ಚನ್ನರಾಯಪಟ್ಟಣ: ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ರೈತರ ಜೀವನೋಪಾಯಕ್ಕೆ ಅನುಕೂಲವಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ತಾಲೂಕಿನ ಕಾರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಹಾಸನ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳಿಂದ ಆಯೋಜಿಸಿದ್ದ 66ನೇ ಅಖೀಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳಿಂದ 184 ಕೋಟಿ ರೂ. ಸಾಲ ನೀಡಿದ್ದು ಇದರಿಂದ 37 ಸಾವಿರ ರೈತರ ಬೆಳೆಸಾಲ 170 ಕೋಟಿ ರೂ. ಸಾಲ ಮನ್ನವಾಗಿದೆ ಎಂದರು.
ನಿತ್ಯವೂ 90 ಸಾವಿರ ಲೀ. ಹಾಲು ಉತ್ಪಾದನೆ: ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ನಿತ್ಯವೂ 90 ಸಾವಿರ ಲೀ. ಹಾಲು ಉತ್ಪದನೆಯಾಗುತ್ತಿದ್ದು ಮಾಸಿಕ 20 ಕೋಟಿ ರೂ. ಹಣ ರೈತರಿಗೆ ದೊರೆಯುತ್ತಿದೆ. ಬರಗಾಲದಲ್ಲಿಯೂ ರೈತರು ಕುಟುಂಬ ನಿರ್ವಹಣೆಗೆ ಹೈನುಗಾರಿಕೆ ಸಹಕಾರಿಯಾಗಿದೆ ಒಂದು ವೇಳೆ ಕೇಂದ್ರ ಸರ್ಕಾರ ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದರೆ ರೈತರು ಬೀದಿಪಾಲಾಗುತ್ತಿದ್ದರು ಎಂದು ಹೇಳಿದರು.
ತೆಂಗು ಬೆಳೆಗಾರರಿಗೆ ನೆರವು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ವೇಳೆ 30 ಸಾವಿರ ರೈತರಿಗೆ ತೆಂಗು ಬೆಳೆ ಪರಿಹಾರವನ್ನು ಪಕ್ಷಾತೀತವಾಗಿ ನೀಡಲಾಗಿದೆ. ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಅಭಿವೃದ್ಧಿಗೂ ಸೂಕ್ತ ಕ್ರಮ ಕೈಗೊಂಡಿದ್ದೇವೆ, ರೈತರು ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ನಿಮ್ಮ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು, ಪ್ರಸಕ್ತ ವರ್ಷ ಉತ್ತಮವಾಗಿ ಮಳೆಯಾಗಿದೆ ನೀರನ್ನು ಮಿತವಾಗಿ ಬಳಸುವ ಮೂಲಕ ಕೃಷಿ ಮಾಡಬೇಕು ಎಂದು ಸಲಹೆ ನೀಡಿದರು.
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ: ಸಹಕಾರ ರಂಗ ಪ್ರಬಲವಾದರೆ ರೈತರು ಅರ್ಥಿಕವಾಗಿ ಸದೃಢರಾಗುತ್ತಾರೆ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು. ಹೈನುಗಾರಿಕೆ ಹಾಗೂ ಕೃಷಿ ಪತ್ತಿನ ಸಹಕಾರದಲ್ಲಿನ ನಿರ್ದೇಶಕರು ಹಾಗೂ ಸಿಬ್ಬಂದಿ ರೈತರನ್ನು ಸಹೋದರತ್ವದಿಂದ ಕಾಣಬೇಕು. ಎಲ್ಲಾ ರೈತರು ಈ ದೇಶಕ್ಕೆ ಅನ್ನ ನೀಡಲು ಶ್ರಮಿಸುತ್ತಾರೆ ಅವರಲ್ಲಿ ರಾಜಕೀಯ ಮಾಡುವುದು ತರವಲ್ಲ ಎಂದು ಹೇಳಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಶೇಷಾದ್ರಿ, ಉಪಾಧ್ಯಕ್ಷ ರಾಜಪ್ಪಗೌಡ, ನಿರ್ದೇಶಕ ಎನ್.ರಾಜಣ್ಣ, ಪುಟ್ಟಸ್ವಾಮಿಗೌಡ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಾರತಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವೇಗೌಡ, ಮೇಲ್ವಿಚಾರಕ ಅಭಿಲಾಷ್, ದಯಾನಂದ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಆರ್.ದೊರೆಸ್ವಾಮಿ, ಮಂಜುನಾಥ್, ಮುಖಂಡರಾದ ರಾಮಚಂದ್ರು, ಟಿ.ಆರ್.ವೆಂಕಟೇಶ್, ಸತೀಶ್, ಕಾರ್ಯ ನಿರ್ವಹಣಾಧಿಕಾರಿ ರಾಜೇಶ್, ಶರ್ಮ ಇತರರು ಹಾಜರಿದ್ದರು.