದ ಅಮೀನ್ ಬನ್ನಂಜೆ