ನವದೆಹಲಿ: ದೇಶಾದ್ಯಂತ 70ನೇ ಗಣರಾಜ್ಯೋತ್ಸವ ಸಂಭ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ ಪಥ್ ನಲ್ಲಿ ಶನಿವಾರ ದೇಶದ ಸೇನಾ ಶಕ್ತಿ, ದೇಶದ ಸಂಸ್ಕೃತಿ ಅನಾವರಣಗೊಂಡಿದೆ. ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈ ಬಾರಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಪಾಲ್ಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಭಾರತೀಯ ಸೇನೆಯ ಆರ್ಮಿ ಮುಖ್ಯಸ್ಥ ಬಿಪಿನ್ ರಾವತ್, ನೌಕಾದಳದ ಸುನೀಲ್ ಲಾನ್ಬಾ ಮತ್ತು ವಾಯುದಳದ ಮಾರ್ಷಲ್ ಬಿಎಸ್ ಧಾನೋವಾ ಅವರು ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿಗೆ ನಮನ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೇಶದ ಪ್ರಥಮ ಮಹಿಳೆ ಸವಿತಾ ಕೋವಿಂದ್, ಮುಖ್ಯ ಅತಿಥಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ರಾಮಾಫೋಸಾ, ಪತ್ನಿ ನೋಮಾಜೀಜಿ ರಾಜ್ ಪಥ್ ಗೆ ಆಗಮಿಸಿದ್ದರು.ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿ ಧ್ವಜಾರೋಹಣ ನೆರವೇರಿಸಿದರು. 21 ಗನ್ ಸೆಲ್ಯೂಟ್ ಹಾಗೂ ರಾಷ್ಟ್ರಗೀತೆಯನ್ನು ಹಾಡಲಾಯಿತು.
ಈ ಸಂದರ್ಭದಲ್ಲಿ ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಪತ್ನಿ ಮತ್ತು ತಾಯಿ ಅಶೋಕ ಚಕ್ರ ಪ್ರಶಸ್ತಿಯನ್ನು ಸ್ವೀಕರಿಸಿದರು.
ಗಣರಾಜ್ಯೋತ್ಸವ ಪರೇಡ್ ಆಕರ್ಷಣೆ:
ಮರಾಠ ಇನ್ ಫ್ಯಾಂಟ್ರಿಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆಸಿತ್ ಮಿಸ್ತ್ರಿ ನೇತೃದಲ್ಲಿ ಮೊದಲ ಪರೇಡ್ ರಾಜ್ ಪಥ್ ನಲ್ಲಿ ನಡೆಯಿತು. ಬಳಿಕ ಕಮಾಂಡ್ ಮೇಜರ್ ಜನರಲ್ ರಾಜ್ ಪಾಲ್ ಪುನಿಯಾ ಮತ್ತು ಇತರರಿಂದ ಪರೇಡ್ ನಡೆಯಿತು.
ಬಳಿಕ ರಾಷ್ಟ್ರಪತಿ ಭವನದಿಂದ ಇಂಡಿಯಾಗೇಟ್ ವರೆಗೆ ಭಾರತೀಯ ಸೇನೆಯ ಮಿಲಿಟರಿ ಶಕ್ತಿ ಅನಾವರಗೊಂಡಿತ್ತು. ಭಾರತೀಯ ಸೇನೆಯ ಪ್ರಮುಖ ಯುದ್ಧ ಟ್ಯಾಂಕ್ ಟಿ 90 (ಭೀಷ್ಮ) ಪ್ರದರ್ಶಿಸಲಾಯಿತು. ಕ್ಯಾಪ್ಟನ್ ದೇವಾನ್ಶ್ ಭೂತಾನಿ ನೇತೃತ್ವದಲ್ಲಿ K-9 ವಜ್ರ ಹೊವಿಟ್ಜರ್, ಅಮೆರಿಕದ ಎಂ 777 ಎ2 ಆರ್ಟಿಲರಿ ಗನ್ ಶಕ್ತಿ ಅನಾವರಣಗೊಂಡಿತ್ತು.