ಕೋಲಾರ: ಫೆಬ್ರವರಿ 8ರಂದು ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಜನ ಪ್ರತಿನಿಧಿಗಳ ಮುಖವಾಡ ಧರಿಸಿ, ಹಸು ಮತ್ತು ಡೋಲು ಮೇಳಗಳ ಸಮೇತ ಅಣುಕು ಪ್ರದರ್ಶನದೊಂದಿಗೆ ಸಾಂಕೇತಿಕವಾಗಿ ಆಸ್ಪತ್ರೆ ಉದ್ಘಾಟನೆ ಮಾಡಿ ಪ್ರತಿಭಟಸಲಾಯಿತು. ಅಲ್ಲದೇ, ಈ ಪ್ರತಿಭಟನೆ ಮೂಲಕ ಆಸ್ಪತ್ರೆಯನ್ನು ಶೀಘ್ರ ಉದ್ಘಾಟನೆ ಮಾಡಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ನಾರಾಯಣಸ್ವಾಮಿ ಅವರನ್ನು ಅಗ್ರಹಿಸಲಾಯಿತು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಆರೋಗ್ಯವೇ ಭಾಗ್ಯ ಎಂಬುದು ರಾಜಕಾರಣಿಗಳ ನಿರ್ಲಕ್ಷ್ಯತೆಯಿಂದ ಅನಾರೋಗ್ಯವೇ ಭಾಗ್ಯ ಎಂಬಂತಾಗಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಮೂಲಭೂತ ಸೌಲಭ್ಯ ಒದಗಿಸಿ ಕಾಮಗಾರಿ ಮುಗಿದು 6 ತಿಂಗಳಾದರೂ ಶಾಸಕರ ಮತ್ತು ಜಿಲ್ಲಾ ಉಸ್ತುವಾರಿ ಹಾಗೂ ಜನ ಪ್ರತಿನಿಧಿಗಳ ಹಗ್ಗಜಗ್ಗಾಟದಲ್ಲಿ 6 ದಿನಾಂಕ ಮುಂದೂಡಲಾಗಿದೆ ಎಂದು ದೂರಿದರು.
ಆಸ್ಪತ್ರೆಗೆ ಉದ್ಘಾಟನೆ ಭಾಗ್ಯ ಕೊಡುವಲ್ಲಿ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಅನುಮಾನ ವ್ಯಕ್ತವಾಗುತ್ತಿದೆ. ದೇವಸ್ಥಾನಗಳಿಗೆ ಹೋಗಲು ಸಮಯ ನಿಗದಿ ಮಾಡುವ ರಾಜಕಾರಣಿಗಳು, ಆರೋಗ್ಯ ಸಚಿವರು, ಜಿಲ್ಲಾ ಆಸ್ಪತ್ರೆ ಉದ್ಘಾಟನೆ ಮಾಡಲೂ ಮೀನಮೇಷ ಎಣಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು
ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ, ಸಂವಿಧಾನದಲ್ಲಿ ರಾಜಕಾರಣಿಗಳಿಗೆ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮಾಡಬೇಕೆಂದು ಬರೆದಿಲ್ಲ. ಜನರಿಗೆ ಅನುಕೂಲವಾಗುವ ಕಟ್ಟಡಗಳನ್ನು ಜಿಲ್ಲಾಧಿಕಾರಿಗಳು ಅಥವಾ ಅಧಿಕಾರಿಗಳು ಉದ್ಘಾಟನೆ ಮಾಡಬಹುದು. ರಾಜಕಾರಣಿಗಳ ತಾರತಮ್ಯದಿಂದ ಜನರಿಗೆ ಸಿಗಬೇಕಾದ ಆಸ್ಪತ್ರೆ ಸೌಲಭ್ಯ ಸಿಗುತ್ತಿಲ್ಲ. ಆಸ್ಪತ್ರೆಗಳಿಗೆ ಹೆಣ್ಣು ಮಕ್ಕಳು ಹೆರಿಗೆಗೆ ಹೋದರೆ 1 ಲಕ್ಷದಿಂದ 1.5 ಲಕ್ಷದವರೆಗೆ ಖರ್ಚು ಮಾಡುವ ಪರಿಸ್ಥಿತಿಯಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಆಧಾರ್ ಕಾರ್ಡ್ ಕೊಟ್ಟರೆ ಎಣ್ಣೆಯನ್ನು ಮನೆ ಬಾಗಿಲಿಗೆ ಕಳುಹಿಸುತ್ತೇನೆ ಎನ್ನುತ್ತಾರೆ. ಇಚ್ಛಾಶಕ್ತಿಯಿಂದ ಫೆ.8 ರಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಮಾಡಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ, ಫೆ.8 ರಂದು ಖಂಡಿತವಾಗಿ ಉದ್ಘಾಟನೆ ಮಾಡೇ ಮಾಡ್ತಿವಿ ಎಂದು ಭರವಸೆ ನೀಡಿದರು.
ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಮಾಸ್ತಿ ವೆಂಕಟೇಶ್, ಮಂಗಸಂದ್ರ ವೆಂಕಟೇಶಪ್ಪ, ಅನುಶ್ರೀ, ನಳಿನಿ, ವಿ, ತಿಮ್ಮಣ್ಣ, ನಾಗೇಶ್, ವಡ್ಡಹಳ್ಳಿ ಮಂಜುನಾಥ್, ಬುದಿಕೋಟೆ ಹರೀಶ್, ಸಂಪಗಿರಾಮಯ್ಯ, ಆಂಜಿನಪ್ಪ, ಯಲ್ಲಪ್ಪ, ನಾರಾಯಣಪ್ಪ, ಬಾಲಪ್ಪ, ಸುಪ್ರೀಂ ಚಲ, ಸುದಾಕರ್, ಸುರೇಶ್, ಆನಿಲ್, ಚರಣ್, ಪ್ರವೀಣ್, ಶಿವು, ಸತೀಶ್, ನಾಗರಾಜ್, ನಾರಾಯಣ್, ಮೀಸೆ ವೆಂಕಟೇಶಪ್ಪ ಇದ್ದರು.