ನಾಳೆಯ ಭವಿಷ್ಯದ ಬಗ್ಗೆ ಉಡಾಫೆಯ ಮಾತಾಡುವ ವ್ಯಕ್ತಿಗಳು ಇವತ್ತನ್ನು, ಈ ಕ್ಷಣವನ್ನು ಸಂಪೂರ್ಣ ಎಂಜಾಯ್ ಮಾಡ್ತಾ ಇರುತ್ತಾರೆ. ಬಹಳ ನೆಮ್ಮದಿಯಾಗಿ ಇರ್ತಾರೆ…
ಲಾಕ್‌ಡೌನ್ ಮುಗಿದ ಮೇಲೆ ನಾವು ಆಫೀಸಿಗೆ ಹೋಗ್ತಿವಾ? ಇಲ್ಲ ಇಲ್ಲ. ಮನೆಯಲ್ಲೇ ಇರಬೇಕಾಗುತ್ತೆ. ಹಾಗಾದರೆ, ಮುಂದೇನು ಮಾಡೋದು? ಇ.ಎಂ.ಐ. ಹೇಗೆ ಕಟ್ಟೋದು? ಮಕ್ಕಳ ಸ್ಕೂಲ್ ಫೀಗೆ ಹಣ ಹೊಂದಿಸಲು ಇರುವ ದಾರಿ ಯಾವುದು? ನಾಳೆಯ ಬಗ್ಗೆ ಹೀಗೆ ಯೋಚನೆ ಮಾಡ್ತಾ ಹೋದರೆ, ಬಿ.ಪಿ.- ಶುಗರ್ ಜಾಸ್ತಿ ಆಗುತ್ತದೆ. ಇದೊಂಥರಾ, ನಾಳೆ ಎಂಬುದು ಎದ್ದು ಬಂದು, ಇವತ್ತಿನ ನೆಮ್ಮದಿಗೆ ಕೊಳ್ಳಿ ಇಟ್ಟಂತೆ. ನೀವು ಗಮನಿಸಿರಬಹುದು. ಎಂಥ ತೊಂದರೆ ಎದುರಾದರೂ ಕೆಲವರು, ದೇವರಿದ್ದಾನೆ ಬಿಡೋ, ಹುಟ್ಸೆದ ದೇವ್ರು ಹುಲ್ಲು ಮೇಯಿಸದೇ ಇರ್ತಾನಾ?
ನಾಳೆ ತಾನೆ ಹೀಗಾಗೋದು? ಇನ್ನೂ ಸಮಯ ಇದೆ! ನೋಡ್ಕೊಳ್ಳೋಣ… ಅನ್ನುತ್ತಾರೆ. ಇಂಥವರನ್ನು ಕಂಡಾಗ, ಏನ್ ಜನನಯ್ಯಾ ಇವ್ರು, ಜೀವನ ಪೂರ್ತಿ ನೆಗ್ಲೆಕ್ಟ್ ಮಾಡ್ಕೊಂಡೇ ಬದುಕ್ತಾರೆ. ಅನ್ ಪ್ಲಾನ್ಡ್ ವ್ಯಕ್ತಿಗಳು ಇವ್ರು ಅಂದುಕೊಳ್ತೀರಾ ಅಲ್ವೇ? ನಿಜ ಏನು ಗೊತ್ತಾ? ಹೀಗೆ ಉಡಾಫೆಯ ಮಾತಾಡುವ ವ್ಯಕ್ತಿಗಳು ಇವತ್ತನ್ನು, ಈ ಕ್ಷಣವನ್ನು ಸಂಪೂರ್ಣ ಎಂಜಾಯ್ ಮಾಡ್ತಾ ಇರುತ್ತಾರೆ. ಬಹಳ ನೆಮ್ಮದಿಯಾಗಿ ಇರ್ತಾರೆ. ನಾಳೆ ಕೆಲ್ಸ ಹೋದ್ರೆ ಏನಪ್ಪಾ ಗತಿ ಅನ್ನೋ ಆತಂಕ, ಇವರ ತಲೆಯಲ್ಲಿ ಯಾವತ್ತೂ ಸುಳಿಯಲ್ಲ. ಈ ಕೆಲಸ ಹೋದ್ರೆ, ಇನ್ನೊಂದು ಕೆಲ್ಸ ಹುಡ್ಕೊಣ ಅನ್ನೋ ಮನೋಸ್ಥಿತಿ ಇವರದು.
ಚಿಂತೆ ಇಲ್ಲದ ಕಾರಣಕ್ಕೆ ಅವರು ಆರಾಮಾಗೇ ಇರ್ತಾರೆ. ನಾಳೆ ಏನೇನೋ ಆಗಿಬಿಡುತ್ತೆ. ಕೊರೊನಾದಿಂದ ಲಾಸ್ ಆಗಿ ಕಂಪನಿ ಷಟರ್ ಎಳೆಯುತ್ತೆ… ಹೀಗೆಲ್ಲಾ, ಸಾವಿರಾರು ಯೋಚನೆ ಮಾಡುವ ಇನ್ನೊಂದು ವರ್ಗವೂ ಇದೆ. ಯಾರು ಏನೇ ಹೇಳಿದರೂ ನಾವು ಊಹಿಸಿದಂತೆಯೇ ಎಲ್ಲವೂ ನಡೆಯುವುದಿಲ್ಲ. ಇದಕ್ಕೆ ಕಣ್ಣಮುಂದಿರುವ ಉದಾಹರಣೆ ಅಂದರೆ, ಪ್ರಧಾನಿ ಮೋದಿ ಅವರು ಮೊದಲ ಸಲ ಲಾಕ್‌ಡೌನ್ ಅಂತ ಘೋಷಣೆ ಮಾಡಿದ ಕ್ಷಣ. ಆಗ, ದಿನಸಿ ಅಂಗಡಿ ಮುಂದೆ ಕಿಲೋಮೀಟರ್ ಗಟ್ಟಲೆ ಕ್ಯೂ. ಎಲ್ಲರೂ ಒಂದೇ ಸಲಕ್ಕೆ 20-30 ಕೆ. ಜಿ. ಅಕ್ಕಿ- ರಾಗಿ ಖರೀದಿಸಿದರು. ನಾಳೆಯಿಂದ ಏನೂ ಸಿಗಲ್ಲ ಎಂಬ ಭಯವೇ ಅದಕ್ಕೆ ಕಾರಣ ಆಗಿತ್ತು.
ಆಮೇಲೆ ಏನಾಯ್ತು? ಎಂದಿನಂತೆ ಹಾಲು ಸರಬರಾಜಾಯ್ತು, ದಿನಸಿ ಸಿಕು. ಯಾವುದಕ್ಕೂ ಬಾಧೆ ಆಗಲಿಲ್ಲ. ಏನೋ ಆಗಿಬಿಡುತ್ತೆ ಎಂಬ ಯೋಚನೆ ಮನಸ್ಸಿಗೆ ಬಂದಾಗ, ಮೆದುಳಿನ ಯೋಚನಾ ಕ್ರಮಗಳು ಬದಲಾಗುತ್ತವೆ. ಪಿಪ್ರೋಟ್ ಕಾರ್ಟಲ್ ಅನ್ನೋ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಆನಂತರದಲ್ಲಿ ಜೊತೆಯಾಗುವುದೇ ನೆಗೆಟಿವ್ ಥಿಂಕಿಂಗ್. ಇಷ್ಟಾಗಿಬಿಟ್ಟರೆ, ನೆಮ್ಮದಿ ನಮ್ಮ ಹತ್ತಿರ ಸುಳಿಯುವುದಿಲ್ಲ. ನಾಳೆ ಏನೋ ಆಗಬಾರದ್ದು ಆಗಿಬಿಡುತ್ತದೆ ಎಂಬ ಯೋಚನೆ ಪದೇಪದೆ ಬರತೊಡಗಿ ಮನಸ್ಸು ನೆಗೆಟಿವ್ ಯೋಚನೆಗಳಿಂದಲೇ ಬೆಂದು ಹೋಗುತ್ತದೆ. ಇಂಥ ಸಂದರ್ಭದಲ್ಲಿ ಎದೆಗುಂದುವ ಬದಲು, ಸಮಸ್ಯೆ ಅಂತ ಆಗೋದು ನಾಳೆ ತಾನೇ?
ಆಗ ನೋಡಿಕೊಳ್ಳೋಣ, ಈ ಕ್ಷಣವನ್ನು ನೆಮ್ಮದಿಯಾಗಿ ಕಳೆಯೋಣ ಅಂತ ನಿರ್ಧರಿಸಿಬಿಟ್ಟರೆ, ಮನಸ್ಸು ತಂತಾನೇ ಕೂಲ್ ಆಗುತ್ತದೆ. ರಾತ್ರಿ ನಿದ್ದೆ ಬರುತ್ತದೆ. ಒಟ್ಟಾರೆ ಆರೋಗ್ಯವೂ ಚೆನ್ನಾಗಿರುತ್ತದೆ. ಚೆನ್ನಾಗಿ ಬಾಳಬೇಕು. ಸಂಪಾದನೆ- ಉಳಿತಾಯವನ್ನು ಹೆಚ್ಚಾಗಿಯೇ ಮಾಡಬೇಕು. ಉಳಿಸಿದ್ದನ್ನು, ಕಷ್ಟ ಕಾಲದಲ್ಲಿ ಖರ್ಚು ಮಾಡಬೇಕು. ಹೀಗೆ, ಎಲ್ಲ ಯೋಚನೆಯೂ ಪಾಸಿಟೀವ್ ಆಗಿಯೇ ಇರಲಿ. ಕೊರೊನಾ ನಂತರ ದಿನಗಳಲ್ಲಿ ಕಷ್ಟ ಜೊತೆಯಾದರೆ ಅದನ್ನು ಹೇಗೆ ಎದುರಿಸಬಹುದು ಎಂದೂ ಈಗಲೇ ಯೋಚಿಸಿ. ಆದರೆ, ಯಾವುದೇ ಕಾರಣಕ್ಕೂ ನೆಗೆಟಿವ್ ಸಂಗತಿ ಗಳನ್ನು ಜೊತೆಗಿಟ್ಟು ಕೊಂಡು, ಎದೆಯೊಳಗೆ ಭಯದ ಒಲೆ ಉರಿಯಲು ಬಿಡಬೇಡಿ.