Advertisement

ಅಧ್ಯಾತ್ಮ ಸಾಧನೆಯಿಂದ ಬದುಕು ಸುಂದರ: ಬಸವಲಿಂಗ ಶ್ರೀ

10:12 AM Jul 26, 2017 | Team Udayavani |

ಬೀದರ: ಶರೀರವು ಶ್ರೀಗಂಧದ ಪೆಟ್ಟಿಗೆಯಂತಿದ್ದು, ಅದರಲ್ಲಿರುವ ವಿಷಯಾಸಕ್ತ ಅರಿಷಡ್ವರ್ಗಗಳನ್ನು ಹೊರಹಾಕಿ ಅಧ್ಯಾತ್ಮಿಕ ಸಾಧನೆ ಮಾಡಿ ಬದುಕು ಸುಂದರಗೊಳಿಸಿಕೊಳ್ಳಬೇಕು ಎಂದು ಭಾಲ್ಕಿಯ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು. 

Advertisement

ನಗರದ ಡಾ| ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಶ್ರಾವಣಮಾಸ ನಿಮಿತ್ತ ಆಯೋಜಿಸಿರುವ “ಬಸವ ತತ್ವ ದರ್ಶನ’ ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿಯ ಸೌಂದರ್ಯದ ಮಧ್ಯದಲ್ಲಿ ದೇವರು ನಮ್ಮನ್ನು ಹುಟ್ಟಿಸಿದ್ದಾನೆ. ಶರಣರ ಅನುಭಾವಗಳು ನಮಗೆ ಬದುಕಿನ ಸುಂದರ ಪಾಠ ಕಲಿಸುತ್ತವೆ. ಶರಣರ- ಸಂತರ ಸತ್ಯದ ನುಡಿಗಳೇ ದೇವತ್ವವನ್ನು ಪಡೆಯುವ ಮಾರ್ಗವಾಗಿದೆ. ಶರಣರ-ಸಂತರ ಬದುಕು ಸುಖ ದುಃಖದ ಸಮ್ಮಿಲತದಿಂದ ಕೂಡಿದ್ದಾಗಿದೆ. ಅವರ ಬದುಕು ನಮಗೆ ಸಂಜೀವಿನಿ ಇದ್ದಂತೆ ಎಂದರು.

ನಗರಸಭೆ ಉಪಾಧ್ಯಕ್ಷೆ ಶಾಲಿನಿ ಚಿಂತಾಮಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿ ಶೈಕ್ಷಣಿಕ, ಪ್ರಸಾದ ದಾಸೋಹ, ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ಹಿರೇಮಠ ಸಂಸ್ಥಾನ ತೊಡಗಿಸಿಕೊಂಡಿದ್ದು, ಡಾ| ಬಸವಲಿಂಗ ಪಟ್ಟದ್ದೇವರು ಬಡ ದಿನ ದಲಿತ ಮಕ್ಕಳ ಕಣ್ಮಣಿಯಾಗಿದ್ದಾರೆ ಎಂದರು. ನಾಗರಿಕರು ಪ್ಲಾಸ್ಟಿಕ್‌ ಬಳಸುವುದನ್ನು ನಿಷೇಧಿ ಸಿ, ಬಟ್ಟೆ ಚೀಲ ಬಳಸುವ ಮನೋಭಾವವುಳ್ಳವರಾಗಿ ಪ್ರಕೃತಿಯಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು. 

ಪ್ರವಚನಕಾರರಾದ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿ, ನಿಜವಾದ ಬದುಕಿನ ಅರಿವು ಪಡೆಯುವುದು ಪ್ರವಚನದ ಉದ್ದೇಶವಾಗಿದೆ. ಶರಣರ, ಸಂತರ, ದೇವರ ಚಿಂತನೆ ಇದಾಗಿದೆ. ಬದುಕಿನ ಮೌಲ್ಯಗಳನ್ನು ಅರಿತುಕೊಳ್ಳಬೇಕಾದರೆ ಸಾಧಕನಿಗೆ ಚಿಂತನೆಯ ಅವಶ್ಯಕತೆ ಇದೆ. ಬಸವ ತತ್ವ ಚಿಂತನೆಯಿಂದ ಬದುಕಿನ ವಾಸ್ತವಿಕ ದರ್ಶನವಾಗಲು ಸಾಧ್ಯವಿದೆ ಎಂದರು.
ಬಾಬು ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಡ ಮಕ್ಕಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಬೇಕಾದರೆ
ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕು. ಮತ್ತು ವಿಶ್ವಕ್ಕೆ ಬಸವ ತತ್ವ ಸಂದೇಶ ತಲುಪಬೇಕಾದರೆ ಧರ್ಮಕ್ಕೆ ಮಾನ್ಯತೆ ದೊರಕಬೇಕೆಂದು ಹೇಳಿದರು. ಡಾ| ವೈಜಿನಾಥ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. 

ಪ್ರೊ| ಎಸ್‌.ಬಿ. ಬಿರಾದಾರ, ಪಿ. ಸಂಗಪ್ಪಾ, ಕಾಮಶೆಟ್ಟಿ ಚಿಕಬಸೆ ವೇದಿಕೆಯಲ್ಲಿದ್ದರು. ಪ್ರಮುಖರಾದ ಮಲ್ಲಿಕಾರ್ಜುನ ಹುಡಗೆ, ಸಂಗ್ರಾಮಪ್ಪಾ ಬಿರಾದಾರ, ಶ್ರೀಕಾಂತ ಬಿರಾದಾರ, ಶಿವಕುಮಾರ ಭಾಲ್ಕೆ, ಶ್ರೀಕಾಂತ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ಪ್ರೊ| ಉಮಾಕಾಂತ ಮೀಸೆ ಸ್ವಾಗತಿಸಿದರು. ಬಸವರಾಜ ರುದನೂರ ನಿರೂಪಿಸಿದರು. ಯೋಗೇಂದ್ರ ಯದ್ಲಾಪುರೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next