Advertisement
ಹರಿಣಿ ಬಹಳ ಸುಸ್ತಾಗಿದ್ದರು. ನಿದ್ದೆ ಬಾರದ ಅದೆಷ್ಟೋ ರಾತ್ರಿಗಳನ್ನು ಕಳೆದಿರುವುದು ಅವರಿಗೆ ಮಾಮೂಲು. ಆದರೂ, ಕಳೆದ ಒಂದು ವಾರದಿಂದ ನಿದ್ದೆಗೆಟ್ಟಿರುವುದಕ್ಕೆ ಬೇರೆ ಕಾರಣವಿದೆ. ಸಾಯುವ ಯೋಚನೆ ಹತ್ತಿಕ್ಕಿದಷ್ಟೂ ಪದೇ ಪದೆ ಕಾಡುತ್ತಿತ್ತು. ಇಪ್ಪತ್ತೆರಡು ವರ್ಷದ ಮಗಳಿಗೆ ಮದುವೆ ಮಾಡದೆ ಅಸಹಜವಾಗಿ ಸತ್ತರೆ, ಅದು ಮಗಳ ಮನಸ್ಸಿನ ಮೇಲೆ ದೀರ್ಘಕಾಲದ ಪರಿಣಾಮ ಬೀರಬಹುದೇನೋ ಎಂಬ ಚಿಂತೆ; ವಯಸ್ಸಿಗೆ ಬಂದ, ಬುದ್ಧಿ ಇರುವ ಇಪ್ಪತ್ತು ವರ್ಷದ ಮಗನಿಗೆ ಮೋಸ ಮಾಡಿದಂತಾಗುತ್ತದಲ್ಲ ಎಂದು ಬೇಸರ. ಸಾಕು ಈ ಜೀವನ; ಸತ್ತು ಹೋಗಿಬಿಡೋಣ ಅಂತ ಒಳ ಮನಸ್ಸು ಚೀರಿದರೂ, ತೋರ ಇನ್ನೊಂದು ಮನಸ್ಸು ಸಾಯುವುದು ಬೇಡವೆಂದು ಜೀವನದ ಕರ್ತವ್ಯಗಳನ್ನು ನೆನಪಿಸುತ್ತಿತ್ತು.
Related Articles
Advertisement
ಚೆನ್ನಾಗಿ ಬದುಕಬೇಕೆಂಬ ಉತ್ಕಟ ಆಕಾಂಕ್ಷೆ ಇದ್ದರೂ, ಜೀವನದ ಯಾವ ಹಂತದಲ್ಲೂ ತೃಪ್ತಿಯಾಗಿ ನಿದ್ದೆ ಮಾಡ ಹರಿಣಿಗೆ, ಚಿರನಿದ್ರೆಗೇ ಜಾರಿಬಿಡೋಣ ಎಂದು ಅನಿಸಿದೆ. ನಾನು ಸೋತೆ ಎನಿಸಿದವರಿಗೆ, ಬದುಕುವ ಹುಮ್ಮಸ್ಸು ಕಳೆದುಕೊಂಡವರಿಗೆ, ಮಾರ್ಗ ದರ್ಶನ ನೀಡುವುದು ಸವಾಲೇ ಸರಿ. ಅಂಥವರಿಗೆ “ಮಕ್ಕಳಿಗಾಗಿ ಬದುಕಿ’ ಎಂಬ ಸಲಹೆಗಿಂತ “ನಿಮಗಾಗಿ ಬದುಕಿ’ ಎಂಬ ಉತ್ತೇಜನ ನೀಡಬೇಕು. ದೊಡ್ಡವರ ಸೇವೆ ಮಾಡಿದರೆ ದೇವರು ವರ ನೀಡುತ್ತಾನೆ ಎಂದು ಹೇಳಬೇಡಿ. ಯಾಕೆಂದರೆ, ನಿಸ್ವಾರ್ಥ ಬದುಕು ತೃಪ್ತಿಯನ್ನು ಕೊಡಲಾರದು. ಸ್ವಲ್ಪ ಸ್ವಾರ್ಥವನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ವೃದ್ಧ ಅತ್ತೆ-ಮಾವನನ್ನು ಹದಿನೈದು ದಿನಗಳವರೆಗೆ ನೆಂಟರ ಮನೆಗೆ ಹೋಗಲು ಹೇಳಿದೆ. ಹರಿಣಿಯೂ ಮನೆಯಿಂದ ಹೊರಗೆ ಹೋಗುವ ಸಲುವಾಗಿ ಮಹಿಳಾ ಸಮಾಜಕ್ಕೆ ಸೇರಿಕೊಂಡಿದ್ದಾರೆ. ಮನೆಯಿಂದಲೇ ಮಾಡುತ್ತಿದ್ದ ಆನ್‌ಲೈನ್ ಕೆಲಸದತ್ತ ಹೆಚ್ಚೆಚ್ಚು ಗಮನ ಕೊಡುತ್ತಿದ್ದಾರೆ. ದುಃಖವನ್ನು ಆಗಾಗ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಇದನ್ನು venting out ಎಂದು ಕರೆಯುತ್ತೇವೆ. ನೊಂದವರಿಗೆ ಸಲಹೆ ಕೊಡುವುದಕ್ಕಿಂತ, ಯಥಾವಥ್ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವುದೇ ಸಲಹಾ ಮನೋವಿಜ್ಞಾನ. ಇನ್ನೊಬ್ಬರು ತಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎನ್ನುವುದೇ ನೊಂದ ಮನಸ್ಸಿಗೆ ಸಂತೃಪ್ತಿ ನೀಡುತ್ತದೆ.
ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ