Advertisement

ಕುಷ್ಟಗಿ ಜಾನುವಾರು ಸಂತೆ ಭಣಭಣ

04:01 PM Dec 16, 2019 | Suhan S |

ಕುಷ್ಟಗಿ: ಪಟ್ಟಣದ ಹೆದ್ದಾರಿ ಪಕ್ಕದ ಎಪಿಎಂಸಿ ಜಾಗೆಯಲ್ಲಿ ನಡೆಯುವ ಜಾನುವಾರು ಸಂತೆಗೆ ರವಿವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.  ಹಿಂದಿನ ವರ್ಷಗಳಲ್ಲಿ ಜಾನುವಾರುಗಳ ಮಾರಾಟ ಮಾಡಲು ಬರಗಾಲ, ಮೇವು, ನೀರಿನ ಅಭಾವ ಕಾರಣವಾಗಿರುತ್ತಿತ್ತು.

Advertisement

ಹೀಗಾಗಿ ಜಾನುವಾರುಗಳ ಮಾರಾಟದ ಸಂಖ್ಯೆಯೂ ಹೆಚ್ಚಾಗಿರುತ್ತಿತ್ತು. ಆದರೆ ಈ ವರ್ಷದಲ್ಲಿ ನಿರೀಕ್ಷೆಯಂತೆ ಮಳೆಯಾಗಿದ್ದು, ಮೇವಿನ ಕೊರತೆ ಸದ್ಯಕ್ಕಿಲ್ಲ. ಈ ವರ್ಷದಲ್ಲಿ ಹಿಂಗಾರು ಉತ್ಪನ್ನದ ಖಾತ್ರಿ ಹಿನ್ನೆಲೆಯಲ್ಲಿ ಎರಡು ವಾರಗಳಲ್ಲಿ ರೈತರು ಜಾನುವಾರು ಖರೀದಿ ಹಾಗೂ ಮಾರಲು ಆಸಕ್ತಿ ತೋರಿಸಲಿಲ್ಲ. ಸದ್ಯ ಜಾನುವಾರು ಖರೀದಿ ಸಲು ಹಣಕಾಸಿನ ಮುಗ್ಗಟ್ಟು, ಬೆಳೆದ ಉತ್ಪನ್ನ ಮಾರಾಟದ ನಂತರ ಹೊಸ ಎತ್ತುಗಳನ್ನು ಖರೀದಿ ಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ವಾರದ ಜಾನುವಾರು ಸಂತೆ ಸೊರಗುವಿಕೆಗೆ ಕಾರಣವಾಗಿದೆ. ಹೋರಿ, ಕರು, ಜೋಡೆತ್ತು, ಎಮ್ಮೆ, ಹಸುಗಳ ಸಂಖ್ಯೆ ಕಡಿಮೆ ಇತ್ತು. ಅಂತೆಯೇ ಖರೀದಿಗೆ ಬಂದ ರೈತರ ಸಂಖ್ಯೆಯೂ ಕಡಿಮೆಯಾಗಿರುವುದು ಕಂಡುಬಂತು.

ಹಿಂಗಾರು ಬಿತ್ತನೆ ಸಂದರ್ಭದಲ್ಲಿ ಉಳುಮೆ ಎತ್ತುಗಳಿಗೆ ಬಾರಿ ಬೇಡಿಕೆ ಇದ್ದಾಗ ಎತ್ತುಗಳನ್ನು ಖರೀ ಸಿದ್ದ ರೈತರು, ಸದ್ಯದ ಆರ್ಥಿಕ ಅಡಚಣೆಗೆ ಮುಂದಿನ ಸೀಜನ್‌ ವೇಳೆಗೆ ಮತ್ತೆ ಎತ್ತು ಖರೀದಿಸಿದರಾಯ್ತು ಎಂದು ಜಾನುವಾರುಗಳ ಸಂತೆಗೆ ಎತ್ತುಗಳನ್ನು ತಂದಿದ್ದರು. ಸದರಿ ಎತ್ತುಗಳಿಗೆ ಯೋಗ್ಯದರ ಇಲ್ಲದಿರುವ ಹಿನ್ನೆಲೆಯಲ್ಲಿ ನಿರಾಸೆಗೆ ಕಾರಣವಾಯಿತು. ಜಾನುವಾರು ಸಂತೆಯ ಪರಿಸ್ಥಿತಿ ಗಮನಿಸಿ, ಇಂತಹ ಎತ್ತುಗಳನ್ನು ಕಡಿಮೆ ಬೆಲೆಗೆ ಮಾರಿದರೆ, ಮುಂದೆ ಇಂತಹ ಎತ್ತುಗಳು ಸಿಗುವುದಿಲ್ಲ ಎಂದು ಖಚಿತಪಡಿಸಿಕೊಂಡ ರೈತರು ವಾಪಸ್ಸಾಗಿರುವುದು ಕಂಡು ಬಂತು. ಕೆಲವು ರೈತರು ಕಡಿಮೆ ಬೆಲೆಗೆ ಒಲ್ಲದ ಮನಸ್ಸಿನಿಂದ ಮಾರಾಟ ಮಾಡಿದರೆ, ಇನ್ನು ಕೆಲವರು ಆ ಬೆಲೆಗೆ ಮಾರಲು ಹಿಂದೇಟು ಹಾಕಿ ವಾಪಸ್‌ ಮನೆ ದಾರಿ ಹಿಡಿದರು. ಕೆಲವು ರೈತರು ಮುಂದಿನ ಸೀಜನ್‌ಗೆ ಪೂರ್ವ ತಯಾರಿಗೆ ಎತ್ತುಗಳನ್ನು ಖರೀದಿಸಲು ಬಂದವರಿಗೆ ಸಂತೆಯಲ್ಲಿ ತಾವು ನಿರೀಕ್ಷಿಸಿದಂತೆ ಎತ್ತುಗಳನ್ನು ಬಾರದಿರುವುದು ಬಂದ ದಾರಿಗೆ ಸುಂಕ ಇಲ್ಲವೆಂದು ವಾಪಸ್ಸಾದರು.

Advertisement

Udayavani is now on Telegram. Click here to join our channel and stay updated with the latest news.

Next