ಈ ಜೀವನ ಚೆನ್ನಾಗಿದೆ. ಬದುಕು ಅದ್ಭುತ ವಾಗಿದೆ. ಇರುವುದೊಂದೇ ಬದುಕು ಎಂಬ ಅರಿವು ಹೊಂದಿ ಇರುವಷ್ಟು ದಿನ ಚೆನ್ನಾಗಿ ಜೀವಿಸಬೇಕು. ಹಾಗಿರಬೇಕಿತ್ತು, ಹೀಗಾಗ ಬೇಕಿತ್ತು, ನಾನು ಅವನಂತೆ ಆಗಿದ್ದರೆ ಎಷ್ಟು ಚೆನ್ನಾಗಿತ್ತು, ಅದೊಂದು ಇದ್ದರೆ ಪ್ರಚಂಡ ಸಾಧನೆ ಮಾಡುತ್ತಿದ್ದೆ ಎಂಬ ಹಳಹಳಿಕೆಗಳೆಲ್ಲ ವ್ಯರ್ಥ. ಅದರಿಂದ ಏನೂ ಸಾಧನೆ ಆಗುವುದಿಲ್ಲ. ಒಂದೂರಿನಲ್ಲಿ ಮುದುಕ ನೊಬ್ಬನ ಗಟ್ಟಿಮುಟ್ಟಾದ ಕುದುರೆ ಕಾಣೆ ಯಾಯಿತಂತೆ. ಊರಿನ ಮಂದಿ ಬಂದು ಅದರ ಬಗ್ಗೆ ಬೇಸರ ವ್ಯಕ್ತಪಡಿಸಿದಾಗ ಮುದುಕ “ಒಳಿತೇ ಆಯಿತು’ ಎಂದನಂತೆ. ನಾಲ್ಕಾರು ದಿನಗಳ ಬಳಿಕ ಅದೇ ಕುದುರೆ ಇನ್ನೊಂದು ಬಲಶಾಲಿ ಕುದುರೆಯನ್ನು ತನ್ನ ಜತೆಗೆ ಕರೆದುಕೊಂಡು ಮನೆಗೆ ಬಂತು. ಊರಿನವರು ಖುಷಿ ವ್ಯಕ್ತಪಡಿಸಿದಾಗಲೂ ಮುದುಕನ ಪ್ರತಿಕ್ರಿಯೆ “ಒಳಿತೇ ಆಯಿತು’. ವಾರದ ಬಳಿಕ ಮುದುಕನ ಮಗ ಹೊಸ ಕುದುರೆಯನ್ನೇರಿ ಸವಾರಿ ಮಾಡುತ್ತಿದ್ದಾಗ ಬಿದ್ದು ಅವನ ಕಾಲು ಮುರಿಯಿತು. ಊರಿನವರು ಬಂದು “ತು… ತು…’ ಎಂದರು. ಆಗಲೂ ಮುದುಕ “ಒಳಿತೇ ಆಯಿತು’ ಎಂದ. ಕೆಲವೇ ದಿನಗಳಲ್ಲಿ ಆ ರಾಜ್ಯದ ಸೈನಿಕರು ಬಂದು ಊರಿನ ಯುವಕರನ್ನೆಲ್ಲ ಯುದ್ಧಕ್ಕಾಗಿ ಕರೆದೊಯ್ದರು. ಆದರೆ ಕಾಲು ಮುರಿದಿದ್ದ ಮುದುಕನ ಮಗನಿಗೆ ವಿನಾಯಿತಿ ಸಿಕ್ಕಿತು. ಆಗಲೂ ಆತ “ಒಳಿತೇ ಆಯಿತು’ ಎಂದನಂತೆ.
ಜೀವನದಲ್ಲಿ ಬಂದುದನ್ನು ಬಂದ ಹಾಗೆ ಸ್ವೀಕರಿಸುವುದು, ಎಲ್ಲವೂ ಆಗುವುದು ಒಳ್ಳೆಯದಕ್ಕೇ ಎಂಬ ಆಶಾವಾದದಿಂದ ಜೀವಿಸುವುದನ್ನು ಹೇಳುವ ಸುಂದರವಾದ ಕಥೆ ಇದು. ಅದಿಲ್ಲ ಇದಿಲ್ಲ ಎಂದುಕೊಂಡರೆ ಅಷ್ಟರಲ್ಲಿಯೇ ಜೀವನ ಮುಗಿದು ಹೋಗುತ್ತದೆ. ಸುಂದರವಾದ ಬದುಕು ನನಗೆ ಸಿಕ್ಕಿದೆ, ಎಲ್ಲವೂ ಚೆನ್ನಾಗಿದೆ, ನನ್ನಿಂದ ಸಾಧ್ಯವಾದ ಎಲ್ಲವನ್ನೂ ಮಾಡುತ್ತೇನೆ, ನಾಳೆ ಒಳ್ಳೆಯದಾಗುತ್ತದೆ ಎಂಬ ಕನಸು, ಆಶಾ ವಾದ, ನಿರೀಕ್ಷೆಗಳೊಂದಿಗೆ ಬದುಕುವುದು ಒಂದು ಕಲೆ. ಅದು ಗೊತ್ತಿರಬೇಕು. ಬದುಕಲು ಗೊತ್ತಿದ್ದವನಿಗೆ ಬದುಕಲು ಸಾಧ್ಯವಾಗುತ್ತದೆ.
ಒಂದೂರಿನ ಒಂದು ಮನೆಯಲ್ಲಿ ಒಂದು ಹಳೆಯ ಸಂಗೀತ ವಾದ್ಯವಿತ್ತು. ಆ ಕುಟುಂಬದ ಪೂರ್ವಜರು ಅದನ್ನು ಸುಶ್ರಾವ್ಯ ವಾಗಿ ನುಡಿಸುತ್ತಿದ್ದರು. ಕಾರಣಾಂತರಗಳಿಂದ ಮುಂದಿನ ಪೀಳಿಗೆಗೆ ಅದರ ವಾದನ ಕಲೆ ಸಿದ್ಧಿಸಲಿಲ್ಲ. ಅದಕ್ಕೂ ಮುಂದಿನ ತಲೆಮಾರಿಗೆ ಆ ಸಂಗೀತ ವಾದ್ಯದ ಪರಿಚಯವಷ್ಟೇ ಇತ್ತು. ಮತ್ತೂಂದು ತಲೆಮಾರು ಮುಂದೆ ಬಂದಾಗ ಆ ಪರಿಚಯವೂ ಇಲ್ಲವಾಯಿತು. ಶತಮಾನ ಗಳಿಂದ ಆ ವಾದ್ಯ ಉಪಯೋಗಿಸುವವರು ಇಲ್ಲದೆ ಒಂದು ಮೂಲೆಯಲ್ಲಿ ಧೂಳು ತಿನ್ನುತ್ತ ಬಿದ್ದಿತ್ತು.
ಒಂದು ದಿನ ಆ ಮನೆಯಲ್ಲಿದ್ದವರು ಆ ವಾದ್ಯ ನಿರುಪಯೋಗಿ ಎಂದುಕೊಂಡು ಅದನ್ನು ಹೊರಕ್ಕೆಸೆಯಲು ತೀರ್ಮಾನಿಸಿ ದರು. ಹಾಗೆ ಮಾಡಿಯೂ ಬಿಟ್ಟರು. ಮರುದಿನ ಆ ಮಾರ್ಗ ವಾಗಿ ಒಬ್ಬ ವೃದ್ಧ ಭಿಕ್ಷುಕ ಬಂದ. ವಾದ್ಯವನ್ನು ನೋಡಿ ದವನೇ ಧೂಳು ಒರೆಸಿ ವಾದಿಸಲು ತೊಡ ಗಿದ. ಮಧುರ ಸಂಗೀತ ಹರಡಿತು. ಪಥಿಕರು ಅಲ್ಲಲ್ಲೇ ನಿಂತರು, ಭಿಕ್ಷುಕನ ಸುತ್ತ ನೆರೆದರು. ವಾದ್ಯ ಎಸೆದಿದ್ದ ಮನೆಯವರೂ ಬಂದರು.
ಭಿಕ್ಷುಕ ಸಂಗೀತ ನಿಲ್ಲಿಸಿದಾಗ ಆ ಮನೆ ಯವರು “ವಾದ್ಯ ನಮ್ಮದು’ ಎಂದರು. ಭಿಕ್ಷುಕ ಹೇಳಿದ, “ನಿಮ್ಮದಾಗಿರಬಹುದು. ಆದರೆ ನಿಮ್ಮಲ್ಲಿದ್ದಾಗ ನಿರುಪಯೋಗಿ ಯಾಗಿತ್ತು. ನನಗೆ ಅದನ್ನು ವಾದಿಸಲು ಗೊತ್ತು. ಹಾಗಾಗಿ ಅದು ನನ್ನದು’ ಎಂದ. ನೆರೆದ ಜನರು ಅವನನ್ನು ಅನುಮೋದಿಸಿ ದರು.
ಯಾರಿಗೆ ವಾದನ ಗೊತ್ತಿದೆಯೋ ವಾದ್ಯ ಅವರದು. ಯಾರಿಗೆ ಬದುಕಲು ಗೊತ್ತಿದೆಯೇ ಬದುಕು ಅವರದು ಎನ್ನುವುದಕ್ಕೆ ಉದಾಹರಣೆಯಾಗಿ ಓಶೋ ರಜನೀಶ್ ಈ ಕಥೆ ಹೇಳಿದ್ದಾರೆ.