ಮಹಾನಗರ: ಮುಖ್ಯ ಮಂತ್ರಿಯ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ನೇತೃತ್ವದಲ್ಲಿ 4ನೇ ವರ್ಷದ ಸೌಹಾರ್ದ ಸಭೆ, ಇಫ್ತಾರ್ ಕೂಟ ನಗರದ ಸಭಾಗಂಣವೊಂದರಲ್ಲಿ ನಡೆಯಿತು.
ಐವನ್ ಡಿ’ಸೋಜಾ ಮಾತನಾಡಿ, ಹಲವು ವರ್ಷಗಳಿಂದ ರಮ್ಜಾನ್, ದೀಪಾವಳಿ, ಕ್ರಿಸ್ಮಸ್ ಸೌಹಾರ್ದ ಸಭೆಗಳನ್ನು ಆಯೋಜಿಸುತ್ತಾ ಬಂದಿದ್ದೇನೆ. ಇದಕ್ಕೆ ನಗರದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮಾಜದಲ್ಲಿ ಎಲ್ಲರೂ ಸೌಹಾರ್ದದಿಂದ ಬದುಕಬೇಕೆಂಬುದು ಇದರ ಉದ್ದೇಶ ಎಂದರು.
ನಾವು ಎಲ್ಲರ ಹಬ್ಬಗಳನ್ನೂ ಆಚರಿ ಸುತ್ತೇವೆ. ನಗರದಲ್ಲಿ ಎಲ್ಲ ಧರ್ಮಗಳ ಜನತೆಯೂ ಒಗ್ಗಟ್ಟಾಗಿದ್ದಾರೆ ಎನ್ನುವುದು ಇಂತಹ ಸೌಹಾರ್ದ ಸಭೆಗಳ ಉದ್ದೇಶವಾಗಿದೆ. ಸೌಹಾರ್ದದಿಂದ ಬಾಳುವುದರಿಂದ ಉತ್ಕೃಷ್ಟ ಬದುಕನ್ನು ನಡೆಸಬಹುದು. ಸರ್ವಧರ್ಮಗಳಲ್ಲೂ ಸಹಿಷ್ಣುತೆ ಇರಬೇಕು ಎಂದರು.
ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‌ನ ಧರ್ಮಗುರು ವಂ| ಜೆ.ಬಿ. ಸಲ್ಡಾನ್ಹಾ, ಎಸ್‌ಡಿಎಂ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ದೇವರಾಜ್, ದ.ಕ. ಜಿಲ್ಲಾ ಜಮಾಅತ್ ಇಸ್ಲಾಂ ಹಿಂದ್‌ನ ಅಧ್ಯಕ್ಷ ಮುಹಮ್ಮದ್ ಕುಂಞಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಮಾಜಿ ಸಚಿವ ರಮಾನಾಥ ರೈ ಶುಭ ಕೋರಿದರು.
ಜಪ್ಪಿನಮೊಗರು ಜುಮ್ಮಾ ಮಸೀದಿಯ ಖತೀಬರಾದ ಖಲಂದರ್ ಶಾಫಿ ಮದನಿ, ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ರಶೀದ್, ಮಂಗಳೂರು ಮೂಡಾ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಮಾಜಿ ಮೇಯರ್‌ಗಳಾದ ಭಾಸ್ಕರ್ ಕೆ., ಎಂ. ಶಶಿಧರ್ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ನವೀನ್ ಡಿ’ಸೋಜಾ, ಡಿ.ಕೆ. ಅಶೋಕ್ ಕುಮಾರ್, ಆಶಾ ಡಿ’ಸಿಲ್ವಾ, ಬಸ್ ಉದ್ಯಮಿ ಜಯರಾಮ ಶೇಖ, ಮುಹಮ್ಮದ್ ಗುಲಾಂ, ಜೆ.ಎ. ಸಲೀಂ, ಶಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.
ಜಪ್ಪಿನಮೊಗರು ಜುಮ್ಮಾ ಮಸೀದಿಯ ವಿದ್ಯಾರ್ಥಿ ಅಹ್ಮದ್ ಸಹದ್ ಕಿರಾಅತ್ ಪಠಿಸಿದರು.