Advertisement

ಲೈವ್‌ ಸ್ಟ್ರೀಮಿಂಗ್‌: ಗುಜರಾತ್‌ ಹೈಕೋರ್ಟ್‌ ಶ್ರೀಕಾರ

07:11 PM Sep 27, 2022 | Team Udayavani |

ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ನಡೆಯುವ ವಿಚಾರಣೆಗಳ ನೇರ ಪ್ರಸಾರ ಮಂಗಳವಾರದಿಂದ ಶುರುವಾಗಿದೆ. ಗಮನಾರ್ಹ ಅಂಶವೆಂದರೆ, ಮೊದಲ ಬಾರಿಗೆ ಕೋರ್ಟ್‌ ಕಲಾಪಗಳ ನೇರ ಪ್ರಸಾರಕ್ಕೆ ಮುಂದಡಿಯಿಟ್ಟಿದ್ದು ಗುಜರಾತ್‌ ಹೈಕೋರ್ಟ್‌. ನಂತರದಲ್ಲಿ ಎಲ್ಲೆಲ್ಲಿ ಈ ರೀತಿ ಲೈವ್‌ ಸ್ಟ್ರೀಮಿಂಗ್‌ ಆಗಿದೆ ಎಂಬ ಮಾಹಿತಿ ಇಲ್ಲಿದೆ.

Advertisement

ಇತಿಹಾಸ ಸೃಷ್ಟಿಸಿದ್ದ ಗುಜರಾತ್‌ ಹೈಕೋರ್ಟ್‌
2021ರ ಜುಲೈನಲ್ಲಿ ಗುಜರಾತ್‌ ಹೈಕೋರ್ಟ್‌ ಕಲಾಪಗಳನ್ನು ನೇರ ಪ್ರಸಾರ ಮಾಡಲು ಮೊದಲ ಹೆಜ್ಜೆ ಇರಿಸಿತ್ತು. ಈ ವ್ಯವಸ್ಥೆಯನ್ನು ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎನ್‌.ವಿ.ರಮಣ ಅವರು ಉದ್ಘಾಟಿಸಿದ್ದರು. ಜತೆಗೆ ನೇರ ಪ್ರಸಾರದ ನಿಯಮಗಳನ್ನೂ ಬಿಡುಗಡೆ ಮಾಡಿದ್ದರು. 2020ರ ಅ.20ರಿಂದಲೂ ಯೂಟ್ಯೂಬ್‌ನಲ್ಲಿ ವಿಚಾರಣೆ ನೇರಪ್ರಸಾರ ಆಗುತ್ತಿದೆ.

ಎರಡನೇ ಹೈಕೋರ್ಟ್‌
ಕಲಾಪಗಳ ನೇರ ಪ್ರಸಾರದ ನಿರ್ಧಾರ ಕೈಗೊಂಡ ದೇಶದ 2ನೇ ಹೈಕೋರ್ಟ್‌ ಕರ್ನಾಟಕದ್ದು. 2021ರ ಜೂನ್‌ನಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಆರಂಭಿಕ ಹಂತದಲ್ಲಿ ನೇರ ಪ್ರಸಾರ ಮಾಡಲು ಸಮ್ಮತಿಸಿತ್ತು. ಕೋರ್ಟ್‌ ಹಾಲ್‌-1ರಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ ಶ್ರೀನಿವಾಸ್‌ ಓಖಾ ಮತ್ತು ನ್ಯಾ.ಸೂರಜ್‌ ಗೋವಿಂದ ರಾಜ್‌ ಅವರನ್ನೊಳಗೊಂಡ ನ್ಯಾಯಪೀಠ ಆ ಪ್ರಕರಣಗಳ ವಿಚಾರಣೆ ನಡೆಸಿತ್ತು. ಅದೇ ವರ್ಷದ ಜೂನ್‌ನಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ ಕೂಡ ಇದೇ ಹೆಜ್ಜೆ ಇರಿಸಿತ್ತು.

ಒಡಿಶಾ ಮತ್ತು ಪಾಟ್ನಾ ಹೈಕೋರ್ಟ್‌
ಕಳೆದ ವರ್ಷದ ಆಗಸ್ಟ್‌ನಿಂದ ಒಡಿಶಾ ಹೈಕೋರ್ಟ್‌ನಲ್ಲಿ ನೇರ ಪ್ರಸಾರ ಶುರು ಮಾಡಲಾಗಿತ್ತು. ಕೋರ್ಟ್‌ನ ರಿಜಿಸ್ಟ್ರಿ ಮೂಲಕ ನೀಡಲಾಗುವ ಆದೇಶಗಳನ್ನು ಮಾತ್ರ ಅಧಿಕೃತ ಎಂದು ಪರಿಗಣಿಸಬೇಕು ಎಂದು ಒಡಿಶಾ ಹೈಕೋರ್ಟ್‌ ಆದೇಶಿಸಿತ್ತು. 2021ರ ಡಿಸೆಂಬರ್‌ನಲ್ಲಿ ಪಾಟ್ನಾ ಹೈಕೋರ್ಟ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಆರಂಭವಾಯಿತು. ಈ ಮೂಲಕ ದೇಶದ ಐದನೇ ಹೈಕೋರ್ಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಜಾರ್ಖಂಡ್‌ ಹೈಕೋರ್ಟ್‌
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಯೂಟ್ಯೂಬ್‌ ಮೂಲಕ ಲೈವ್‌ ಸ್ಟ್ರೀಮಿಂಗ್‌ ಶುರು ಮಾಡಲಾಗಿತ್ತು. 2020ರ ಏಪ್ರಿಲ್‌ನಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಾಯೋಗಿಕವಾಗಿ ಕೋರ್ಟ್‌ ಕಲಾಪಗಳನ್ನು ಲೈವ್‌ ಸ್ಟ್ರೀಮಿಂಗ್‌ ನಡೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next