Advertisement

ಅಮ್ಯೂಸ್‌ಮೆಂಟ್‌ ಪಾರ್ಕ್‌ನಿಂದ ಬದುಕು ಕಟ್ಟಿಕೊಂಡವರು

04:36 PM Nov 19, 2017 | Team Udayavani |

ಬೆಳ್ತಂಗಡಿ: ಭಾರೀ ಪ್ರಮಾಣದ ಜನಸ್ತೋಮ ಅಲ್ಲಿ ಸೇರಿತ್ತು. ಎತ್ತ ನೋಡಿದರೂ ಜನಸಾಗರ. ನೋಡ ನೋಡುತ್ತಿದ್ದಂತೆಯೇ ಒಂದು ಬಂಡಿ ತಿರುಗಲಾರಂಭಿಸಿತು. ನೂಕು ನುಗ್ಗಲಿನ ನಡುವೆ ಜನರು ನಾ ಮುಂದು ತಾ ಮುಂದು ಎಂದು ತಿರುಗಣಿ ಚಕ್ರಬಂಡಿಯ ಮೇಲೆ ಹತ್ತುವ ತವಕದಲ್ಲಿದ್ದರು.

Advertisement

ಈ ದೃಶ್ಯ ಕಂಡುಬಂದದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ನಿರ್ಮಾಣಗೊಂಡಿರುವ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ.

ಇದರ ಹಿಂದೆ ಇರುವ ಕೈಗಳ ಸಂಖ್ಯೆ ಅದೆಷ್ಟೋ. ಹಗಲು ರಾತ್ರಿ ಎನ್ನದೆ ನಿದ್ದೆಕೆಟ್ಟು ಜನರ ಮನರಂಜಿಸುವ ಈ ಜನ ಬಂದಿದ್ದು ದೂರದ ಊರಿನಿಂದ. ಎಲ್ಲಿಂದಲೋ ಬಂದು ಪರ ಊರಿನ ಜಾತ್ರಾ ಮಹೋತ್ಸವಗಳಲ್ಲಿ ಪಾಲ್ಗೊಂಡು, ಜನರನ್ನು ತಮ್ಮೆಡೆಗೆ ಆಕರ್ಷಿಸುವುದು ಸುಲಭದ ಕೆಲಸವಲ್ಲ. ಈ ಸಾಹಸವನ್ನು ಮಾಡುತ್ತಿರುವುದು ಅಮ್ಯೂಸ್‌ಮೆಂಟ್‌ ತಂಡ.

ಪ್ರತೀ ವರ್ಷ ತಮ್ಮ ಹೊಟ್ಟೆಪಾಡಿಗಾಗಿ ಕಾರ್ಯನಿರ್ವಹಿಸುವ ಇವರ ಜೀವನ ವಿಧಾನ ಕಷ್ಟಕರ. ಒಂದು ವಾರದ ಹಿಂದೆ
ಧರ್ಮಸ್ಥಳಕ್ಕೆ ಬಂದ ಇವರು ತಮಗೆ ನೀಡಿದ 8 ಎಕರೆ ವ್ಯಾಪ್ತಿಯ ಜಾಗದಲ್ಲಿ ಜೀವನದ ಬಂಡಿಯನ್ನು ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನಟ್‌, ಬೋಲ್ಟ್‌ಗಳ ಮೂಲಕ ಉಪಕರಣಗಳನ್ನು ಕಟ್ಟುವ ಇವರು, ಅವುಗಳ ಚಲಾವಣೆಗಾಗಿ ಡೀಸೆಲ್‌ ಚಾಲಿತ ಯಂತ್ರ ಬಳಸುತ್ತಾರೆ.

ಬದುಕಲು ಕಷ್ಟ. ಆದರೂ ಇದು ವಂಶ ಪಾರಂಪರ್ಯವಾಗಿ ಬಂದ ಕುಲಕಸುಬು ಎನ್ನುವ ಇವರಿಗೆ ಬೇರೆ ಕ್ಷೇತ್ರಗಳಲ್ಲಿ
ಕಾರ್ಯನಿರ್ವಹಿಸುವ ಆಸಕ್ತಿಯಿದೆ. ಆದರೆ ಹಣದ ಕೊರತೆಯಿಂದಾಗಿ ಇದೇ ಕೆಲಸಕ್ಕೆ ಒಗ್ಗಿಕೊಂಡಿದ್ದಾರೆ. ಇವರಲ್ಲಿ ಪ್ರತೀ ವರ್ಷ ಧರ್ಮಸ್ಥಳಕ್ಕೆ ಆಗಮಿಸುವವರು. ಕಳೆದ ಬಾರಿ ಇದಕ್ಕೆ 50 ರೂ. ಶುಲ್ಕ ನಿಗದಿ ಪಡಿಸಲಾಗಿತ್ತು. ಆದರೆ ಈ ಬಾರಿ ಶುಲ್ಕವನ್ನು 70ರೂ.ಗೆ ಏರಿಸಲಾಗಿದೆ. ಇದರಿಂದಾಗಿ ಅಲ್ಲಿಗೆ ಬರುವ ಜನರ ಸಂಖ್ಯೆಯೂ ಕಡಿಮೆಯಾಗುತ್ತಿದೆ.

Advertisement

ಜಯಂಟ್‌ ವೀಲ್‌, ಕ್ರಾಸ್‌ ವ್ಹೀಲ್‌, ಕೊಲಂಬಸ್‌, ಸಲಾಂಬು, ಬ್ರೇಕ್‌ಡಾನ್ಸ್‌, ಮರಣ ಬಾವಿ, ಬೌನ್ಸೀ , ಚಾಂದ್‌ತಾರಾ,
ಮಹಾರಾಜಾ ಟ್ರೈನ್‌, ಕಮಾಂಡೋ, ಚಕ್ರಿ, ಟ್ರೈಗನ್‌, ಜಂಪಿಂಗ್‌ ಸೇರಿದಂತೆ ಹಲವಾರು ರೀತಿಯ ಮನೋರಂಜನಾತ್ಮಕ ಆಟಗಳನ್ನು ಇದು ಒಳಗೊಂಡಿದೆ.

80 ಜನರ ತಂಡ
ಮಹಾರಾಷ್ಟ್ರ, ಬಿಹಾರ, ಚಿತ್ರದುರ್ಗ, ಮೈಸೂರು, ಶಿರಸಿಯಿಂದ ಆಗಮಿಸಿರುವ ಈ ತಂಡದಲ್ಲಿ ಸುಮಾರು 80 ಜನರಿದ್ದಾರೆ. ತಮ್ಮ ಊರಿನಿಂದ ಉಪಕರಣಗಳನ್ನು ಧರ್ಮಸ್ಥಳಕ್ಕೆ ತರಲು 1 ಲಾರಿಗೆ ಸುಮಾರು 13 ಸಾವಿರ ಬಾಡಿಗೆಯಿದೆ. ಈ ಪಾರ್ಕ್‌ನ ಹಿಂದೆ ಬಿಡಾರ ಹೂಡಿರುವ ಇವರು ಅಲ್ಲಿಯೇ ಊಟ, ವಸತಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.

ಮೇಧಾ ರಾಮಕುಂಜ

Advertisement

Udayavani is now on Telegram. Click here to join our channel and stay updated with the latest news.

Next